ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಡಿಸಿಎಂ ಡಿಕೆಶಿ ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಡಿಸಿಎಂ ಡಿಕೆಶಿ ಬೆಂಗಳೂರು, ನೀರಾವರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ

ನವದೆಹಲಿ : ಗಿಫ್ಟ್ ಸಿಟಿ ಮಾದರಿಯಲ್ಲಿ ಬೆಂಗಳೂರನ್ನು ಪರಿಗಣಿಸಬೇಕು ಎಂದು ಈ ಹಿಂದೆ ಮನವಿ ಮಾಡಲಾಗಿತ್ತು. ಇದು ಸಾಧ್ಯವಾಗದ ಕಾರಣಕ್ಕೆ ಸುರಂಗ ರಸ್ತೆ, ಸಿಗ್ನಲ್ ಮುಕ್ತ ರಸ್ತೆ, ಪ್ರಮುಖ ರಸ್ತೆಗಳು ಮತ್ತು ಮಳೆ ನೀರುಗಾಲುವೆಗಳ ಅಭಿವೃದ್ಧಿ ಹಾಗೂ ನೀರಾವರಿಗೆ ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾತನಾಡಿದ ಅವರು, ಬೆಂಗಳೂರು ಅತಿ ಹೆಚ್ಚು ತೆರಿಗೆ ನೀಡುವ ನಗರವಾಗಿದೆ. ಈ ನಗರಕ್ಕೆ ಬಜೆಟ್ ಅಲ್ಲಿ ಏನೋ ದೊರೆತಿಲ್ಲ. ಮಹಾರಾಷ್ಟ್ರದಂತೆ ನಮ್ಮನ್ನು ಪರಿಗಣಿಸಬೇಕು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜೆಎನ್ ನರ್ಮ್ ಯೋಜನೆ ಅಡಿ ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ, ನೆಲಮಂಗಲ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು ಎಂದರು

ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಮಾಡಲು ಸಾಧ್ಯ. ಎರಡು ಪ್ರದೇಶಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ತಿಳಿದರು. ರಾಜ್ಯ ರಾಜಧಾನಿಯಲ್ಲಿ ನೂತನವಾಗಿ ಒಂದಷ್ಟು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಆದ ಕಾರಣ ಈ ಯೋಜನೆಗಳಿಗೂ ಕೇಂದ್ರ ಸರ್ಕಾರ ನೇರವಾಗಬೇಕು ಎಂದು ಕೇಳಲಾಗಿದೆ. ಬೆಂಗಳೂರಿಗೆ ಹೊರಗಿನಿಂದ ಹೆಚ್ಚಿನ ಜನ ಬರುತ್ತಿದ್ದಾರೆ. ಜೊತೆಗೆ ನಗರದ ಮೂಲಸೌರ್ಕಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಬೇಕಿದೆ ಇದಕ್ಕೆ ಅನುದಾನದ ಅವಶ್ಯಕತೆಯಿದೆ ಎಂದು ಪ್ರಧಾನಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ

ಕಳೆದ ಬಜೆಟ್ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮಳೆ ವಿಚಾರ, ತಮಿಳುನಾಡಿಗೆ 40 ಟಿಎಂಸಿ ನೀರು ಬಿಡಬೇಕಿತ್ತು 84 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗಿದೆ ಎಂದು ತಿಳಿಸಿದೆವು. ಒಂದು ಸಭೆ ನಡೆಸಿ ಮಹದಾಯಿ ಯೋಜನೆ ಸಮಸ್ಯೆ ಬಗೆಹರಿಸಬಹುದು ಎಂದು ಅವರ ಗಮನಕ್ಕೆ ತಂದೆವು. ಮೇಕೆದಾಟು ವಿಚಾರವಾಗಿ ನೀವುಗಳೇ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು. ಈ ವಿಚಾರದಲ್ಲಿ ಕೇಂದ್ರ ಮದ್ಯಸ್ತಿಕೆ ವಹಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಬಾರಿಯ ಬಜೆಟ್ ಅಲ್ಲಿ ಕರ್ನಾಟಕದ ಪಾಲಿಗೆ ಅನುದಾನವೇ ಬಂದಿಲ್ಲ. ಅದರಲ್ಲೂ ನೀರಾವರಿಗೆ ಕೊಂಚವೂ ಅನುದಾನ ಬಂದಿಲ್ಲದ ಕಾರಣ ಇವುಗಳನ್ನು ಪ್ರಧಾನಿಗಳ ಗಮನಕ್ಕೆ ತರುವ ಸಲುವಾಗಿ ಭೇಟಿ ಮಾಡಲಾಯಿತು ಎಂದು ತಿಳಿಸಿದರು. ಉತ್ತಮವಾಗಿ ಮಳೆ ಬಂದು ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಯುತ್ತಿರುವ ವಿಚಾರ ಕೇಂದ್ರ ಜಲಶಕ್ತಿ ಸಚಿವರ ಗಮನಕ್ಕೆ ಬಂದಿದೆ. ನಾವು ಸಹ ವಾಸ್ತವಂಶವನ್ನು ಸಚಿವರಿಗೆ ಅರ್ಥ ಮಾಡಿಸುತ್ತೇವೆ ಎಂದು ತಿಳಿಸಿದರು.

ತಮಿಳುನಾಡಿಗೆ ಇತಿಹಾಸದಲ್ಲೇ ಹೆಚ್ಚಿನ ನೀರು ಬಿಡುಗಡೆ

2 ಲಕ್ಷದ 25 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಮಂಗಳವಾರದ ತನಕ ಹರಿಸಲಾಗಿದೆ. ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರನ್ನು ಹರಿಸಲಾಗಿದೆ. ಮಳೆ ಸ್ವಲ್ಪ ತಗ್ಗಿದ ಕಾರಣಕ್ಕೆ ಒಂದು ಮುಕ್ಕಾಲು ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಸುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲೂ ಉತ್ತಮ ಮಳೆಯಾಗುತ್ತಿರುವ ಕಾರಣಕ್ಕೆ ಕಬಿನಿ ಹಾಗೂ ಕೆ ಆರ್ ಎಸ್ ಆಣೆಕಟ್ಟಿನಲ್ಲಿ ನೀರನ್ನು ಸಂಗ್ರಹ ಮಾಡದೆ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು, ನದಿ ಹತ್ತಿರ ಹೋಗಬಾರದು. ಎಚ್ಚರಿಕೆಯಿಂದ ಇರಬೇಕು ಎಂದು ಜನರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮುಡಾ ಪಾದಯಾತ್ರೆ; ನಾವು ತಯಾರಿ ಮಾಡಿಕೊಂಡಿದ್ದೇವೆ

ಮುಡಾ ಅಕ್ರಮ ವಿಚಾರವಾಗಿ ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುವುದಿಲ್ಲ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಈ ವಿಚಾರ ನನಗೆ ತಿಳಿದಿಲ್ಲ. ಇದಕ್ಕೆ ನಾವು ಏನು ಸಿದ್ಧತೆ ಮಾಡಿಕೊಳ್ಳಬೇಕೊ ಅದನ್ನು ಮಾಡಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡುತ್ತೇನೆ ಎಂದರು.

Previous Post
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಸೌಹಾರ್ದ ಭೇಟಿ ಮಾಡಿದರು
Next Post
ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ಬಿಜೆಪಿ ಪಾದಯಾತ್ರೆ ಬಗ್ಗೆ ಕೇಂದ್ರ ಸಚಿವ HD ಕುಮಾರಸ್ವಾಮಿ ಅತೃಪ್ತಿ

Recent News