ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವ ಶಕ್ತಿ ಕಾವೇರಿ ತಾಯಿ ನೀಡುತ್ತಾಳೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವ ಶಕ್ತಿ ಕಾವೇರಿ ತಾಯಿ ನೀಡುತ್ತಾಳೆ: ಡಿಸಿಎಂ ಡಿ.ಕೆ.ಶಿವಕುಮಾರ್

ಮಂಡ್ಯ (ಕೆಆರ್ ಎಸ್) ಜುಲೈ 29: “ಈ ಬಾರಿ ಉತ್ತಮ ಮಳೆಯಾಗಿರುವ ಪರಿಣಾಮ ಈಗಾಗಲೇ ತಮಿಳುನಾಡಿಗೆ 84 ಟಿಎಂಸಿಯಷ್ಟು ನೀರು ತಲುಪಿದೆ. ಮುಂದಿನ 10 ವರ್ಷವೂ ಬಾಗಿನ ಅರ್ಪಿಸುವಂತಹ ಆಶೀರ್ವಾದವನ್ನು ಕಾವೇರಿ ತಾಯಿ ನಮ್ಮ ಸರ್ಕಾರಕ್ಕೆ ಮಾಡುತ್ತಾಳೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹರ್ಷ ವ್ಯಕ್ತಪಡಿಸಿದರು.

ಕೆಆರ್ ಎಸ್ ಅಣೆಕಟ್ಟಿಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜುಲೈ ತಿಂಗಳಿನಲ್ಲಿ ಪ್ರತಿ ದಿನ 1 ಟಿಎಂಸಿಯಂತೆ ತಮಿಳುನಾಡಿಗೆ 40 ಟಿಎಂಸಿ ನೀರು ಹರಿಸಬೇಕಿತ್ತು. ಅದಕ್ಕಿಂತ ಹೆಚ್ಚಿನ ನೀರು ಹರಿದು ತಾಯಿ ಕಾವೇರಿ ನೆಮ್ಮದಿ ಶಾಂತಿ ತಂದಿದ್ದಾಳೆ” ಎಂದು ಹೇಳಿದರು.

“ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯೋಜನವಿದೆ. ಸಂಕಷ್ಟ ಕಾಲದಲ್ಲಿ  ಅವರ ಪಾಲಿನ 177 ಟಿಎಂಸಿ ನೀರನ್ನು ಅವರಿಗೆ ಹರಿಸಬಹುದು. ಸುಮಾರು 400 ಮೆ.ವ್ಯಾ ವಿದ್ಯುತ್ ತಯಾರಿಸಬಹುದು. ಈ ಅಣೆಕಟ್ಟು ಕಟ್ಟಲು ನ್ಯಾಯಲಯ ಅನುವು ಮಾಡಿಕೊಡುತ್ತದೆ ಎಂದು ನಂಬಿದ್ದೇವೆ. ತಮಿಳುನಾಡಿನ ಜನತೆಗೆ ಭಗವಂತನ ಕೃಪೆಯಿಂದ ಜ್ಞಾನೋದಯವಾಗುತ್ತದೆ. ನಮ್ಮ ಕಾಲದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ” ಎಂದರು.

“2018- 19 ರಲ್ಲಿ 404 ಟಿಎಂಸಿ, 2019-20 ರಲ್ಲಿ 275, 2020- 21 ರಲ್ಲಿ 211, 2021-22 ರಲ್ಲಿ 281, 2022- 23 ರಲ್ಲಿ 667 ಹಾಗೂ  2023-24 ರಲ್ಲಿ 87 ಟಿಎಂಸಿ ನೀರು ತಮಿಳುನಾಡಿಗೆ ಹರಿದಿದೆ. ಈ ವರ್ಷ 84 ಟಿಎಂಸಿ ನೀರು ಹರಿದಿದ್ದು, ಇದೇ ರೀತಿ ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಬೇಕು” ಎಂದು ಹೇಳಿದರು.

ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ

“ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಮತ್ತು ತಮಿಳುನಾಡಿನವರು ಈ ನದಿಯ ಮೂಲಕ ಅನ್ನ ಬೆಳೆಯುತ್ತಿದ್ದೇವೆ. ಎಲ್ಲರ ಪಾಲಿನ ಜೀವನದಿ ಕಾವೇರಿಗೆ 92 ವರ್ಷ ಕಳೆದರೂ ನಮನ ಸಲ್ಲಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿಯಲ್ಲಿ ಈ ವರ್ಷ ಉತ್ತಮ ಮಳೆಯಾಗಲಿ ಎಂದು ಬೇಡಿಕೊಂಡಿದ್ದೆವು. ನಮ್ಮ ಬದುಕು ಉಳಿಸು ಎಂದು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದೆವು, ಮನುಷ್ಯ ಪ್ರಯತ್ನಕ್ಕೆ ಸೋಲಾಗಬಹುದು ಆದರೆ ಪ್ರಾರ್ಥನೆಗೆ ಎಂದೂ ಸೋಲಾಗುವುದಿಲ್ಲ ಎನ್ನುವುದಕ್ಕೆ ಕಾವೇರಿ ತಾಯಿ ತುಂಬಿ ಹರಿಯುತ್ತಿರುವುದೇ ಸಾಕ್ಷಿ. ಸ್ವರ್ಣಗೌರಿ ಹಬ್ಬದ ದಿನ ಮನೆಯ ಹೆಣ್ಣುಮಕ್ಕಳಿಗೆ ಬಾಗಿನ ಅರ್ಪಿಸಿದಂತೆ ಶುಭಗಳಿಗೆಯ ಅಭಿಜಿನ್ ಲಗ್ನದಲ್ಲಿ ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಾಗಿದೆ” ಎಂದರು.

ಮೇಲಿರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಇದೆ ಎಂದು ಗೊತ್ತಿರುವುದಿಲ್ಲ?

“ತಮಿಳುನಾಡಿಗೆ ನಾನು ಅಥವಾ ಸಿದ್ದರಾಮಯ್ಯ ಅವರು ನೀರು ಬಿಟ್ಟಿಲ್ಲ. ತಾಯಿ ಕೃಪೆಯಿಂದ ಹೆಚ್ಚು ಮಳೆ ಬಂದಿದೆ ಆದ ಕಾರಣ ನೀರು ಅವರಿಗೆ ಹೋಗಿದೆ. ಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ನಂತರ ಮಳೆ ಬರಲಿಲ್ಲ, ನೀರು ಬರಲಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು. ಅವರಿಗೆಲ್ಲ ಈಗ ತಕ್ಕ ಉತ್ತರ ಸಿಕ್ಕಿದೆ. ಮೇಲೆ ಇರುವ ಮೋಡಕ್ಕೆ ಕೆಳಗೆ ಯಾವ ಸರ್ಕಾರ ಅಧಿಕಾರದಲ್ಲಿ ಇದೆ ಎನ್ನುವುದು ಗೊತ್ತಿರುವುದಿಲ್ಲ” ಎಂದು ಹೇಳಿದರು.

“ಮಳೆ ಇದೇ ರೀತಿ ಉತ್ತಮವಾಗಿ ಬಂದರೆ ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಈ ವರ್ಷ ನೀಡಬಹುದು. ಕಳೆದ ವರ್ಷ 223 ತಾಲ್ಲೂಕುಗಳಲ್ಲಿ ಬರ ಬಂದಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬರ ಬರುತ್ತದೆ ಎಂದು ಟೀಕೆ ಮಾಡಿದರು. ಆದರೂ ನಾವು ಜನಪರವಾಗಿ ಕೆಲಸ ಮಾಡಿದೆವು. ಏಕೆಂದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಯಾರನ್ನೂ ನಾನು ಟೀಕೆ ಮಾಡುವುದಿಲ್ಲ. ನಮ್ಮ ಕೆಲಸ ಗಳು ಅವರಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತವೆ” ಎಂದು ಹೇಳಿದರು.

82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ

“ಭಾರತದ ಏಳು ಪವಿತ್ರ ನದಿಗಳಲ್ಲಿ ಕಾವೇರಿಯೂ ಒಂದು. ಜನರ ಕುಡಿಯುವ ನೀರು, ವ್ಯವಸಾಯ, ಕೈಗಾರಿಕೆಗಳಿಗೆ ಕಾವೇರಿ ಜೀವ ನೀಡುತ್ತಿದ್ದಾಳೆ. ಈ ವರ್ಷ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಸುಮಾರು 62 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ” ಎಂದು ತಿಳಿಸಿದರು.

“ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ರೂಪ ನೀಡಲು ನಮ್ಮ ಸರ್ಕಾರ ಮುಂದಾಗಿದೆ. ಕಳೆದ ವರ್ಷ ಎಲ್ಲಾ ಕಾಲುವೆಗಳನ್ನು ಸ್ವಚ್ಚಗೊಳಿಸಲಾಗಿದೆ. ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಬೇಕು ಎಂದು 1964-65 ರ ಕಾನೂನಿಗೆ ತಿದ್ದುಪಡಿ ತಂದು ಈ ಬಾರಿಯ ವಿಧಾನಸಭೆಯಲ್ಲಿ ಮಂಡನೆ ಮಾಡಿ ಹೊಸ ಕಾನೂನು ತಂದಿದ್ದೇವೆ. ರೈತರ ಬದುಕು ಹಸನಾಗಬೇಕು ಎಂದು ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು ಎನ್ನುವ ಕನಸನ್ನು ಸಚಿವ ಚೆಲುವರಾಯಸ್ವಾಮಿ ಅವರು ಹೊಂದಿದ್ದಾರೆ. ಇದು ಮಂಡ್ಯ ಜಿಲ್ಲೆಯ ರೈತರ ಬದುಕಿಗೆ ದೊಡ್ಡ ಮಾರ್ಗದರ್ಶನ ಸಿಗಲಿದೆ. ರೈತನಿಗೆ ಬಡ್ತಿ, ಸಂಬಳ, ನಿವೃತ್ತಿ ಎಂಬುದಿಲ್ಲ. ಆದ ಕಾರಣಕ್ಕೆ ರೈತರನ್ನು ನಾವು ಉಳಿಸಬೇಕಿದೆ” ಎಂದರು.

“ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಅಣೆಕಟ್ಟು ಪರಿಹಾರ ಎಂದು ನಾವು ಪಾದಯಾತ್ರೆ ಮಾಡಿದ್ದೆವು. ನಮ್ಮ ಎದುರು ಪಕ್ಷದವರು ಕೋವಿಡ್ ಕಾರಣ ಹೇಳಿ ಪಾದಯಾತ್ರೆಗೆ ತಡೆ ಹಾಕಿದರು. ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಪಾದಯಾತ್ರೆಗೆ ಸೇರುವ ವೇಳೆ ರಾಮನಗರದಲ್ಲಿ ಪಾದಯಾತ್ರೆ ನಿಲ್ಲುವಂತೆ ಮಾಡಲಾಯಿತು. ಯಾರೇ ಏನೇ ತಡೆ ಹಾಕಿದರೂ ಪಾದಯಾತ್ರೆ ಸಂಪೂರ್ಣ ಮಾಡುತ್ತೇವೆ ಎಂದು ಬೆಂಗಳೂರಿನ ತನಕ ಹೆಜ್ಜೆ ಹಾಕಿದೆವು. ಕಾವೇರಿ ತೀರದ ಎಲ್ಲಾ ಪ್ರದೇಶಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಜನ ಸೇವೆಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಜನರ ಋಣ ತೀರಿಸುತ್ತೇವೆ. ನಮ್ಮ ಮೇಲೆ ವಿಶ್ವಾಸವಿರಲಿ” ಎಂದು ತಿಳಿಸಿದರು.

ಬೃಂದಾವನಕ್ಕೆ ಹೊಸ ರೂಪ; ಕಾವೇರಿ ಆರತಿ ಪ್ರಾರಂಭ

“ಬೃಂದಾವನ ಅಣೆಕಟ್ಟಿಗೆ ಮೈಸೂರು ಮಹಾರಾಜರು ಅದ್ಬುತವಾಗಿ ನಿರ್ಮಾಣ ಮಾಡಿದ್ದರು. ಗುಂಡೂರಾವ್ ಅವರು ಇದಕ್ಕೆ ಹೊಸರೂಪ ನೀಡಿದರು. ಪ್ರವಾಸೋದ್ಯಮವನ್ನು ಗುರಿಯಾಗಿಟ್ಟುಕೊಂಡು ಪಿಪಿಪಿ ಮಾದರಿಯಲ್ಲಿ ಹೊಸ ರೂಪ ನೀಡಲು ನಮ್ಮ ಸರ್ಕಾರ ಹೊರಟಿದೆ. ಗಂಗಾ ಆರತಿಗಿಂತ ಮಿಗಿಲಾಗಿ ಪ್ರತಿವಾರ ಕಾವೇರಿ ಆರತಿ ಮಾಡಲಾಗುವುದು. ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಪ್ರಾರಂಭ ಮಾಡಲಾಗುವುದು. ಈಗಾಗಲೇ ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕಾವೇರಿ ಜಲಾನಯದ ಪ್ರದೇಶದ ಶಾಸಕರ ಹಾಗೂ ಸಂಬಂಧಪಟ್ಟ ಇಲಾಖೆಗಳನ್ನು ಸೇರಿಸಿ ಸಮಿತಿ ರಚಿಸಲಾಗಿದೆ” ಎಂದರು.

