7 ರಾಜ್ಯಗಳಿಂದ ನೀತಿ ಆಯೋಗದ ಸಭೆ ಬಹಿಷ್ಕಾರ
ನವದೆಹಲಿ, ಜು. 27: ಕೇಂದ್ರ ಬಜೆಟ್ನಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಶನಿವಾರ ನಡೆದ ನೀತಿ ಆಯೋಗದ ಸಭೆಯನ್ನು ಕರ್ನಾಟಕ ಸಹಿತ ಏಳು ರಾಜ್ಯಗಳು ಬಹಿಷ್ಕರಿಸಿವೆ. ಕರ್ನಾಟಕದ ಮಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು, ತೆಲಂಗಾಣದ ಎ. ರೇವಂತ್ ರೆಡ್ಡಿ, ತಮಿಳುನಾಡಿನ ಎಂ.ಕೆ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್ ಮತ್ತು ಪಂಜಾಬ್ನ ಮುಖ್ಯಮಂತ್ರಿ ಭಗವಂತ್ ಮಾನ್ ಸಭೆಗೆ ಹಾಜರಾಗಿರಲಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಅವರು ಸಭೆಗೆ ಹಾಜರಾಗುವುದು ಅಸಾಧ್ಯವಾಗಿದೆ. ಆದರೆ, ದೆಹಲಿ ಸರ್ಕಾರ ಕೂಡ ಸಭೆಯನ್ನು ಬಹಿಷ್ಕರಿಸಿದೆ. ‘ವಿಕಸಿತ ಭಾರತ @ 2047’ ಎಂಬುವುದು ಈ ವರ್ಷದ ನೀತಿ ಆಯೋಗದ ಥೀಮ್ ಆಗಿದೆ. ಕೇಂದ್ರ ಸರ್ಕಾರ ‘ಮೇಕಿಂಗ್ ಇಂಡಿಯಾ’ಕ್ಕೆ ಹೆಚ್ಚು ಒತ್ತು ಕೊಡುವ ಗುರಿ ಹೊಂದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಬಜೆಟ್ನಲ್ಲಿ ತಾರತಮ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮುಂದೆ ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಲಾಗಿತ್ತು. ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಮತಾ ಬ್ಯಾನರ್ಜಿ ಗುರುವಾರವೇ ದೆಹಲಿಗೆ ಬಂದಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಿಂದ ಮಮತಾ ಬ್ಯಾನರ್ಜಿ ಅರ್ಧದಲ್ಲಿ ಹೊರ ನಡೆದರು. “ನನಗೆ ಮಾತನಾಡಲು ಅವಕಾಶ ನೀಡಿಲ್ಲ” ಎಂದು ಅವರು ಆರೋಪಿಸಿದ್ದಾರೆ. ನೀತಿ ಆಯೋಗವನ್ನು ರದ್ದುಪಡಿಸಿ ಈ ಹಿಂದಿನ ಯೋಜನಾ ಆಯೋಗವನ್ನು ಮರುಸ್ಥಾಪಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ನೀತಿ ಆಯೋಗ ಆಧಾರರಹಿತವಾಗಿದೆ. ಅದು ಕೇವಲ ಸಭೆಗಳನ್ನು ನಡೆಸುವುದಕ್ಕಷ್ಟೇ ಸೀಮಿತವಾಗಿದೆ ಎಂದು ದೂರಿದ್ದಾರೆ.