ಬಿ.ಎಸ್ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ಸಂಬಂಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಅನ್ನು ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯವು ಜಾರಿ ಮಾಡಿದೆ. ಯಾವುದೇ ಕ್ಷಣದಲ್ಲಿ ಅವರ ಬಂಧನವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇನ್ನು ಸಂತ್ರಸ್ತೆಯ ಪುತ್ರ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶಿಸಬೇಕು ಎಂದು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರನ್ನು ಬಂಧಿಸಿಯೇ ವಿಚಾರಣೆ ಮಾಡಬೇಕು ಎಂದು ಮನವಿ ಮಾಡಿದ್ದರು. ಪೋಕ್ಸೋ ಕೇಸ್ ಕುರಿತು ವಿಚಾರಣೆ ಸಿಐಡಿ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರೂ ಬಿಎಸ್ವೈ ಹಾರಾಗಿರಲಿಲ್ಲ ಎಂಬ ಆರೋಪವಿದೆ. ಅಲ್ಲದೇ ಪೋಕ್ಸೋ ಪ್ರಕರಣವನ್ನು ರದ್ದು ಮಾಡಬೇಕು ಎಂದು ಬಿಎಸ್ವೈ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಬಿಎಸ್ವೈ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್ನಲ್ಲಿ ಎಫ್ಐಆರ್ ದಾಖಲಾಗಿತ್ತು. ಫೆಬ್ರವರಿಯಲ್ಲಿ ತಮ್ಮ ಪುತ್ರಿಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆಪಾದಿಸಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದರು.