ಮೇಧಾ ಪಾಟ್ಕರ್‌ಗೆ ವಿಧಿಸಿದ್ದ ಜೈಲು ಶಿಕ್ಷೆ ಅಮಾನತು

ಮೇಧಾ ಪಾಟ್ಕರ್‌ಗೆ ವಿಧಿಸಿದ್ದ ಜೈಲು ಶಿಕ್ಷೆ ಅಮಾನತು

ನವದೆಹಲಿ, ಜು. 29: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಅವರಿಗೆ ವಿಧಿಸಲಾಗಿದ್ದ ಐದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ದೆಹಲಿಯ ಸಾಕೇತ್ ನ್ಯಾಯಾಲಯ ಅಮಾನತುಗೊಳಿಸಿದೆ. ಮೇಧಾ ಪಾಟ್ಕರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮಾ ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಅಲ್ಲದೆ, ಪ್ರಕರಣ ದಾಖಲಿಸಿದ್ದ ವಿ.ಕೆ ಸಕ್ಸೇನಾ ಅವರಿಗೆ ನೋಟಿಸ್ ನೀಡಿದ್ದಾರೆ. ರೂ. 25 ಸಾವಿರ ಶ್ಯೂರಿಟಿ ಬಾಂಡ್ ಇಡಲು ಸೂಚಿಸಿ, ಮೇಧಾ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ನಿಗದಿಪಡಿಸಲಾಗಿದ್ದು, ಅದಕ್ಕೂ ಮುನ್ನ ಉತ್ತರ ನೀಡುವಂತೆ ವಿ.ಕೆ ಸಕ್ಸೇನಾ ಅವರಿಗೆ ಸೂಚಿಸಲಾಗಿದೆ ಎಂದು ಸಕ್ಸೇನಾ ಪರ ವಕೀಲ ಗಜಿಂದರ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿ.ಕೆ ಸಕ್ಸೇನಾ 2001ರಲ್ಲಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನರ್ಮದಾ ಬಚಾವೋ ಆಂದೋಲನದ ನಾಯಕಿ ಮತ್ತು ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರಿಗೆ ಐದು ತಿಂಗಳ ಜೈಲು ಶಿಕ್ಷೆ ವಿಧಿಸಿ ದೆಹಲಿಯ ನ್ಯಾಯಾಲಯ ಜುಲೈ 1, 2024ರಂದು ಆದೇಶಿಸಿತ್ತು.
2001ರಲ್ಲಿ ಪಾಟ್ಕರ್ ವಿರುದ್ಧ ಸಕ್ಸೇನಾ ಪ್ರಕರಣ ದಾಖಲಿಸಿದ್ದರು. ಆಗ ಅವರು ಅಹಮದಾಬಾದ್ ಮೂಲದ ಎನ್‌ಜಿಒ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್‌ನ ಮುಖ್ಯಸ್ಥರಾಗಿದ್ದರು. ನವೆಂಬರ್ 25, 2000ದಲ್ಲಿ “ದೇಶಭಕ್ತನ ನಿಜವಾದ ಮುಖ”ಎಂಬ ಶೀರ್ಷಿಕೆಯಡಿಯಲ್ಲಿ ಪಾಟ್ಕರ್ ಅವರು ನೀಡಿದ್ದ ಪತ್ರಿಕಾ ಪ್ರಕಟನೆಯ ವಿರುದ್ಧ ಮಾನಹಾನಿ ಆರೋಪ ಮಾಡಿ ಸಕ್ಸೇನಾ ಪ್ರಕರಣ ದಾಖಲಿಸಿದ್ದರು.

ಹವಾಲಾ ವಹಿವಾಟಿನಲ್ಲಿ ಮುಳುಗಿರುವ ವಿಕೆ ಸಕ್ಸೇನಾ, ಸ್ವತಃ ಮಾಲೆಗಾಂವ್‌ಗೆ ಬಂದು ಎನ್‌ಬಿಎಯನ್ನು ಹೊಗಳಿ ರೂ. 40,000ರ ಚೆಕ್‌ ಅನ್ನು ನೀಡಿದ್ದಾರೆ. ಲೋಕ ಸಮಿತಿಯು ತ್ವರಿತವಾಗಿ ರಸೀದಿ ಮತ್ತು ಪತ್ರವನ್ನು ಕಳುಹಿಸಿದೆ. ಅದು ಪ್ರಾಮಾಣಿಕತೆ ಮತ್ತು ಉತ್ತಮ ದಾಖಲೆ ಇಟ್ಟುಕೊಳ್ಳುವುದನ್ನು ತೋರಿಸುತ್ತದೆ. ಆದರೆ, ಚೆಕ್ ನಗದೀಕರಿಸಿಲ್ಲ, ಬೌನ್ಸ್ ಆಗಿದೆ. ವಿಚಾರಣೆಯಲ್ಲಿ, ಖಾತೆಯು ಅಸ್ತಿತ್ವದಲ್ಲಿಲ್ಲ ಎಂದು ಬ್ಯಾಂಕ್ ವರದಿ ಮಾಡಿದೆ ಎಂದು ಪಾಟ್ಕರ್ ತಮ್ಮ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದರು.

ಪಾಟ್ಕರ್ ಅವರ ಪ್ರಕಟಣೆ ದುರುದ್ದೇಶಪೂರಿತವಾಗಿದ್ದು, ಸಕ್ಸೇನಾ ಅವರ ಒಳ್ಳೆಯ ಹೆಸರನ್ನು ಹಾಳುಮಾಡುವ ಗುರಿಯನ್ನು ಹೊಂದಿತ್ತು. ಇದರಿಂದ ಅವರ ಸ್ಥಾನಮಾನ ಮತ್ತು ಕ್ರೆಡಿಟ್‌ಗೆ ಗಣನೀಯ ಹಾನಿಯುಂಟಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದರು. ಆರೋಪಿಯ ಹೇಳಿಕೆಗಳು ದೂರುದಾರರನ್ನು ಹೇಡಿ, ದೇಶಪ್ರೇಮಿ ಅಲ್ಲ ಮತ್ತು ಹವಾಲಾ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದೆ. ಇದು ಮಾನಹಾನಿಕರ ಮಾತ್ರವಲ್ಲದೆ, ದೂರದಾರರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟಿಸುತ್ತದೆಎಂದಿದ್ದರು.

Previous Post
ಅಲೋಪತಿ, ಕೊರೋನಿಲ್ ಹೇಳಿಕೆ ತೆಗೆಯಲು ರಾಮ್‌ದೇವ್‌, ಬಾಲಕೃಷ್ಣಗೆ ಸೂಚನೆ
Next Post
ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಕ್ಯಾತೆ ಮೇಕೆದಾಟು ಚರ್ಚೆಗೆ ಸಿದ್ಧ : ನಮಗಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News