ಅಲ್ಪಸಂಖ್ಯಾತ ಮೋರ್ಚಾ ರದ್ದತಿಗೆ ಸುವೇಂದು ಅಧಿಕಾರಿ ಆಗ್ರಹ

ಅಲ್ಪಸಂಖ್ಯಾತ ಮೋರ್ಚಾ ರದ್ದತಿಗೆ ಸುವೇಂದು ಅಧಿಕಾರಿ ಆಗ್ರಹ

ಕೋಲ್ಕತ್ತಾ, ಜು. 17: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಬೆಂಬಲದ ಕೊರತೆಯೇ ಕಾರಣ ಎಂದು ಪಶ್ಚಿಮ ಬಂಗಾಳದ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ (ಬುಧವಾರ ಹೇಳಿದ್ದಾರೆ. ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ವಿಸ್ತೃತ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಿದ್ದ ಅವರು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಎಂಬ ಪಕ್ಷದ ಧ್ಯೇಯವಾಕ್ಯ ಬೇಡ. ಅದರ ಬದಲು ಪಕ್ಷವು ‘ಹಮ್ ಉನ್ಕೇ ಸಾಥ್ ಜೋ ಹಮಾರೆ ಸಾಥ್ (ನಮ್ಮೊಂದಿಗೆ ಇರುವವರೊಂದಿಗೆ ನಾವಿರುತ್ತೇವೆ) ಎಂಬ ಹೊಸ ಧ್ಯೇಯವಾಕ್ಯ ಅಳವಡಿಸಿಕೊಳ್ಳಬೇಕು ಎಂದು ಸುವೇಂದು ಹೇಳಿದ್ದಾರೆ.

ನಾನು ರಾಷ್ಟ್ರೀಯವಾದಿ ಮುಸ್ಲಿಮರಿಗಾಗಿಯೂ ಮಾತನಾಡಿದ್ದೇನೆ. ನಾವೆಲ್ಲರೂ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಿದ್ದೆವು, ಆದರೆ ನಾನು ಇದನ್ನು ಇನ್ನು ಮುಂದೆ ಹೇಳುವುದಿಲ್ಲ. ಏಕೆಂದರೆ ಅದು ‘ಹಮ್ ಉನ್ಕೇ ಸಾಥ್ ಜೋ ಹುಮಾರೇ ಸಾಥ್’ ಆಗಿರಬೇಕು ಎಂದು ನಾನು ಭಾವಿಸುತ್ತೇನೆ. ಇಲ್ಲಿ ಅಲ್ಪಸಂಖ್ಯಾತ ಮೋರ್ಚಾ ಅಗತ್ಯವಿಲ್ಲ ಎಂದು ಸುವೇಂದು ಹೇಳಿದ್ದಾರೆ.

ನನ್ನ ಹೇಳಿಕೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬೇಡಿ. ರಾಷ್ಟ್ರೀಯವಾದಿಗಳು ಈ ರಾಷ್ಟ್ರ ಮತ್ತು ಬಂಗಾಳದ ಪರವಾಗಿ ನಿಲ್ಲುತ್ತಾರೆ. ನಾವು ಅವರೊಂದಿಗೆ ಇರಬೇಕು ಎಂದು ಹೇಳಿದ್ದೇನೆ ನಮ್ಮೊಂದಿಗೆ ನಿಲ್ಲದವರು ರಾಷ್ಟ್ರ ಮತ್ತು ಬಂಗಾಳದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಮಮತಾ ಬ್ಯಾನರ್ಜಿಯವರಂತೆ ನಾವು ಜನರನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು ಎಂದು ವಿಭಜಿಸಬಾರದು. ನಾವು ಎಲ್ಲರನ್ನೂ ಭಾರತೀಯರು ಎಂದು ನೋಡುತ್ತೇವೆ. ನಾನು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ ನ್ನು ವಾಚಾ, ಮನಸಾ ಪಾಲಿಸುತ್ತೇನೆ ಎಂದು ಸುವೆಂದು ಅಧಿಕಾರಿ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಪಶ್ಚಿಮ ಬಂಗಾಳದ ಮತದಾರರಲ್ಲಿ ಸುಮಾರು 30 ಪ್ರತಿಶತದಷ್ಟು ಅಲ್ಪಸಂಖ್ಯಾತರು ಇದ್ದಾರೆ.

