ಅಂಡಾಣು, ವೀರ್ಯ ದಾನಿಗೆ ಮಗುವಿನ ಮೇಲೆ ಹಕ್ಕಿಲ್ಲ: ಕೋರ್ಟ್

ಅಂಡಾಣು, ವೀರ್ಯ ದಾನಿಗೆ ಮಗುವಿನ ಮೇಲೆ ಹಕ್ಕಿಲ್ಲ: ಕೋರ್ಟ್

ಮುಂಬೈ, ಆ. 14: ವೀರ್ಯ ಅಥವಾ ಅಂಡಾಣು ದಾನ ಮಾಡಿದವರು, ಆ ದಾನದಿಂದ ಜನಿಸಿದ ಮಗುವಿನ ಮೇಲೆ ಕಾನೂನುಬದ್ಧ ಅಧಿಕಾರ ಹೊಂದಿರುವುದಿಲ್ಲ. ಆ ಮಗುವಿನ ಜೈವಿಕ ಪಾಲಕರು ತಾವು ಎಂದು ಹೇಳುವಂತೆಯೂ ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಬಾಡಿಗೆ ತಾಯ್ತನದ ಮೂಲಕ ಜನಿಸಿದ ತನ್ನ ಇಬ್ಬರು ಪುತ್ರಿಯರಿಂದ ತನ್ನನ್ನು ದೂರವಿರಿಸಲಾಗಿದೆ. ತನ್ನ ಪತಿ ಹಾಗೂ ಅಂಡಾಣು ದಾನಿಯಾದ ತನ್ನ ಕಿರಿಯ ಸೋದರಿಯ ಜೊತೆ ಮಕ್ಕಳು ವಾಸಿಸುತ್ತಿದ್ದಾರೆಂದು ದೂರಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಸ್ವಾಭಾವಿಕವಾಗಿ ಗರ್ಭಿಣಿಯಾಗಲು ಸಾಧ್ಯವಾಗದ ತನ್ನ ಅಕ್ಕನಿಗೆ ಸ್ವಯಂಪ್ರೇರಿತವಾಗಿ ಅಂಡಾಣು (ಮೊಟ್ಟೆ) ದಾನ ಮಾಡಿದ್ದ ತಂಗಿ, ಬಳಿಕ ಅಕ್ಕನ ಅವಳಿ ಹೆಣ್ಣು ಮಕ್ಕಳಿಗೆ ತಾನೇ ಜೈವಿಕ ತಾಯಿ ಎಂದು ವಾದಿಸಿದ್ದರು. ಆದರೆ, ನ್ಯಾಯಾಲಯ ಈ ವಾದವನ್ನು ಪುರಸ್ಕರಿಸಲು ನಿರಾಕರಿಸಿದೆ. ಅರ್ಜಿದಾರ ಮಹಿಳೆಯ ತಂಗಿ ಅಂಡಾಣು ದಾನಿಯಾಗಿದ್ದರೂ, ಅವಳಿ ಮಕ್ಕಳ ಮೇಲೆ ಆಕೆಗೆ ಯಾವುದೇ ಕಾನೂನಾತ್ಮಕ ಹಕ್ಕಿರುವುದಿಲ್ಲವೆಂದು ಹೇಳಿದೆ. ಅಲ್ಲದೆ ತನ್ನ ಐದು ವರ್ಷ ವಯಸ್ಸಿನ ಅವಳಿ ಪುತ್ರಿಯರನ್ನು ಸಂದರ್ಶಿಸುವುದಕ್ಕೆ ಅರ್ಜಿದಾರ ಮಹಿಳೆಗೆ ಅನುಮತಿ ನೀಡಿದೆ.
ಅರ್ಜಿದಾರ ಮಹಿಳೆಯ ತಂಗಿ ಅಂಡಾಣು ದಾನಕ್ಕೆ ಸ್ವಇಚ್ಚೆಯಿಂದ ಮುಂದೆ ಬಂದಿದ್ದರು. 2018ರಲ್ಲಿ ಗರ್ಭ ಧರಿಸಿದ ಬಾಡಿಗೆ ತಾಯಿಯೊಬ್ಬರು 2019ರಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ನಡುವೆ 2019ರಲ್ಲಿ ನಡೆದ ಅಪಘಾತವೊಂದರಲ್ಲಿ ಅಂಡಾಣು ದಾನ ಮಾಡಿದ್ದ ತಂಗಿಯ ಪತಿ ಹಾಗೂ ಮಗಳು ಮೃತಪಟ್ಟಿದ್ದರು. ಅರ್ಜಿದಾರ ಮಹಿಳೆ ಹಾಗೂ ಆಕೆಯ ಪತಿ ನಡುವೆ ಮನಸ್ತಾಪ ಉಂಟಾಗಿ ಪತಿಯು 2021ರ ಮಾರ್ಚ್‌ನಲ್ಲಿ ಪತ್ನಿಗೆ ಮಾಹಿತಿ ನೀಡದೆ, ಮಕ್ಕಳೊಂದಿಗೆ ಇನ್ನೊಂದು ಫ್ಲ್ಯಾಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದರು.
ಬಳಿಕ ಆತ, ಅಪಘಾತದಿಂದ ಗಂಡ, ಮಗಳನ್ನು ಕಳೆದುಕೊಂಡಿದ್ದ ಪತ್ನಿಯ ತಂಗಿ ಜೊತೆ ವಾಸಿಸಲು ಪ್ರಾರಂಭಿಸಿದ್ದ. ಮಕ್ಕಳೂ ಅವರ ಜೊತೆಗಿದ್ದರು. ಇದರಿಂದ ಅರ್ಜಿದಾರ ಮಹಿಳೆ ಒಬ್ಬಂಟಿಯಾಗಿದ್ದರು. ಹಾಗಾಗಿ, ತಂಗಿ ಮತ್ತು ತನ್ನ ಪತಿ ಜೊತೆ ಇರುವ ತನ್ನ ಮಕ್ಕಳ ಭೇಟಿಗೆ ಅವಕಾಶ ನೀಡುವಂತೆ ಮಹಿಳೆ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಆಕೆಯ ಮನವಿ ಪುರಸ್ಕರಿಸದ ಹಿನ್ನೆಲೆ, ಹೈಕೋರ್ಟ್ ಮೆಟ್ಟಿಲೇರಿದ್ದರು

Previous Post
ಅಯೋಧ್ಯೆ ರಸ್ತೆಗಳಲ್ಲಿ ಅಳವಡಿಸಿದ್ದ ದೀಪಗಳು ಕಳವು
Next Post
ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಮೋದಿ ಭಾಷಣ, ಕೆಂಪುಕೋಟೆಯ ಸುತ್ತ ಹದ್ದಿನ ಕಣ್ಣು

Recent News