‘ಜಾತ್ಯತೀತತೆ’ ಸಂವಿಧಾನದ ಮೂಲ ರಚನೆ ಎಂದಿದೆ: ಸುಪ್ರೀಂ

‘ಜಾತ್ಯತೀತತೆ’ ಸಂವಿಧಾನದ ಮೂಲ ರಚನೆ ಎಂದಿದೆ: ಸುಪ್ರೀಂ

ನವದೆಹಲಿ, ಜು. 11: ಭಾರತದ ಸಂವಿಧಾನದ ಪೀಠಿಕೆಯಿಂದ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳನ್ನು ತೆಗೆದು ಹಾಕುವಂತೆ ಕೋರಿ ರಾಜ್ಯಸಭೆಯ ಮಾಜಿ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್‌ಗೆ ಮುಂದೂಡಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, “ಈ ನ್ಯಾಯಾಲಯದ ಹಲವಾರು ತೀರ್ಪುಗಳು ‘ಜಾತ್ಯತೀತ’ ಎಂಬ ಪದ ನಮ್ಮ ಸಂವಿಧಾನದ ಮೂಲ ರಚನೆ ಎಂಬುವುದಾಗಿ ಹೇಳಿದೆ” ಎಂದಿದ್ದಾರೆ.

ಒಂದೇ ವಿಷಯದ ಕುರಿತು ಮೂರು ಅರ್ಜಿಗಳು ಸಲ್ಲಿಕೆಯಾಗಿವೆ. ಹಾಗಾಗಿ, ಅರ್ಜಿದಾರರ ವಕೀಲರೊಬ್ಬರು ಮಾಡಿದ ಮನವಿಯನ್ನು ಪರಿಗಣಿಸಿ, ಆಗಸ್ಟ್ 12 ರಿಂದ ವಿಷಯವನ್ನು ವಿಚಾರಣೆಗೆ ಮರು ಪಟ್ಟಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಸಂವಿಧಾನದ ಪೀಠಿಕೆ ಅಂಗೀಕರಿಸಿದ ನವೆಂಬರ್ 26, 1949ರ ದಿನಾಂಕವನ್ನು ಬದಲಾಯಿಸದೆ ತಿದ್ದುಪಡಿ ಮಾಡಬಹುದೇ? ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಕೇಳಿತ್ತು. ಸುಬ್ರಮಣಿಯನ್ ಸ್ವಾಮಿ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ದ್ವಿಸದಸ್ಯ ಪೀಠ ಈ ಪ್ರಶ್ನೆ ಎತ್ತಿತ್ತು.

ಪ್ರಸ್ತುತ ಅರ್ಜಿಯು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕಾರವದಿಯಲ್ಲಿ ಸಂವಿಧಾನದ ಪೀಠಿಕೆಗೆ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳನ್ನು ಸೇರಿಸಲು ಅನುವು ಮಾಡಿಕೊಟ್ಟ 1976ರ 42ನೇ ಸಂವಿಧಾನದ ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿದೆ. ಹೊಸ ಪದಗಳ ಅಳವಡಿಕೆ 368ನೇ ವಿಧಿಯ ಅಡಿಯಲ್ಲಿ ಸಂಸತ್ತಿನ ತಿದ್ದುಪಡಿ ಅಧಿಕಾರವನ್ನು ಮೀರಿದೆ ಎಂದು ವಾದಿಸಿದೆ. ಸಂವಿಧಾನದ ರಚನಾಕಾರರು ಪ್ರಜಾಪ್ರಭುತ್ವದ ಆಡಳಿತದಲ್ಲಿ ಸಮಾಜವಾದಿ ಅಥವಾ ಜಾತ್ಯತೀತ ಪರಿಕಲ್ಪನೆಗಳನ್ನು ಪರಿಚಯಿಸಲು ಎಂದಿಗೂ ಉದ್ದೇಶಿಸಿರಲಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಸಂವಿಧಾನವು ನಾಗರಿಕರ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳುವ ಮೂಲಕ ರಾಜಕೀಯ ಸಿದ್ಧಾಂತಗಳನ್ನು ಅವರ ಮೇಲೆ ಹೇರಲು ಸಾಧ್ಯವಿಲ್ಲದ ಕಾರಣ ಡಾ.ಬಿಆರ್‌ ಅಂಬೇಡ್ಕರ್ ಈ ಪದಗಳು ಅಳವಡಿಸುವುದನ್ನು ವಿರೋಧಿಸಿದ್ದರು ಎಂದಿದ್ದಾರೆ.