ರೈತರ ಜಮೀನನ್ನು ಒತ್ತಾಯ ಪೂರ್ವಕವಾಗಿ ವಶಪಡಿಸಿಕೊಳ್ಳುವುದಿಲ್ಲ

“ರೈತರು ಬೃಂದಾವನಕ್ಕೆ ಹೊಸ ರೂಪ ನೀಡುವ ಮೊದಲು ನಮ್ಮ ಜೊತೆ ಚರ್ಚೆ ನಡೆಸಿ ಎಂದು ಹೇಳಿದ್ದಾರೆ. ಯಾವುದೇ ಮುಚ್ಚುಮರೆಯಿಲ್ಲದೇ ಇದರ ಅಭಿವೃದ್ಧಿ ಮಾಡಲಾಗುವುದು ಹಾಗೂ ಅವರ ಜೊತೆ ಚರ್ಚೆ ನಡೆಸಲಾಗುವುದು. ಯಾರ ಜಮೀನು ವಶಪಡಿಸಿಕೊಳ್ಳುವುದಿಲ್ಲ. ಸರ್ಕಾರದ ಜಮೀನಿನಲ್ಲೇ ಅಭಿವೃದ್ಧಿ ಮಾಡಲಾಗುವುದು. ಇಷ್ಟವಿದ್ದವರು ಜಮೀನು ನೀಡಬಹುದು, ಯಾರಿಗೂ ಒತ್ತಾಯ ಮಾಡುವುದಿಲ್ಲ. ಅಣೆಕಟ್ಟಿನ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುವುದು. ಸ್ಥಳೀಯ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡರು ನೀರಾವರಿಗೆ ಸಂಬಂಧಿಸಿದಂತೆ ಅನೇಕ ಮನವಿಗಳನ್ನು ಸಲ್ಲಿಸಿದ್ದಾರೆ. ಅವರ ಮನವಿಗಳನ್ನು ಶೀಘ್ರ ಪರಿಗಣಿಸಲಾಗುವುದು” ಎಂದು ಹೇಳಿದರು.

ಪ್ರತಿವರ್ಷ ಐದು ಮಂದಿಗೆ ಪ್ರಶಸ್ತಿ

ಕಬಿನಿ, ಕೆಆರ್ ಎಸ್, ಹೇಮಾವತಿ ವಿಭಾಗದಲ್ಲಿ ಮೂರು ಜನ ರೈತರು ಹಾಗೂ ಒಬ್ಬ ಪ್ರಗತಿಪರ ರೈತ ಮತ್ತು ಕಿರಿಯ ಎಂಜಿನಿಯರ್ ಅವರಿಗೆ ಕಾವೇರಿ ನೀರಾವರಿ ನಿಗಮದಿಂದ ಪ್ರಶಸ್ತಿ ನೀಡಲಾಗುವುದು” ಎಂದು ತಿಳಿಸಿದರು.

ಮಾಧ್ಯಮ ಪ್ರತಿಕ್ರಿಯೆ

ಬಾಗಿನ ಅರ್ಪಣೆಗೂ ಮುಂಚಿತವಾಗಿ ಕೆಆರ್ ಎಸ್ ಅಣೆಕಟ್ಟಿನ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅತಿಥಿಗೃಹದ ಬಳಿ ಉತ್ತರಿಸಿದ ಡಿಸಿಎಂ ಅವರು  “ಪ್ರಸ್ತುತ ಮಳೆ ಕಡಿಮೆಯಾಗಿದೆ. ಕಾವೇರಿ ನದಿ ತೀರದ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ತಮಿಳುನಾಡಿದ ಸಿಎಂ ಅವರ ರಾಜ್ಯಗಳ ಕೆರೆಗಳನ್ನು ತುಂಬಿಸಲು ಸೂಚನೆ ನೀಡಿದ್ದಾರೆ. ನಾವು ನಮ್ಮ ರಾಜ್ಯದ ಕೆರೆಗಳನ್ನು ತುಂಬಿಸಲಾಗುತ್ತಿದೆ. ನಮ್ಮ ರೈತರನ್ನು ನಾವು ಕಾಪಾಡುತ್ತೇವೆ. ತಮಿಳುನಾಡಿಗೆ ಹಾಗೂ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿ. ಹೆಚ್ಚು ಕಾವೇರಿ ನೀರನ್ನು ಬಳಸಿಕೊಳ್ಳುವ ವಿಚಾರವಾಗಿ ಚರ್ಚೆ ನಡೆಸಬೇಕಾಗಿದೆ” ಎಂದರು.

Previous Post
ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆಯ ಕುರಿತು ತಮಿಳುನಾಡು ಕ್ಯಾತೆ ಮೇಕೆದಾಟು ಚರ್ಚೆಗೆ ಸಿದ್ಧ : ನಮಗಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ಲವ್ ಜಿಹಾದ್ ವಿರುದ್ಧ ಹೊಸ ಮಸೂದೆ ಅಂಗೀಕರಿಸಿದ ಯುಪಿ ಸರ್ಕಾರ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ

Recent News