2014ರಲ್ಲಿ ಬಿಜೆಪಿಯ ಘೋಷಣೆ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಆಗಿತ್ತು. 2019ರಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ಆಗಿತ್ತು. ಇತ್ತೀಚೆಗಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, “ಹಲವು ಪ್ರದೇಶಗಳಲ್ಲಿ ಟಿಎಂಸಿಯ ಜಿಹಾದಿ ಗೂಂಡಾಗಳು” ಹಿಂದೂಗಳಿಗೆ ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎಂದ ಸುವೇಂದು ಪಶ್ಚಿಮ ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಟಿಎಂಸಿಯ ಜಿಹಾದಿ ಗೂಂಡಾಗಳು ಇದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ವಿಚಲಿತ ಪ್ರದೇಶಗಳ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯ. ರಾಷ್ಟ್ರಪತಿ ಆಳ್ವಿಕೆಯ ಹಿಂಬಾಗಿಲ ಅನುಷ್ಠಾನದ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿಯಲು ನಾವು ಬಯಸುವುದಿಲ್ಲ. ಜನರ ಆದೇಶದೊಂದಿಗೆ ನಾವು ಚುನಾವಣೆಯಲ್ಲಿ ಗೆದ್ದಾಗ ನಾವು ಅಧಿಕಾರಕ್ಕೆ ಬರುತ್ತೇವೆ, ಆದರೆ ಅದಕ್ಕಾಗಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವು ಉಪಚುನಾವಣೆಯಲ್ಲಿ ಸೋತ ಕೆಲವು ದಿನಗಳ ನಂತರ ಅವರ ಹೇಳಿಕೆಗಳು ಬಂದಿವೆ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಎಲ್ಲಾ ಮೂರು ಸ್ಥಾನಗಳನ್ನು ಗೆದ್ದಿದೆ. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ 29 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಕೇವಲ 12 ಸ್ಥಾನಗಳನ್ನು ಗೆದ್ದಿದೆ.

ಬಿಜೆಪಿ ಪ್ರಜಾಪ್ರಭುತ್ವದ ವಿರುದ್ಧವಾಗಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ. “ಅವರು (ಬಿಜೆಪಿ) ಅಲ್ಪಸಂಖ್ಯಾತರ ಮೋರ್ಚಾ ಇರಬಾರದು ಎಂದು ಹೇಳುತ್ತಿದ್ದಾರೆ, ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ, ಇಲ್ಲಿ ಹಿಂದೂ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಮತ್ತು ಎಲ್ಲಾ ಪ್ರಜಾಪ್ರಭುತ್ವ ಪಕ್ಷಗಳು ಅಲ್ಪಸಂಖ್ಯಾತರ ಘಟಕ ಹೊಂದಿದೆ. ಅದು (ಬಿಜೆಪಿ) ಪ್ರಜಾಸತ್ತಾತ್ಮಕ ಪಕ್ಷವಾಗಿದ್ದಿದ್ದರೆ ನಮ್ಮ ಪಕ್ಷ ಎಲ್ಲರಿಗೂ ಎಂದು ಹೇಳುತ್ತಿತ್ತು ಎಂದು ಘೋಷ್ ಹೇಳಿದ್ದಾರೆ.

Previous Post
ಅತೀಕ್ ಅಹ್ಮದ್​​ನ ₹ 50 ಕೋಟಿ ಮೌಲ್ಯದ ಆಸ್ತಿ ಸ್ವಾಧೀನ
Next Post
ಉಪ ಚುನಾವಣೆ ಬೆನ್ನಲೆ ಯೋಗಿ ಸಂಪುಟ ಪುನರ್ ರಚನೆ

Recent News