ಭಾರತೀಯ ಕಮ್ಯುನಿಸ್ಟ್ ಪಕ್ಷದ ರಾಜ್ಯಸಭಾ ಸಂಸದ ಬಿನೋಯ್ ವಿಶ್ವಂ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದಾರೆ. ಅರ್ಜಿಯನ್ನು ವಿರೋಧಿಸಿ, “ಜಾತ್ಯತೀತತೆ ಮತ್ತು ಸಮಾಜವಾದವು” ಭಾರತೀಯ ಸಂವಿಧಾನದ ಅಂತರ್ಗತ ವಿಷಯಗಳಾಗಿವೆ. ಆದ್ದರಿಂದ, ಪೀಠಿಕೆಯಲ್ಲಿ ಈ ಪದಗಳ ಸೇರ್ಪಡೆಯಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ ಎಂದಿದ್ದಾರೆ.
ಸಂವಿಧಾನದ ಪೀಠಿಕೆಯನ್ನು ಡಿಸೆಂಬರ್ 1976ರಲ್ಲಿ ಇಂದಿರಾ ಗಾಂಧಿ ಸರ್ಕಾರವು ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಸೇರಿಸಲು ತಿದ್ದುಪಡಿ ಮಾಡಿತ್ತು. ‘ರಾಷ್ಟ್ರದ ಏಕತೆ’ ಎಂಬ ಪದಗುಚ್ಛವನ್ನು ‘ರಾಷ್ಟ್ರದ ಏಕತೆ ಮತ್ತು ಸಮಗ್ರತೆ’ ಎಂದು ಬದಲಾಯಿಸಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂಬುವುದು ಅರ್ಜಿದಾರರ ವಾದವಾಗಿದೆ. ಮೂಲ ಪೀಠಿಕೆಯಲ್ಲಿ ಭಾರತವನ್ನು ‘ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯ’ ಎಂದು ಉಲ್ಲೇಖಿಸಲಾಗಿತ್ತು. ‘ಸಾರ್ವಭೌಮ’ ಮತ್ತು ‘ಪ್ರಜಾಪ್ರಭುತ್ವ’ದ ನಡುವೆ ‘ಸಮಾಜವಾದಿ’, ‘ಜಾತ್ಯತೀತ’ ಎಂಬ ಪದಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಸುಪ್ರೀಂ ಕೋರ್ಟ್ ‘1976ರಲ್ಲಿ ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿ ಮೂಲಕ ಪೀಠಿಕೆಯನ್ನು ತಿದ್ದುಪಡಿ ಮಾಡಿ, ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳನ್ನು ಸೇರ್ಪಡೆ ಮಾಡಲಾಗಿದೆ. ಆದರೆ, ಈ ತಿದ್ದುಪಡಿಯನ್ನು ಅಳವಡಿಸಿಕೊಂಡ ದಿನಾಂಕವನ್ನು 1949ರ ನವೆಂಬರ್‌ 29 ಎಂಬುದಾಗಿಯೇ ಉಳಿಸಿಕೊಳ್ಳಲಾಗಿದೆ. ಹೀಗಾಗಿ, ಈ ವಿಷಯವನ್ನು ತಾರ್ಕಿಕ ದೃಷ್ಟಿಕೋನದಿಂದ ಅವಲೋಕಿಸುವುದು ಅಗತ್ಯ’ ಎಂದು ಹೇಳಿತ್ತು.

Previous Post
ನೋಟು ನಿಷೇಧ, ಜಿಎಸ್‌ಟಿ ಜಾರಿ, ಕೋವಿಡ್‌ನಿಂದ 11.3 ಲಕ್ಷ ಕೋಟಿ ನಷ್ಟ: ವರದಿ
Next Post
ವೈಜಾಗ್ ಸ್ಟೀಲ್ಸ್ ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ, ಆತ್ಮನಿರ್ಭರ್ ಭಾರತ ಪರಿಕಲ್ಪನೆ ಅಡಿ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ ಭರವಸೆ

Recent News