ಅಲೋಪತಿ, ಕೊರೋನಿಲ್ ಹೇಳಿಕೆ ತೆಗೆಯಲು ರಾಮ್‌ದೇವ್‌, ಬಾಲಕೃಷ್ಣಗೆ ಸೂಚನೆ

ಅಲೋಪತಿ, ಕೊರೋನಿಲ್ ಹೇಳಿಕೆ ತೆಗೆಯಲು ರಾಮ್‌ದೇವ್‌, ಬಾಲಕೃಷ್ಣಗೆ ಸೂಚನೆ

ನವದೆಹಲಿ, ಜು. 29: ಕೋವಿಡ್-19ನಲ್ಲಿ ಲಕ್ಷಾಂತರ ಜನರ ಸಾವಿಗೆ ಅಲೋಪತಿ ಕಾರಣ ಮತ್ತು ಪತಂಜಲಿಯ‘ಕೊರೋನಿಲ್’ಕೋವಿಡ್‌ಗೆ ಚಿಕಿತ್ಸೆಯ ಔಷಧಿಯಾಗಿದೆ ಎಂಬ ಹೇಳಿಕೆಗಳನ್ನು ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಸೋಮವಾರ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣಗೆ ಸೂಚಿಸಿದೆ. ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರು, 2021ರಲ್ಲಿ ವಿವಿಧ ವೈದ್ಯರ ಸಂಘಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ. ಮೂರು ದಿನಗಳೊಳಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು, ಇಂಟರ್ನೆಟ್ ಮತ್ತು ಎಲ್ಲಾ ವೆಬ್‌ಸೈಟ್‌ಗಳಿಂದ ಆಕ್ಷೇಪಾರ್ಹ ವಿಷಯವನ್ನು ತೆಗೆದು ಹಾಕುವಂತೆ ಪೀಠವು ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಸೂಚಿಸಿದೆ. ಮೂರು ದಿನಗಳಲ್ಲಿ ಹೇಳಿಕೆಗಳನ್ನು ತೆಗೆದು ಹಾಕಲು ವಿಫಲವಾದರೆ, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಅದನ್ನು ತೆಗೆದುಹಾಕುತ್ತಾರೆ ಎಂದು ಪೀಠ ಹೇಳಿದೆ. ಬಾಬಾ ರಾಮ್‌ದೇವ್ ಅವರು ತಪ್ಪು ಮಾಹಿತಿಯನ್ನು ಹರಡುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಕೋವಿಡ್-19 ಸಾವುಗಳಿಗೆ ಅಲೋಪತಿ ಕಾರಣ ಎಂದು ಹೇಳುವ ಮೂಲಕ ಜನರು ಆಸ್ಪತ್ರೆಗೆ ದಾಖಲಾಗದಂತೆ ಪ್ರೇರೇಪಿಸಿದ್ದಾರೆ ಎಂದು ವೈದ್ಯರ ಸಂಘಗಳು ಆರೋಪಿಸಿತ್ತು.

ಪತಂಜಲಿಯ ಕೊರೊನಿಲ್ ಅನ್ನು ಕೋವಿಡ್ -19ಗೆ ಮದ್ದು ಎಂದು ಪ್ರಚಾರ ಮಾಡುವಲ್ಲಿ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ನಡವಳಿಕೆಯು ಅತ್ಯಂತ ಅದ್ಭುತವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕೊರೊನಿಲ್ ಅನ್ನು ಚಿಕಿತ್ಸೆಯಾಗಿ ಬ್ರ್ಯಾಂಡ್ ಮಾಡುವುದು ಮಿಸ್‌ಬ್ರಾಂಡಿಂಗ್‌ಗೆ ಕಾರಣವಾಗಬಹುದು ಮತ್ತು ಕಾನೂನುಬದ್ಧವಾಗಿ ಅನುಮತಿಸಲಾಗುವುದಿಲ್ಲ ಎಂದಿರುವ ಪೀಠ, ಈ ನ್ಯಾಯಾಲಯವು ಯಾವುದೇ ಹೆಚ್ಚಿನ ಅವಲೋಕನಗಳನ್ನು ಮಾಡದೆ, ಈ ಅಂಶವನ್ನು ಪರಿಶೀಲಿಸಲು ಸಮರ್ಥ ಅಧಿಕಾರಿಗಳಿಗೆ ಬಿಡುತ್ತದೆ ಎಂದಿದೆ.
ರಾಮ್‌ದೇವ್ ಮತ್ತು ಬಾಲಕೃಷ್ಣ ಅವರಿಗೆ ಕೊರೋನಿಲ್ ಅನ್ನು ಪ್ರಚಾರ ಮಾಡಲು ಮತ್ತು ಜಾಹೀರಾತು ನೀಡಲು ಅನುಮತಿ ನೀಡಿದರೆ, ಸಾರ್ವಜನಿಕರು ತಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡಿಕೊಳ್ಳಬಹುದು ಮಾತ್ರವಲ್ಲದೆ ಆಯುರ್ವೇದದ ಪುರಾತನ ಮತ್ತು ಪೂಜನೀಯ ವ್ಯವಸ್ಥೆಯೇ ಅಪಖ್ಯಾತಿಗೆ ಒಳಗಾಗಬಹುದು ಎಂದು ನ್ಯಾಯಮೂರ್ತಿ ಭಂಭಾನಿ ಅಭಿಪ್ರಾಯಪಟ್ಟಿದ್ದಾರೆ. ಕೊರೊನಿಲ್ ಮಾತ್ರೆಗಳನ್ನುರೋಗನಿರೋಧಕ ಶಕ್ತಿ ವರ್ಧಕವಾಗಿ ಬಳಸಲು ಪರವಾನಗಿ ನೀಡಲಾಗಿದೆ. ಅದು ಕೋವಿಡ್-19 ನಿರ್ವಹಣೆಯಲ್ಲಿ ಪೋಷಕ ಕ್ರಮವಾಗಿ ಸಹಾಯ ಮಾಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ

Previous Post
ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವರಾದ ಅಮಿತ್ ಶಾ ಅವರನ್ನು ಸಂಸದ ಡಾ.ಸುಧಾಕರ್ ಭೇಟಿಯಾದರು
Next Post
ಮೇಧಾ ಪಾಟ್ಕರ್‌ಗೆ ವಿಧಿಸಿದ್ದ ಜೈಲು ಶಿಕ್ಷೆ ಅಮಾನತು

Recent News