ಸಾರ್ವಜನಿಕರ ಕೋಪಕ್ಕೊಳಗಾದರೆ ನಾವು ಕಾಪಾಡಲ್ಲ: ವೈದ್ಯರಿಗೆ ಟಿಎಂಸಿ ಸಂಸದ ಎಚ್ಚರಿಕೆ

ಸಾರ್ವಜನಿಕರ ಕೋಪಕ್ಕೊಳಗಾದರೆ ನಾವು ಕಾಪಾಡಲ್ಲ: ವೈದ್ಯರಿಗೆ ಟಿಎಂಸಿ ಸಂಸದ ಎಚ್ಚರಿಕೆ

ಕೋಲ್ಕತ್ತಾ, ಆ. 19: ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಪ್ರಕರಣ ಖಂಡಿಸಿ ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರದ ನಡುವೆಯೇ ತೃಣಮುಲ ಕಾಂಗ್ರೆಸ್ ಸಂಸದ ಅರೂಪ್ ಚಕ್ರವರ್ತಿ ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅರೂಪ್ ಚಕ್ರವರ್ತಿ, ಸಾರ್ವಜನಿಕರ ಕೋಪದಿಂದ ನಾವು ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎಂದು ವೈದ್ಯರಿಗೆ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ ಪ್ರತಿಭಟನೆ ಹೆಸರಿನಲ್ಲಿ ನೀವು ಮನೆಗೆ ಹೋಗಬಹುದು ಅಥವಾ ನಿಮ್ಮ ಗೆಳೆಯನೊಂದಿಗೆ ಹೋಗಬಹುದು. ನಿಮ್ಮ ಮುಷ್ಕರದಿಂದಾಗಿ ರೋಗಿಯು ಸತ್ತರೆ ಮತ್ತು ಸಾರ್ವಜನಿಕರ ಕೋಪಕ್ಕೊಳಗಾದರೆ ನಾವು ನಿಮ್ಮನ್ನು ಕಾಪಾಡುವುದಿಲ್ಲ ”ಎಂದು ಅರೂಪ್ ಚಕ್ರವರ್ತಿ ಹೇಳಿದ್ದಾರೆ ಈ ಬಗ್ಗೆ ಮತ್ತಷ್ಟು ಕೇಳಿದಾಗ ಅರೂಪ್ ಚಕ್ರವರ್ತಿ ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. “ವೈದ್ಯರು ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ಹೆಸರಿನಲ್ಲಿ ಅವರು ಹೊರಗೆ ಹೋದರೆ ಮತ್ತು ಜನರು ಚಿಕಿತ್ಸೆ ಪಡೆಯದಿದ್ದರೆ, ಸಹಜವಾಗಿ ಜನರು ಕೋಪಗೊಳ್ಳುತ್ತಾರೆ ಇದರಿಂದ ವೈದ್ಯರನ್ನು ಬಚಾವ್ ಮಾಡಲು ನಮ್ಮಿಂದಾಗಲ್ಲ ” ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಆಗಸ್ಟ್ 9 ರಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ಆಗಸ್ಟ್ 14 ರಂದು ಪ್ರತಿಭಟನೆಗಳು ಹೆಚ್ಚಾದಾಗ ಮತ್ತು ಜನಸಮೂಹವು ಪ್ರತಿಭಟನಾ ನಿರತ ವೈದ್ಯರ ಮೇಲೆ ದಾಳಿ ನಡೆಸಿದಾಗ, ಭಾರತೀಯ ವೈದ್ಯಕೀಯ ಸಂಘವು ತುರ್ತು ಸೇವೆಗಳನ್ನು ಹೊರತುಪಡಿಸಿ ದೇಶದಲ್ಲಿ ಮುಷ್ಕರ ನಡೆಸುವುದಾಗಿ ಘೋಷಿಸಿತು. ವೈದ್ಯರು ಕಳೆದ 9 ದಿನಗಳಿಂದ ವೈದ್ಯರು ಮುಷ್ಕರ ನಿರತರಾಗಿದ್ದಾರೆ. ವೈದ್ಯರ ಕೊರತೆಯಿಂದ ದೇಶದಲ್ಲಿ ಆರೋಗ್ಯ ಸೇವೆಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಭಾರತೀಯ ವೈದ್ಯಕೀಯ ಸಂಘದ ಕಿರಿಯ ವೈದ್ಯರ ನೆಟ್‌ವರ್ಕ್‌ನ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಡಾ.ಧ್ರುವ ಚೌಹಾಣ್, “ಕೆಲವು ಆಸ್ಪತ್ರೆ ಆಡಳಿತಗಳು ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವಾಗ ಕರ್ತವ್ಯಕ್ಕೆ ಮರಳುವಂತೆ ವೈದ್ಯರಿಗೆ ಬೆದರಿಕೆ ಹಾಕುತ್ತಿವೆ” ಎಂದು ಆರೋಪಿಸಿದ್ದಾರೆ.

ವೈದ್ಯರ ಭದ್ರತೆ ಖಾತ್ರಿಪಡಿಸುವಲ್ಲಿ ಅಧಿಕಾರಿಗಳು ಅದೇ ಪ್ರಯತ್ನವನ್ನು ಮಾಡಿದ್ದರೆ, ಅವರು ಮುಷ್ಕರ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಇತರ ಟಿಎಂಸಿ ನಾಯಕರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಬೆಂಗಾಲ್ ಉದ್ಯಾನ್ ಗುಹಾ ಕೂಡ ಮಮತಾ ಬ್ಯಾನರ್ಜಿಯ ಬೆಂಬಲಕ್ಕೆ ಬಂದಿದ್ದು, ಸರ್ಕಾರವನ್ನು ದುರ್ಬಲಗೊಳಿಸಲು ಪ್ರಯತ್ನಿಸುವವರಿಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

Previous Post
ಇಂದಿರಾ ಗಾಂಧಿಯಂತೆ ಮಮತಾರನ್ನು ಹತ್ಯೆ ಮಾಡಿ ಎಂದಿದ್ದ ವಿದ್ಯಾರ್ಥಿನಿ ಬಂಧನ
Next Post
ಬ್ರಿಜ್ ಭೂಷಣ್ ವಿರುದ್ಧ ಸಾಕ್ಷಿ ಹೇಳುವ ಕುಸ್ತಿಪಟುಗಳ ಭದ್ರತೆ ವಾಪಸ್: ವಿನೇಶಾ ಫೋಗಟ್

Recent News