ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶ ಬಿಜೆಪಿಗಿಲ್ಲ: ಪ್ರಹ್ಲಾದ್ ಜೋಶಿ

ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಉದ್ದೇಶ ಬಿಜೆಪಿಗಿಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಅಥವಾ ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಬಿಜೆಪಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶನಿವಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ನಾವು ಅಧಿಕಾರಕ್ಕೆ ಬರುವ ಆಲೋಚನೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಸಂಪೂರ್ಣ ಆಡಳಿತ ನಡೆಸಲಿ ಎಂಬುದೇ ಬಿಜೆಪಿಯ ನಿಲುವು ಮತ್ತು ಆಶಯವಾಗಿದೆ. ಕಳೆದ ಬಾರಿ ಬಿಜೆಪಿ 104 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ 68ಕ್ಕೆ ಇಳಿದಿತ್ತು. ಜನ ಅವರನ್ನು ತಿರಸ್ಕಾರ ಮಾಡಿದ್ದರು. ಆದಾಗ್ಯೂ ಕಾಂಗ್ರೆಸ್ – ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿದ್ದರು. ಬಳಿಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಯತ್ನಿಸಿದರು. ಹಾಗಾಗಿ ಆಗಿನ ಸಂದರ್ಭದಲ್ಲಿ ಬಿಜೆಪಿ ಕೂಡ ಸರ್ಕಾರ ರಚಿಸಲು ಪ್ರಯತ್ನಿಸಿತ್ತು. ಆದರೆ, ಈ ಬಾರಿ ಬಿಜೆಪಿ ಅಂತಹ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದು ಹೇಳಿದರು. ರಾಜ್ಯದ ಜನತೆ ಕಾಂಗ್ರೆಸ್‌ಗೆ ಐದು ವರ್ಷಗಳ ಜನಾದೇಶ ನೀಡಿದೆ. ಸರ್ಕಾರವು ತನ್ನ ಅವಧಿಯನ್ನು ಪೂರ್ಣಗೊಳಿಸಲಿ, ಇದು ಬಿಜೆಪಿಯ ಬಯಕೆಯೂ ಹೌದು ಎಂದು ತಿಳಿಸಿದರು.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ ಅಂದರೆ ಭಯ ಪಡುವ ಅಗತ್ಯವಿಲ್ಲ. ಈ ವಿಷಯದಲ್ಲಿ ಅವರು ಕಾನೂನು ಹೋರಾಟ ಮಾಡಲು ನಮ್ಮ ತಕರಾರು ಕೂಡ ಇಲ್ಲ. ಕಾನೂನು ಹೋರಾಟದ ನೆಪದಲ್ಲಿ ತನಿಖೆಗೆ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದರು. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಎಂಬ ಉದ್ದೇಶದಿಂದ ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಆ ಬಳಿಕ ಕಾನೂನು ತಜ್ಞರ ಸಲಹೆ ಪಡೆದು, ಅಳೆದು ತೂಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಉನ್ನತ ಸ್ಥಾನದಲ್ಲಿ ಇದ್ದಾಗ ಯಾವುದೇ ಆರೋಪಗಳು ಬಂದರೆ ಆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸಾರ್ವಜನಿಕ ಜೀವನದಲ್ಲಿ ಶುದ್ಧತೆ ಕಾಯ್ದುಕೊಳ್ಳದಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಂತಾಗುತ್ತದೆ ಎಂದು ಹೇಳಿದರು.

Previous Post
ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ: ಡಿ.ಕೆ. ಶಿವಕುಮಾರ್
Next Post
ಪ್ರಾಸಿಕ್ಯೂಷನ್‌ ಸಂಕಷ್ಟ; ಸಿಎಂ ನಾಳಿನ ಬಳ್ಳಾರಿ, ಮಂತ್ರಾಲಯ ಪ್ರವಾಸ ರದ್ದು

Recent News