ಬೆಂಗಳೂರು, ಆ, 25; ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿ ಆರೋಗ್ಯ ಆರೈಕೆಯಲ್ಲಿ ಉತ್ತಮವಾಗಿದ್ದು, ಆರೋಗ್ಯ ವಲಯದಲ್ಲಿ ದೇಶದ ಸರಾಸರಿಗಿಂತ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿಂದು “ಧೀ ಆಸ್ಪಿಟಲ್ಸ್” ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಶಿಶು ಮರಣ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದ ಸರಾಸರಿಗಿಂತ ಕರ್ನಾಟಕ ಮುಂದಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ಕರ್ನಾಟಕ ಎಲ್ಲಾ ರೀತಿಯಲ್ಲೂ ಮುಂಚೂಣಿಯಲ್ಲಿದೆ. ತಾಯಿ, ಮಗುವಿನ ಆರೋಗ್ಯ ರಕ್ಷಣೆಗೆ ಪ್ರಧಾನ ಆದ್ಯತೆ ನೀಡಿದ್ದು, ದುರ್ಬಲ ವರ್ಗಗಳ ಆರೋಗ್ಯ ನಮ್ಮ ಗುರಿಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಇರಬೇಕು. ನಮ್ಮಲ್ಲಿ ಜಯದೇವ, ಕಿದ್ವಾಯಿಯಂತಹ ಅತ್ಯುತ್ತಮ ಆಸ್ಪತ್ರೆಗಳಿವೆ. ರಾಜ್ಯದ ಎಲ್ಲಾ ವಲಯಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದೆ ಎಂದರು. ಆರೋಗ್ಯ ರಕ್ಷಣೆಯಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದ್ದು, ಆರೋಗ್ಯವಂತ ಸಮಾಜ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಕೂಡ ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮನ್ವಯತೆಯಿದೆ ಮುನ್ನಡೆಯುತ್ತೇವೆ ಎಂದು ಹೇಳಿದರು. ಗುರುದೇವ್ ರವಿಶಂಕರ್ ಗುರೂಜಿ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಉತ್ತಮ ಶಿಕ್ಷಣ ಇದ್ದರೆ ಆರೋಗ್ಯ, ದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮನಸ್ಸು, ದೇಹ, ಶರೀರ, ಜೀವನ ಶೈಲಿ, ನಡೆ, ನುಡಿಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ರೋಗ ತಡೆಗಟ್ಟಬಹುದು. ದೇವರನ್ನು ನೋಡಲು ದೇವಸ್ಥಾನಕ್ಕೆ ಹೋಗಬೇಕಾಗಿಲ್ಲ. ಆಸ್ಪತ್ರೆಯಲ್ಲಿರುವ ವೈದ್ಯರು ನಿಜವಾದ ದೇವರು ಎಂದರು. ಆಸ್ಪತ್ರೆಯ ಸಿಇಒ ಡಾ. ಚಂದ್ರಶೇಖರ್ ಚಿಕ್ಕಮುನಿಯಪ್ಪ ಮಾತನಾಡಿ, ಸಮಾಜದ ಆರೋಗ್ಯಕ್ಕಾಗಿ ವೈದ್ಯರು ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ. ಜನರ ರಕ್ಷಣೆಗೆ ವೈದ್ಯಕೀಯ ಸಮೂಹ ನಿರಂತರವಾಗಿ ಶ್ರಮಿಸುತ್ತಿದೆ. ಆರೋಗ್ಯ ರಕ್ಷಣೆಗೆ ಸರ್ಕಾರದ ಜೊತೆ ಖಾಸಗಿ ವಲಯದ ಪಾತ್ರ ಮಹತ್ವದ್ದಾಗಿದೆ ಎಂದರು. ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಗಗಿ, ರಷ್ಯಾದ ಎ.ಕೆ.ಎಸ್ ರಾಯಭಾರಿ ರವಿಶಂಕರ್ ದಕೋಜು ಮತ್ತಿತರರು ಉಪಸ್ಥಿತರಿದ್ದರು.