ಆರ್ಎಸ್ಎಸ್ ಮೂಲಕ ದೇಶದ ಉನ್ನತ ಹುದ್ದೆಗಳ ಭರ್ತಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೇಂದ್ರ ಲೋಕಸೇವಾ ಆಯೋಗದ ಬದಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೂಲಕ ದೇಶದ ದೊಡ್ಡ ಹುದ್ದೆಗಳ ನೇಮಕಾತಿ ನಡೆಸುತ್ತಿದೆ ಈ ಮೂಲಕ ಎಸ್ಸಿ ಎಸ್ಟಿ ಓಬಿಸಿಗಳಿಗೆ ಬಹಿರಂಗವಾಗಿ ಅನ್ಯಾಯ ಮಾಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೊಸ್ಟ್ ಮಾಡಿರುವ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾರ್ವಜನಿಕ ಸೇವಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ನರೇಂದ್ರ ಮೋದಿ ಅವರು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ ಲ್ಯಾಟರಲ್ ಎಂಟ್ರಿ ಮೂಲಕ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಮೂಲಕ ಎಸ್ ಸಿ, ಎಸ್ ಟಿ ಮತ್ತು ಒಬಿಸಿ ವರ್ಗಗಳ ಮೀಸಲಾತಿಯನ್ನು ಬಹಿರಂಗವಾಗಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ದೇಶದ ಎಲ್ಲ ಉನ್ನತ ಹುದ್ದೆಗಳಲ್ಲಿ ಹಿಂದುಳಿದವರಿಗೆ ಪ್ರಾತಿನಿಧ್ಯವಿಲ್ಲ ಎಂದು ನಾನು ಯಾವಾಗಲೂ ಹೇಳುತ್ತಿದ್ದೇನೆ, ಅದನ್ನು ಸುಧಾರಿಸುವ ಬದಲು ಎಸ್ಸಿ ಎಸ್ಟಿ ಮತ್ತು ಓಬಿಸಿಗಳನ್ನು ಉನ್ನತ ಸ್ಥಾನಗಳಿಂದ ಮತ್ತಷ್ಟು ತೆಗೆದುಹಾಕಲಾಗುತ್ತಿದೆ. ಇದು UPSCಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳ ಮೇಲಿನ ದರೋಡೆ ಮತ್ತು ಹಿಂದುಳಿದವರಿಗೆ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ ಎಂದರು.
ಕೆಲವು ಕಾರ್ಪೊರೇಟ್ ಸಂಸ್ಥೆಗಳ ಪ್ರತಿನಿಧಿಗಳು ಪ್ರಮುಖ ಸರ್ಕಾರಿ ಹುದ್ದೆಗಳಲ್ಲಿ ಕುಳಿತು ಶೋಷಣೆ ಮಾಡುತ್ತಾರೆ ಇದಕ್ಕೆ ತಾಜಾ ಉದಾಹರಣೆ ಉದಾಹರಣೆ ಸೆಬಿಯಾಗಿದ್ದು ಅಲ್ಲಿ ಖಾಸಗಿ ವಲಯದಿಂದ ಬಂದ ವ್ಯಕ್ತಿಯನ್ನು ಮೊದಲ ಬಾರಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಮೂಲಕ ಆಡಳಿತಾತ್ಮಕ ರಚನೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಘಾಸಿಗೊಳಿಸುವ ಪ್ರಯತ್ನ ನಡೆದಿದ್ದು ಈ ದೇಶವಿರೋಧಿ ಕ್ರಮವನ್ನು ಇಂಡಿಯಾ ಮೈತ್ರಿಕೂಟವು ಬಲವಾಗಿ ವಿರೋಧಿಸುತ್ತದೆ. ಐಎಎಸ್ ಖಾಸಗಿಕರಣ ಮಾಡುವುದು ಮೋದಿ ಅವರ ಗ್ಯಾರಂಟಿ ಎಂದು ತೀಕ್ಷವಾಗಿ ಕುಟುಕಿದ್ದಾರೆ.