ಜೆಡಿಎಸ್ ಡ್ಯಾಮೇಜ್ ಕಂಟ್ರೋಲ್; ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಹಾಸನದಲ್ಲಿ ಬೃಹತ್ ಸಮಾವೇಶ

ಜೆಡಿಎಸ್ ಡ್ಯಾಮೇಜ್ ಕಂಟ್ರೋಲ್; ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಹಾಸನದಲ್ಲಿ ಬೃಹತ್ ಸಮಾವೇಶ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಗಳು ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಭದ್ರಕೋಟೆ ಹಾಸನದಲ್ಲಿ ಇದೀಗ ಜೆಡಿಎಸ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದು, ಎಚ್ ಡಿ ರೇವಣ್ಣ ನೇತೃತ್ವದಲ್ಲೇ ಬೃಹತ್ ಸಮಾವೇಶ ನಡೆಸುವುದಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭಾನುವಾರ ಘೋಷಣೆ ಮಾಡಿದ್ದಾರೆ.

ಗುರುತರ ಆರೋಪಗಳ ಮೇಲೆ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಮತ್ತು ಎಂಎಲ್​ಸಿ ಸೂರಜ್​ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು, ಇದು ಜೆಡಿಎಸ್​ ಕಾರ್ಯಕರ್ತರನ್ನು ಕುಗ್ಗಿಸಿದೆ. ಇದರಿಂದ ಪಕ್ಷ ಸಂಘಟನೆಗೆ ಭಾರಿ ಹೊಡೆತ ಬಿದ್ದಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಪಕ್ಷ ಸಂಘಟನೆಗೆ ಚುರುಕು ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಹಾಸನದಲ್ಲಿ ಬೃಹತ್​ ಸಮಾವೇಶ ಮಾಡಲು ನಿರ್ಧರಿಸಿದ್ದಾರೆ.

ಕರ್ನಾಟಕದ ಮಳೆ ಪೀಡಿತ ಪ್ರದೇಶಗಳಲ್ಲಿ ಭೇಟಿ ನೀಡಿದ ಬಳಿಕ ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ‘ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ‌ ಒತ್ತಾಯವಿದೆ. ಕಲಾಪ ಮುಗಿದ ನಂತರ ಹಾಸನದಲ್ಲಿ ಮಾಜಿ ಸಚಿವ​ ಹೆಚ್​ಡಿ ರೇವಣ್ಣ ಅವರ ನೇತೃತ್ವದಲ್ಲೇ ಬೃಹತ್ ಸಮಾವೇಶ ಮಾಡುತ್ತೇನೆ.

ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ, ಆದರೆ ರೇವಣ್ಣ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರು ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೈರಿ ಮೀರಿಸುವ ರೀತಿಯಲ್ಲಿ ಹಾಸನದಲ್ಲಿ ಮೆಗಾ ಡೈರಿ ನಿರ್ಮಾಣ ಮಾಡುತ್ತಿದ್ದಾರೆ. ರೈತರಿಗೆ ಆರ್ಥಿಕ ಶಕ್ತಿ ತುಂಬಲು ಮೆಗಾ ಡೈರಿ ಮಾಡುತ್ತಿದ್ದಾರೆ. ರೇವಣ್ಣ ಅವರ ನೇತೃತ್ವದಲ್ಲಿ, ಶಾಸಕರುಗಳನ್ನೊಳಗೊಂಡು ನಾನು ಸೇರಿದಂತೆ ಪಕ್ಷ ಸಂಘಟನೆ ಮಾಡುತ್ತೇವೆ. ಹಾಸನ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆ ಬಳಿಕ ಮೊದಲ ಭೇಟಿ

ಲೋಕಸಭಾ ‌ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಗೆ ಆಗಮಿಸಿ, ಆಗಿರುವ ಅನಾಹುತ ನೋಡಲು ಬಂದಿದ್ದೇನೆ. ಹಾಸನ ಜಿಲ್ಲೆಯ ಜನತೆ ದೇವೇಗೌಡರಿಗೆ ಕೆಂಪುಕೋಟೆ ಮೇಲೆ ಬಾವುಟ ಹಾರಿಸುವ ಶಕ್ತಿ‌ ಕೊಟ್ಟಿದ್ದಾರೆ. 60 ವರ್ಷಗಳ ಏಳುಬೀಳುಗಳಲ್ಲಿ ಅವರ ರಾಜಕೀಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿರುವುದು ಹಾಸನ ಜಿಲ್ಲೆಯ ಜನ. ನಮ್ಮ ಬದುಕು ಇರುವವರೆಗೂ ನಾವು ಮರೆಯಲ್ಲ. ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ, ತಂದೆ ಹೆಚ್​ಡಿ ದೇವೇಗೌಡ ಮತ್ತು ನನ್ನ ತಾಯಿ ಭಗವಂತನಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದಾರೆ, ಶಿವನನ್ನು ಆರಾಧಿಸುತ್ತಾರೆ. ಈ‌ ಕುಟುಂಬವನ್ನು ಮುಗಿಸಲು ಹೊರಟಿದ್ದರು. ಆದರೆ ಆ ಭಗವಂತ ಎದುರಿಸುವ ಶಕ್ತಿ ಕೊಟ್ಟಿದ್ದಾನೆ ಎಂದು ಹೇಳಿದರು.

ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ

ಕಳೆದ ನಾಲ್ಕೈದು ದಿನಗಳಿಂದ ದೊಡ್ಡಮಟ್ಟದ ಮಳೆಯಿಂದ ಹಾಸನ ಜಿಲ್ಲೆಯಲ್ಲಿ ಅಪಾರ ಅನಾಹುತಗಳಾಗಿವೆ. ಸಕಲೇಶಪುರದಲ್ಲಿ ಅನಾಹುತ ಜೊತೆಗೆ, ಶಿರಾಡಿಘಾಟ್ ರಸ್ತೆಯಲ್ಲಿ ಭೂಕುಸಿತವಾಗಿದೆ. ಕಳಪೆ ಕಾಮಗಾರಿ ಜೊತೆಗೆ, ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಎಲ್ಲ ಮಾಹಿತಿಯನ್ನು ಕೇಂದ್ರ ಸಚಿವರಿಗೆ ನೀಡುತ್ತೇನೆ. ಅವರನ್ನು ಒಮ್ಮೇ ಭೇಟಿ ನೀಡುವಂತೆ ಚರ್ಚೆ ಮಾಡುತ್ತೇನೆ. ಬಹಳ ದಿನಗಳಿಂದ ಈ ರಸ್ತೆಯಲ್ಲಿ ಸುರಂಗ ಮಾರ್ಗ ಆಗಬೇಕು ಎನ್ನುವ ಚರ್ಚೆಗಳಿವೆ. ಇದಕ್ಕೆ ಅರಣ್ಯ ಇಲಾಖೆಯ ತೊಡಕುಗಳಿವೆ. ಎಲ್ಲವನ್ನೂ ನಾನು ಚರ್ಚೆ ಮಾಡುತ್ತೇನೆ ಎಂದರು.

ಸರ್ಕಾರದ ಹಗರಣಗಳು

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದನದಲ್ಲಿ ಉತ್ತರ ನೀಡಲು ಆಗದೇ ಸಿಎಂ ಸಿದ್ದರಾಮಯ್ಯ ಮಂತ್ರಿಗಳ ಮೂಲಕ ಸಮಜಾಯಿಷಿ ನೀಡಿದ್ದಾರೆ. 90 ಕೋಟಿ ತಿಂದ್ರು ಭ್ರಷ್ಟಾಚಾರ, 90 ರೂ. ತಿಂದರು ಕೂಡ ಭ್ರಷ್ಟಾಚಾರ. ಅಧಿಕಾರಿ ಚಂದ್ರಶೇಖರನ್​ ಆತ್ಮಹತ್ಯೆ ಬಳಿಕ ಹಗರಣ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ಹೆಚ್​ಡಿ ದೇವೇಗೌಡರು ಪ್ರಧಾನಿ ಆಗಿದ್ದು ಸಿಪಿಐ, ಪ್ರಾದೇಶಿಕ ಪಕ್ಷಗಳಿಂದ ಬೆಂಬಲದಿಂದ ಕಾಂಗ್ರೆಸ್​​ನವರು ನಮ್ಮಿಂದ ಪ್ರಧಾನಮಂತ್ರಿ ಆದರು ಅಂತ ಹೇಳುತ್ತಾರೆ ಎಂದು ವಾಗದ್ದಾಳಿ ಮಾಡಿದರು.

ಕಾಂಗ್ರೆಸ್​ ನಾಯಕರ ಮುಖದಲ್ಲಿ ಪಾಪ ಪ್ರಜ್ಞೆ ಕಾಣುತ್ತಿದೆ

ಪ್ಯಾರಿಸ್​ ಮಾದರಿಯಲ್ಲಿ ನೈಸ್​ ರಸ್ತೆಯಲ್ಲಿ ಟವರ್​ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಡಾದಲ್ಲಿ ಹಗರಣ ನಡೆದಿದೆ ಅಂತ ದಾಖಲೆ ಸಮೇತ ಹೇಳುತ್ತಿದ್ದೇವೆ. ಕಾಂಗ್ರೆಸ್​ ನಾಯಕರ ಮುಖದಲ್ಲಿ ಪಾಪ ಪ್ರಜ್ಞೆ ಕಾಣುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್​ನವರ ಪಾಪದ ಕೊಡ ತುಂಬಿದೆ. ಐದು ವರ್ಷಗಳ ಹಿಂದೆಯೇ ರಾಮನಗರ ಜಿಲ್ಲೆ ಅಭಿವೃದ್ಧಿಯಾಗಿದೆ. ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್​ ವಿರುದ್ಧ ವಾಗ್ದಾಳಿ ಮಾಡಿದರು. ಅಲ್ಲದೆ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಅಭ್ಯರ್ಥಿ ಬಗ್ಗೆ ನಿರ್ಧಾರವಾಗಿಲ್ಲ. ಮೋದಿ, ಅಮಿತ್ ಶಾ ಜೊತೆ ಚರ್ಚಿಸಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ತಿಳಿಸಿದರು.

ಹಲವಾರು ಯೋಜನೆಗಳಿಗೆ ಮೋದಿ ಸರ್ಕಾರದ ಸಿದ್ಧತೆ

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹಲವಾರು ಯೋಜನೆಗಳನ್ನು ತರುವ ಸಿದ್ದತೆಗಳಾಗುತ್ತಿವೆ. ನರೇಂದ್ರ ಮೋದಿಯವರು ನನಗೆ ಎರಡೆರಡು ಜವಾಬ್ದಾರಿ ನೀಡಿದ್ದು, ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿರುವ ಕೆಲಸವನ್ನು ಪ್ರಧಾನಿಯವರು ನೋಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

Previous Post
ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತದ ಸಂದರ್ಭದಲ್ಲಿ ನಡೆದಿರುವ ಎಲ್ಲಾ ಹಗರಣಗಳನ್ನು ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ
Next Post
ಯಾವ ಕಾರಣಕ್ಕೂ ಇಸ್ಲಾಮಿಕ್‌ ಭಯೋತ್ಪಾದನೆ ಸಹಿಸಲಾರೆ – ಟ್ರಂಪ್‌ ಗುಡುಗು!

Recent News