ಗ್ಯಾರಂಟಿ ಎನ್ನುತ್ತ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕಿದ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ ಕಿಡಿ

ಗ್ಯಾರಂಟಿ ಎನ್ನುತ್ತ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕಿದ ಕಾಂಗ್ರೆಸ್: ಪ್ರಲ್ಹಾದ್‌ ಜೋಶಿ ಕಿಡಿ

ಬೆಂಗಳೂರು: ಗ್ಯಾರಂಟಿ, ಗ್ಯಾರಂಟಿ ಎನ್ನುತ್ತ ಜನರ ದಿಕ್ಕು ತಪ್ಪಿಸಿದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ಅಹಂಕಾರಕ್ಕೆ ರಾಜ್ಯದ ಜನ ತಕ್ಕ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದರು.

ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್ ನೂತನ ಸಂಸದರ ಅಭಿನಂದನೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಒಂದು ವರ್ಷದ ಬಳಿಕ ಇವರಿಗೆ ಜನ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಹೇಳಿದರು.

ಅಪಪ್ರಚಾರದ ಅಬ್ಬರ

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕಿಂತ ಹೆಚ್ಚಾಗಿ ಅಪಪ್ರಚಾರ ಮಾಡಿತು. ಅಬ್ಬರದ ಅಪಪ್ರಚಾರದ ನಡುವೆಯೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತದಾರರು 19 ಸೀಟುಗಳನ್ನು ಗೆಲ್ಲಿಸಿ ಪ್ರಚಂಡ ವಿಜಯ ನೀಡಿದ್ದಾರೆ ಎಂದರು.

ಕಾಂಗ್ರೆಸ್‌ಗೆ ಹೊಟ್ಟೆಕಿಚ್ಚು

ನೆಹರು ಬಳಿಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿ ಆಗಿದ್ದಾರೆ. ಇದೇ ಕಾಂಗ್ರೆಸ್‌ಗೆ ಹೊಟ್ಟೆ ಕಿಚ್ಚು. ಹಾಗಾಗಿ ಮೋದಿ ಅವರ ವಿರುದ್ಧ ಅಪಪ್ರಚಾರದ ಅಬ್ಬರದಲ್ಲಿ ತೊಡಗಿದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಲ್ಹಾದ್‌ ಜೋಶಿ ಗುಡುಗಿದರು.

ಸಾಮಾನ್ಯ ವ್ಯಕ್ತಿ, ಬಡವ, ಹಿಂದುಳಿದ ವರ್ಗದಿಂದ ಬಂದ ಮೋದಿ ಅವರು ಪ್ರಧಾನಿಯಾಗಿ ಹ್ಯಾಟ್ರಿಕ್ ದಾಖಲಿಸುತ್ತಾರೆ ಎಂಬುದನ್ನು ಕಾಂಗ್ರೆಸ್‌ನವರಿಗೆ ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಟೀಕಿಸಿದರು.

ಜನರ ತಲೆ ಮೇಲೆ ಗ್ಯಾರಂಟಿ ಚಪ್ಪಡಿಕಲ್ಲು

ರಾಜ್ಯದಲ್ಲಿ ಜನರ ತಲೆ ಮೇಲೆ ಗ್ಯಾರೆಂಟಿ ಎನ್ನುತ್ತ ಚಪ್ಪಡಿ ಕಲ್ಲು ಎತ್ತಿ ಹಾಕುವ ಕೆಲಸ ಮಾಡಿದ್ದಾರೆ. 20000 ರು. ಕಸಿದುಕೊಂಡು 2000 ರು. ಹಾಕಿ ಜನರನ್ನು ಮೊಸಗೊಳಿಸುತ್ತಿದ್ದಾರೆ, ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದರು.

ಧೂರ್ತ ರಾಜಕಾರಣ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಇಬ್ಬರೂ ಬೆಲೆ ಏರಿಕೆ, ಭ್ರಷ್ಟಾಚಾರದ ಧೂರ್ತ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಕಿಡಿ ಕಾರಿದರು.

ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕಿತ್ತು

ಭ್ರಷ್ಟಾಚಾರದ ರಕ್ತ ಬೀಜಾಸುರನನ್ನು ಬಿತ್ತಿದ್ದೇ ಕಾಂಗ್ರೆಸ್ ಎಂದು ಆರೋಪಿಸಿದ ಜೋಶಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಒಬ್ಬ ಸಚಿವರ ರಾಜೀನಾಮೆ ಪಡೆದರು. ಆದರೆ, ತೆಲಂಗಾಣ ಚುನಾವಣೆಗೆ ಹಣ ರವಾನೆ ಹಿನ್ನೆಲೆಯಲ್ಲಿ ನಿಜವಾಗಿ ಸಿಎಂ – ಡಿಸಿಎಂ ರಾಜೀನಾಮೆ ನೀಡಬೇಕಿತ್ತು ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿದರು ಪ್ರಧಾನಿ ಮೋದಿ ಅವರು ಅಬಕಾರಿ ಸುಂಕ ಇಳಿಸಿ ನೆರವಾದರು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ 3 ರು. ಹೆಚ್ಚಿಸಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆ ಎಳೆದಿದೆ. ಗ್ಯಾರೆಂಟಿ ವೆಚ್ಚ ಸರಿದೂಗಿಸಲು ಎನ್ನುತ್ತಾರೆ ಎಂದು ಅವರು ಖಂಡಿಸಿದರು.

ಸರ್ಕಾರ ಕಿತ್ತೊಗೆಯಿರಿ

ವ್ಯಾಪಕ ಭ್ರಷ್ಟಾಚಾರ, ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿತೊಡಗಿದ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಲು ಬಿಜೆಪಿ-ಜೆಡಿಎಸ್ ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಹೋರಾಟದಲ್ಲಿ ತೊಡಗಬೇಕು ಎಂದು ಇದೇ ವೇಳೆ ಸಚಿವ ಪ್ರಲ್ಹಾದ್‌ ಜೋಶಿ ಕರೆ ನೀಡಿದರು.

Previous Post
ಅಮೆರಿಕದಿಂದ ೧೫೦ ಸ್ಟ್ರೈಕರ್ ಟ್ಯಾಂಕರ ಖರೀದಿ ಮಾಡಲಿರುವ ಭಾರತ !
Next Post
ಸಚಿವನಾದ ಬಳಿಕ 48ನೇ ವಯಸ್ಸಿನಲ್ಲಿ ಪದವಿ ಪಡೆದೆ: ಡಿಸಿಎಂ ಡಿಕೆ.ಶಿವಕುಮಾರ್

Recent News