ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪದವಿ ನಿರಾಕರಿಸಿದ ಹಾರ್ವರ್ಡ್ ವಿವಿ

ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪದವಿ ನಿರಾಕರಿಸಿದ ಹಾರ್ವರ್ಡ್ ವಿವಿ

ನವದೆಹಲಿ, ಜೂ. 10: ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಪದವಿ ನೀಡಲು ನಿರಾಕರಿಸಿದೆ ಎಂದು ಅಲ್ ಜಝೀರಾ ವರದಿ ಮಾಡಿದೆ. ವಿವಿಯ 2024ನೇ ಸಾಲಿನ ಘಟಿಕೋತ್ಸವ ಮುಗಿದು ಎರಡು ವಾರಗಳು ಕಳೆದಿದ್ದು, ಆದರೂ ಅಸ್ಮರ್ ಅಸ್ರಾರ್ ಸಫಿ (23) ಎಂಬ ವಿದ್ಯಾರ್ಥಿ ತಾನು ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಓದಿದ್ದಕ್ಕೆ ಪದವಿ ಸ್ವೀಕರಿಸಲು ಹೆಣಗಾಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಮೂಲತಃ ಪಾಕಿಸ್ತಾನದ ಲಾಹೋರಿನವರಾದ ಸಫಿ ಜೊತೆ ಇನ್ನೂ 12 ವಿದ್ಯಾರ್ಥಿಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇವರೆಲ್ಲರೂ ವಿಶ್ವದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಹಾರ್ವರ್ಡ್‌ನಲ್ಲಿ ತಮ್ಮ ವ್ಯಾಸಂಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಆದರೆ, ಕನಿಷ್ಠ ಒಂದು ವರ್ಷದವರಿಗೆ ಪದವಿಗಳನ್ನು ನೀಡಲಾಗುವುದಿಲ್ಲ ಎಂದು ಅಲ್ ಜಝೀರಾ ವರದಿ ಹೇಳಿದೆ.

ವಿಶ್ವ ವಿದ್ಯಾನಿಲಯದ ಉನ್ನತ ಆಡಳಿತ ಮಂಡಳಿಯಾದ ಹಾರ್ವರ್ಡ್ ಕಾರ್ಪೊರೇಷನ್, ಕಳೆದ ತಿಂಗಳು ವಿಶ್ವ ವಿದ್ಯಾನಿಲಯದಲ್ಲಿ ಮೂರು ವಾರಗಳ ಕಾಲ ನಡೆದ ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಮೇ 23 ರಂದು ನಡೆದ ಈ ವರ್ಷದ ಪದವಿ ಪ್ರಧಾನ ಸಮಾರಂಭದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆಯುವುದನ್ನು ನಿಷೇಧಿಸಿತ್ತು.

