ಭಾರತ ‘ಹಿಂದೂ ರಾಷ್ಟ್ರವಲ್ಲ’ ಎಂದು ಫಲಿತಾಂಶ ತೋರಿಸಿದೆ: ಸೇನ್

ಭಾರತ ‘ಹಿಂದೂ ರಾಷ್ಟ್ರವಲ್ಲ’ ಎಂದು ಫಲಿತಾಂಶ ತೋರಿಸಿದೆ: ಸೇನ್

ನವದೆಹಲಿ, ಜೂ. 27: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಫಲಿತಾಂಶವು ಭಾರತ ‘ಹಿಂದೂ ರಾಷ್ಟ್ರ’ ಅಲ್ಲ ಎಂಬುವುದನ್ನು ನಿರೂಪಿಸಿದೆ ಎಂದು ಹೇಳಿದ್ದಾರೆ. ಬುಧವಾರ ಸಂಜೆ ಅಮೆರಿಕದಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅಮರ್ತ್ಯ ಸೇನ್ ಅವರು, ಭಾರತವು ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿರುವಾಗ ‘ಮುಕ್ತ ಮನಸ್ಸಿನ ರಾಜಕೀಯ’ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಹಿಂದೆ (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ) ಇದ್ದಂತೆ ವಿಚಾರಣೆಯಿಲ್ಲದೆ ಜನರನ್ನು ಜೈಲಿಗೆ ಹಾಕುವುದು ಮತ್ತು ಶ್ರೀಮಂತರು–ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದೆ. ಅದು ನಿಲ್ಲಬೇಕಿದೆ. ನಾನು ಚಿಕ್ಕವನಿದ್ದಾಗ, ಬ್ರಿಟಿಷರು ನನ್ನ ಚಿಕ್ಕಪ್ಪಂದಿರು ಮತ್ತು ಸೋದರ ಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಿದ್ದರು. ಇದರಿಂದ ಭಾರತ ಮುಕ್ತವಾಗಲಿದೆ ಎಂದು ಆಶಿಸಿದ್ದೆವು. ಆದರೆ, ಕಾಂಗ್ರೆಸ್ ಆಡಳಿತವಾಧಿಯಲ್ಲೂ ಅದು ಮುಂದುವರೆಯಿತು. ಪ್ರಸ್ತುತ ಸರ್ಕಾರದಲ್ಲಿ ಅದು ಅವ್ಯಾಹತವಾಗಿದೆ ಎಂದು ಸೇನ್ ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣದ ಹೊರತಾಗಿಯೂ ಬಿಜೆಪಿ ಫೈಝಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸೇನ್ “ತುಂಬಾ ಹಣ ವ್ಯಯಿಸಿ ರಾಮಮಂದಿರ ನಿರ್ಮಿಸಲಾಯಿತು. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಇದು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ನಡೆಯಬಾರದಿತ್ತು. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಅದರ ನೈಜ ಗುರುತನ್ನು ಬದಲಾಯಿಸುವ ಯತ್ನಗಳು ನಡೆಯುತ್ತಿವೆ” ಎಂದಿದ್ದಾರೆ.

Previous Post
ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣ ಹೆಚ್ಚಳ: ಅಮೆರಿಕಾ
Next Post
ರಾಜಕೀಯ ಮರೆತು ರಾಜ್ಯಕ್ಕಾಗಿ ಕೆಲಸ ಮಾಡೊಣ ಸಂಸದರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ

Recent News