ವಯನಾಡ್ ಜನತೆಗೆ ರಾಹುಲ್ ಗಾಂಧಿ ಭಾವನಾತ್ಮಕ ಪತ್ರ
ನವದೆಹಲಿ: ಇಂದು ಲೋಕಸಭಾ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಯನಾಡ್ ಜನತೆಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
ವಯನಾಡ್ ಲೋಕಸಭಾ ಕ್ಷೇತ್ರವನ್ನು ತೊರೆಯಲು ನಿರ್ಧರಿಸಿದ ಬಳಿಕ ಸಂಸದರು ಅಲ್ಲಿನ ಜನರಿಗೆ ಈ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಬೇಸರದ ಜೊತೆಗೆ ಸಂತಸವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ನೀವು ನನ್ನನ್ನು ಅಪರಿಮಿತ ಪ್ರೀತಿ ಮತ್ತು ವಾತ್ಸಲ್ಯದಿಂದ ಅಪ್ಪಿಕೊಂಡಿದ್ದೀರಿ. ನೀವು ಯಾವ ರಾಜಕೀಯ ರಚನೆಯನ್ನು ಬೆಂಬಲಿಸಿದ್ದೀರಿ?, ನೀವು ಯಾವ ಸಮುದಾಯಕ್ಕೆ ಸೇರಿದವರು?, ನೀವು ಯಾವ ಧರ್ಮವನ್ನು ನಂಬಿದ್ದೀರಿ? ಅಥವಾ ನೀವು ಯಾವ ಭಾಷೆಯಲ್ಲಿ ಮಾತನಾಡುತ್ತೀರಿ? ಎಂಬುದು ಮುಖ್ಯವಲ್ಲ ಎಂದರು.
ನಾನು ದಿನದಿಂದ ದಿನಕ್ಕೆ ನಿಂದನೆಯನ್ನು ಎದುರಿಸಿದಾಗ ನೀವು ಕೊಟ್ಟ ಪ್ರೀತಿ ನನ್ನನ್ನು ರಕ್ಷಿಸಿತು. ನೀವೇ ನನ್ನ ಆಶ್ರಯ, ನನ್ನ ಮನೆ ಮತ್ತು ನನ್ನ ಕುಟುಂಬವಾಗಿದ್ದೀರಿ. ವಯನಾಡ್ ಕ್ಷೇತ್ರವನ್ನು ತೊರೆಯುತ್ತಿರುವುದಕ್ಕೆ ಬೇಸರವಾಗಿದೆ. ಆದರೆ ಒಂದೇ ಒಂದು ಸಮಾಧಾನವೆಂದರೆ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಆ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ವಯನಾಡಿನ ಜನತೆ ಆಕೆಗೆ ಅವಕಾಶ ನೀಡಿದರೆ ಆಕೆ ಒಳ್ಳೆಯ ಕೆಲಸ ಮಾಡುತ್ತಾಳೆ ಎಂಬುದಾಗಿ ಇದೇ ವೇಳೆ ರಾಹುಲ್ ಗಾಂಧಿ ಭರವಸೆ ನೀಡಿದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಹೆಸರಿಸಿದೆ. ವಯನಾಡ್ ಸಂಸದ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿರುವ ರಾಜೀನಾಮೆಯನ್ನು ಲೋಕಸಭೆ ಸ್ವೀಕರ್ ಇಂದು ಅಂಗೀಕರಿಸಿದ್ದಾರೆ. ಈ ಮೂಲಕ ರಾಗಾ ಅವರು ರಾಯ್ ಬರೇಲಿ ಸಂಸದರಾಗಿ ಮುಂದುವರಿಯಲಿದ್ದಾರೆ.