15 ನಿಮಿಷದಲ್ಲಿ ಎರಡು ಬಾರಿ ಸಚಿವರಾದ ಶಾಸಕ

15 ನಿಮಿಷದಲ್ಲಿ ಎರಡು ಬಾರಿ ಸಚಿವರಾದ ಶಾಸಕ

ಭೂಪಾಲ್, ಜು. 9: ಮಧ್ಯ ಪ್ರದೇಶದಲ್ಲಿ ನಡೆದ ವಿಚಿತ್ರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಾಸಕರೊಬ್ಬರು 15 ನಿಮಿಷದಲ್ಲಿ ಎರಡು ಬಾರಿ ಸಚಿವರಾಗಿದ್ದಾರೆ. ಆರು ಬಾರಿ ವಿಜಯಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿದ್ದ ರಾಮ್‌ ನಿವಾಸ್ ರಾವತ್ ಅವರು, ಕಳೆದ ಏಪ್ರಿಲ್‌ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ನಿನ್ನೆ (ಜುಲೈ 8) ಬಿಜೆಪಿ ಸರ್ಕಾದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆದರೆ, ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅಸಾಮಾನ್ಯ ಘಟನೆಗೆ ಸಾಕ್ಷಿಯಾಗಿ ಸುದ್ದಿಯಾಗಿದೆ. ಬೆಳಿಗ್ಗೆ 9 ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್ ಅವರು ರಾವತ್ ಅವರಿಗೆ ಸಚಿವರಾಗಿ ಪ್ರಮಾಣ ವಚನ ಬೋಧಿಸಲು ನಿರ್ಧರಿಸಲಾಗಿತ್ತು. ಬೆಳಿಗ್ಗೆ 9.03ರ ಹೊತ್ತಿಗೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಾಗಿ 15 ನಿಮಿಷಗಳ ನಂತರ ರಾವತ್ ಅವರಿಗೆ ಸಂಪುಟ ಸಚಿವರಾಗಿ ಎರಡನೇ ಪ್ರಮಾಣ ವಚನ ಬೋಧಿಸಲಾಗಿದೆ. ಎರಡು ಬಾರಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಕಾರ್ಯವಿಧಾನದ ಲೋಪಗಳ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಕಾಂಗ್ರೆಸ್‌ ಶಾಸಕರಾಗಿರುವಾಗಲೇ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ವ್ಯಕ್ತಿ ರಾಮ್ ನಿವಾಸ್ ರಾವತ್ ಆಗಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗಿರುವ ರಾಮ್ ನಿವಾಸ್ ರಾವತ್, ಇನ್ನೂ ಕೂಡ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ. ಇಂದಿಗೂ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಮತ್ತು ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಆದರೆ ಬಿಜೆಪಿ ಸೇರಿ ಸಚಿವರಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಮಾಡುವಾಗ ರಾವತ್ ‘ಸಂಪುಟ ಸಚಿವ’ ಎಂದು ಹೇಳುವ ಬದಲಾಗಿ ತಪ್ಪಿ ‘ರಾಜ್ಯ ಸಚಿವ’ ರೆಂದು ಹೇಳಿದ್ದಾರೆ. ಇದರಿಂದಾಗಿ ಎರಡು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡಬೇಕಾಯಿತು ಎಂದು ವರದಿಗಳು ಹೇಳಿವೆ.

ಆದರೆ, ಮೊದಲು ತಪ್ಪಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸ್ಥಾನಕ್ಕೆ ರಾವತ್ ರಾಜೀನಾಮೆ ನೀಡದ ಕಾರಣ ಈಗ ರಾವತ್ ಸಂಪುಟ ಸಚಿವರೂ ಆಗಿದ್ದಾರೆ, ರಾಜ್ಯ ಸಚಿವರೂ ಆಗಿದ್ದಾರೆ. ಸಾಂಪ್ರಾದಾಯಿಕವಾಗಿ ಅವರು ಸಂಪುಟ ಸಚಿವ ಪ್ರಮಾಣ ವಚನ ಸ್ವೀಕಾರ ಮಾಡುವ ಮೊದಲು ತಾನು ತಪ್ಪಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯ ಸಚಿವ ಸ್ಥಾನಕ್ಕೆ ಔಪಚಾರಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ. ಅತ್ತ ಕಾಂಗ್ರೆಸ್‌ಗೆ ರಾಜೀನಾಮೆ ನೀಡದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ರಾವತ್, ಇತ್ತ ಪ್ರಮಾಣ ವಚನದಲ್ಲಿ ಪ್ರಮಾದವೆಸಗಿ ಎರಡು ಸಚಿವರಾಗಿದ್ದಾರೆ. ಒಟ್ಟಿನಲ್ಲಿ ರಾವತ್ ರಾಜಕೀಯ ಗೊಂದಲಮಯವಾಗಿದೆ.

Previous Post
ಮಾಸ್ಕೋಗೆ ತೆರಳುವ ಮೋದಿಗೆ ಮಣಿಪುರಕ್ಕೆ ಹೋಗಲು ಸಮಯವಿಲ್ಲ: ಕಾಂಗ್ರೆಸ್
Next Post
ಹೊಸ ಕ್ರಿಮಿನಲ್ ಕಾನೂನುಗಳ ತಿದ್ದುಪಡಿಗಾಗಿ ಸಮಿತಿ ರಚಿಸಿದ ತಮಿಳುನಾಡು ಸರ್ಕಾರ

Recent News