ಸಲ್ಲಿಸಿರುವ ಮೇಲ್ಮನವಿಯ ಕುರಿತು ನಿರ್ಧಾರ ಹೊರ ಬೀಳಲು ಕಾಯುತ್ತಿದ್ದೇನೆ” ಎಂದು ಹಾರ್ವರ್ಡ್ ಕಾಲೇಜಿನಲ್ಲಿ ಸಾಮಾಜಿಕ ಅಧ್ಯಯನಗಳು ಮತ್ತು ಜನಾಂಗೀಯತೆ, ವಲಸೆ, ಹಕ್ಕುಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿ 23 ವರ್ಷದ ಸಫಿ ಹೇಳಿದ್ದಾರೆ. ನಾನು ರೋಡ್ಸ್ ಸ್ಕಾಲರ್ ಆಗಿದ್ದೇನೆ ಮತ್ತು ನನ್ನ ಹಾರ್ವರ್ಡ್ ಪದವಿಯನ್ನು ಒಂದು ವರ್ಷ ಕಾಲ ತಡೆಹಿಡಿದಿರುವುದರಿಂದ ಆಕ್ಸ್‌ಫರ್ಡ್ ವಿವಿಯಲ್ಲಿ ಮ್ಯಾಟ್ರಿಕ್ಯುಲೇಷನ್ ಮಾಡಬಹುದೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.
ಶ್ರದ್ಧಾ ಜೋಶಿ ಹಾರ್ವರ್ಡ್ ಕಾಲೇಜಿನ ತನ್ನ ಬೋಧಕ ವೃಂದದ ಬೆಂಬಲದ ಹೊರತಾಗಿಯೂ ಇದೇ ಸ್ಥಿತಿಯನ್ನು ಎದುರಿಸುತ್ತಿರುವ ಇನ್ನೋರ್ವ ವಿದ್ಯಾರ್ಥಿನಿಯಾಗಿದ್ದಾರೆ. ನಾನು ಮೇಲ್ಮನವಿ ಸಲ್ಲಿಸಿದ್ದು, ವಿವಿಯಿಂದ ಪ್ರತಿಕ್ರಿಯೆ ಬರಲು ಕಾಯುತ್ತಿದ್ದೇನೆ. ನಾವು ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಪ್ರಕ್ರಿಯೆಯ ಅಸ್ಪಷ್ಟತೆಯಿಂದಾಗಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗೊಂದಲದಲ್ಲಿದ್ದಾರೆ ಮತ್ತು ಮೇಲ್ಮನವಿಗಳಿಗೆ ಟೈಮ್‌ಲೈನ್ ಕೂಡ ಸ್ಪಷ್ಟವಿಲ್ಲ ಎಂದು ಶ್ರದ್ಧಾ ತಿಳಿಸಿದ್ದಾರೆ. ಟೆಕ್ಸಾಸ್‌ನಲ್ಲಿ ಹುಟ್ಟಿ ಬೆಳೆದ ಜೋಶಿ ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಯೋಜಿಸುತ್ತಿದ್ದರು. ಆದರೆ, ಅವರ ಭವಿಷ್ಯವು ಈಗ ಅನಿಶ್ಚಿತವಾಗಿದೆ ಎಂದು ಹೇಳಿದ್ದಾರೆ.

ಹಾರ್ವರ್ಡ್-ಯುಕೆ ಫೆಲೋಶಿಪ್‌ನೊಂದಿಗೆ ನಾನು ಕ್ಯಾಂಬ್ರಿಡ್ಜ್ ವಿವಿಯನ್ನು ಸೇರಬೇಕಿತ್ತು. ಆದರೆ, ಪದವಿ ಕೈಗೆ ಸಿಗದೆ ನನ್ನ ಸ್ಥಿತಿ ಡೋಲಾಯಮಾನವಾಗಿದೆ. ಪಾರದರ್ಶಕತೆಯ ಕೊರತೆ ಮತ್ತು ಆಡಳಿತದ ಕಳಪೆ ಸಂವಹನದಿಂದಾಗಿ ನಮ್ಮ ಮುಂದಿನ ಹೆಜ್ಜೆಗಳು ಹೇಗಿರಲಿವೆ ಎನ್ನುವುದನ್ನು ಊಹಿಸಲೂ ಕಷ್ಟವಾಗಿದೆ ಎಂದು ಶ್ರದ್ಧಾ ಅಳಲು ತೋಡಿಕೊಂಡಿದ್ದಾರೆ ಎಂದು ಅಲ್‌ ಜಝೀರಾ ತಿಳಿಸಿದೆ. ಯುಎಸ್‌ ಇತರ ಶೈಕ್ಷಣಿಕ ಕೇಂದ್ರಗಳಂತೆ ಹಾರ್ವರ್ಡ್ ವಿವಿಯು ಕೂಡ ಪ್ಯಾಲೆಸ್ತೀನ್ ಪರ ಪ್ರತಿಭಟನೆಯಿಂದ ಗಮನ ಸೆಳೆದಿದೆ. ಇಲ್ಲಿನ ವಿದ್ಯಾರ್ಥಿಗಳು ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣದ ವಿರುದ್ದ ಧ್ವನಿಯೆತ್ತಿದ್ದಾರೆ.

Previous Post
ಮೋದಿ ಸಂಪುಟದಿಂದ ಹೊರಬರಲಿದ್ದಾರಾ ಸುರೇಶ್ ಗೋಪಿ?
Next Post
ಮಣಿಪುರ ಹಿಂಸಾಚಾರ: ಸಿಎಂ ಬಿರೇನ್ ಸಿಂಗ್ ಬೆಂಗಾವಲು ಪಡೆ ಮೇಲೆ ದಾಳಿ

Recent News