ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಇಡಿ ಸಿಬಿಐಗೆ ನೋಟಿಸ್ ನೀಡಿದ ಸುಪ್ರೀಂಕೋರ್ಟ್
ನವದೆಹಲಿ : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಜುಲೈ 29 ರಂದು ವಿಚಾರಣೆಗೆ ಮುಂದೂಡಿರುವ ಸುಪ್ರೀಂ ಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಯಿಂದ ಪ್ರತಿಕ್ರಿಯೆ ಕೇಳಿದೆ.
2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿರುವ ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಕೋರಿ ಸಿಸೋಡಿಯಾ ಅವರ ಮನವಿಗೆ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠ ನೋಟಿಸ್ ಜಾರಿ ಮಾಡಿದೆ.
ಮನೀಶ್ ಸಿಸೋಡಿಯಾ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಿವೇಕ್ ಜೈನ್ ವಾದ ಮಂಡಿಸಿದರು. ಈ ಎರಡೂ ಪ್ರಕರಣಗಳ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಎಂದು ತಿಳಿಸಿದರು. ಕಳೆದ 16 ತಿಂಗಳುಗಳಿಂದ ಸಿಸೋಡಿಯ ಜೈಲಿನಲ್ಲಿದ್ದಾರೆ, ವಿಚಾರಣೆಯಲ್ಲಿ ವಿಳಂಬ ಆರೋಪಿಯ ತಪ್ಪಿಲ್ಲ, ವಿಚಾರಣೆಯು ಬಹಳ ನಿಧಾನವಾಗಿ ನಡೆಯುತ್ತಿದೆ ಎಂದು ಜೈನ್ ಆರೋಪಿಸಿದರು.
ಇದಕ್ಕೂ ಮೊದಲು ಜೂನ್ 4 ರಂದು, ಸಿಸೋಡಿಯಾ ಜಾಮೀನಿನ ಮೇಲೆ ಬಿಡುಗಡೆಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಇಡಿ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜುಲೈ 3 ಅಥವಾ ಅದಕ್ಕಿಂತ ಮೊದಲು ತನಿಖೆಯನ್ನು ಮುಕ್ತಾಯಗೊಳಿಸಿ ಅಂತಿಮ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದರು.
ಈವರೆಗೂ ಯಾವುದೇ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ, ತನಿಖೆ ವಿಳಂಬವಾಗುತ್ತಿರುವ ಹಿನ್ನಲೆ ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸಿರುವ ಸಿಸೋಡಿಯಾ ಜಾಮೀನಿಗೆ ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿ ನೋಟಿಸ್ ನೀಡಿರುವ ಕೋರ್ಟ್ ಜುಲೈ 29 ರಂದು ಮತ್ತೆ ವಿಚಾರಣೆ ನಡೆಸಲಿದೆ.