ರೈಲು ಅಪಘಾತ ಮೋದಿ ಸರ್ಕಾರದ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ ಯೂಥ್ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಾಗ್ದಾಳಿ

ರೈಲು ಅಪಘಾತ ಮೋದಿ ಸರ್ಕಾರದ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ ಯೂಥ್ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಾಗ್ದಾಳಿ

ನವದೆಹಲಿ : ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಸಂಭವಿಸಿದ ರೈಲು ಅಪಘಾತ ಮೋದಿ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಒಂದೆಡೆ ದೇಶದಲ್ಲಿ ರೈಲು ಅಪಘಾತಗಳು ನಿಲ್ಲುತ್ತಿಲ್ಲ, ಮತ್ತೊಂದೆಡೆ ರೈಲ್ವೇ ಸಚಿವರು ಎಲ್ಲಾ ಜವಾಬ್ದಾರಿಗಳಿಂದ ದೂರವಾಗಿ ರೈಲ್ವೆಯ ಪೊಳ್ಳು ಜಾಹೀರಾತು ಭರವಸೆ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಯೂಥ್ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಸ್ಮರಣಾರ್ಥ ಭಾರತೀಯ ಯುವ ಕಾಂಗ್ರೆಸ್ ಇಂದು ಕ್ಯಾಂಡಲ್ ಮಾರ್ಚ್ ಆಯೋಜಿಸಿತ್ತು, ಇಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಟೀಕಿಸಿದರು.

ಸಿಎಜಿ ತನ್ನ ವರದಿಯೊಂದರಲ್ಲಿ ಭದ್ರತೆಗೆ ಬಳಸಬೇಕಾದ ನಿಧಿಯನ್ನು ಅಧಿಕಾರಿಗಳಿಗೆ ಐಷಾರಾಮಿ ವಸ್ತುಗಳನ್ನು ಖರೀದಿಸಲು ಬಳಸಲಾಗುತ್ತಿದೆ ಎಂದು ಹೇಳಿದೆ‌. ಈ ನಿಧಿಯನ್ನು ತಪ್ಪು ರೀತಿಯಲ್ಲಿ ಬಳಸಲಾಗಿದೆ ಎಂದು ವರದಿಯಲ್ಲಿ ಬರೆಯಲಾಗಿದೆ. ಈ ವರದಿಯು ಮೋದಿ ಸರ್ಕಾರದ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ, ಮೋದಿ ಸರಕಾರ ರೈಲ್ವೇ ವ್ಯವಸ್ಥೆಯನ್ನು ಹಾಳುಮಾಡಲು ಹವಣಿಸುತ್ತಿದೆ ಇದನ್ನು ಆದಷ್ಟು ಬೇಗ ತನ್ನ ಸ್ನೇಹಿತರಿಗೆ ಮಾರಬಹುದು ಎಂದರು.

ಕಳೆದ 10 ವರ್ಷಗಳಲ್ಲಿ 1,117 ರೈಲು ಅಪಘಾತಗಳು ಸಂಭವಿಸಿವೆ ಅಂದರೆ ಪ್ರತಿ ತಿಂಗಳು 11 ಅಪಘಾತಗಳು ಸಂಭವಿಸುತ್ತಿವೆ. ಪ್ರತಿ 3 ದಿನಕ್ಕೊಂದು ಅಪಘಾತ ಸಂಭವಿಸುತ್ತಿದೆ. ಈ ದೇಶದಲ್ಲಿ ಮೊದಲು ರೈಲು ಅಪಘಾತಗಳ ನೈತಿಕ ಹೊಣೆಗಾರಿಕೆಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಈಗ ಆ ವ್ಯವಸ್ಥೆ ಇಲ್ಲ ರೈಲ್ವೆ ಮಂತ್ರಿ ‘ನಿಜವಾದ ಮಂತ್ರಿ’ ಆಗಿದ್ಧರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶ್ರೀನಿವಾಸ್ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ಕ್ಯಾಂಡಲ್ ಮಾರ್ಚ್ ನಲ್ಲಿ ಭಾಗವಹಿಸಿ ಅಪಘಾತದಲ್ಲಿ ಮಡಿದ ಪ್ರಯಾಣಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಮೆರವಣಿಗೆಯಲ್ಲಿ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ದೆಹಲಿ ಉಸ್ತುವಾರಿ ಕೊಕೊ ಪಾಧಿ, ದೆಹಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಣವಿಜಯ್ ಸಿಂಗ್ ಲೋಚವ್, ದೆಹಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶುಭಂ ಶರ್ಮಾ ಮತ್ತು ಇತರ ಅನೇಕ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Previous Post
ಪ್ರಿಯಾಂಕಾಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ – ರಾಬರ್ಟ್ ವಾದ್ರಾ
Next Post
ಇಸ್ರೇಲಿ ಪಡೆಗಳಿಂದ ರಾಫಾ ಮೇಲೆ ಆಕ್ರಮಣ: 17 ಸಾವು

Recent News