ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ
ಬೆಂಗಳೂರು, ಆಗಸ್ಟ್ 26, ಸೋಮವಾರ ಕಾಂಗ್ರೆಸ್ ಶಾಸಕರಿಗೆ ಹಣ ನೀಡುತ್ತೇವೆಂದು ಮುಂದೆ ಬಂದ ಬಿಜೆಪಿ ನಾಯಕರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್ ಆಂಡ್ ರನ್ ಆಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮುಳುಗಿರುವುದರಿಂದ ಸರ್ಕಾರ ಉಳಿಸಿಕೊಳ್ಳಲು ಶಾಸಕರಿಗೆ ಬೇರೆ ದಾರಿ ಇಲ್ಲ. ಇದಕ್ಕಾಗಿ ಬಿಜೆಪಿ ವಿರುದ್ಧ ಆಪಾದನೆ ಮಾಡಲಾಗಿದೆ. ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕುತಂತ್ರವಿದು. ಸರ್ಕಾರ ಬೀಳಿಸಲು ಬಿಜೆಪಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಅವರ ಪಕ್ಷದವರೇ ಸರ್ಕಾರ ಬೀಳಿಸಲು ಮುಂದಾಗಿದ್ದಾರೆ ಎಂದರು. ಕಾಂಗ್ರೆಸ್ ಶಾಸಕರ ಬಳಿ ಬಂದು ಮಾತಾಡಿದ ಬಿಜೆಪಿ ನಾಯಕರು ಯಾರು ಎಂದು ಕಾಂಗ್ರೆಸ್ ನಾಯಕರು ಸ್ಪಷ್ಟವಾಗಿ ತಿಳಿಸಲಿ. ಗ್ಯಾರಂಟಿಗಳನ್ನು ತೆಗೆದುಹಾಕಬೇಕೆಂದು ಶಾಸಕರೇ ಒತ್ತಾಯಿಸುತ್ತಿದ್ದಾರೆ. ಸರ್ಕಾರದಲ್ಲಿ ಹಣವಿಲ್ಲದೆ, ಮದ್ಯದ ತೆರಿಗೆಯನ್ನು ಮೂರನೇ ಬಾರಿಗೆ ಏರಿಕೆ ಮಾಡಲು ಪ್ರಯತ್ನ ಶುರುವಾಗಿದೆ. ನೀರಿನ ದರ ಹಾಗೂ ಬಸ್ ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಪೆಟ್ರೋಲ್, ಮಾರ್ಗಸೂಚಿ ದರ ಹೆಚ್ಚಾಗಿದೆ. ಉಸಿರಾಡುವ ಗಾಳಿಗೂ ತೆರಿಗೆ ಹಾಕಿದರೆ ಇನ್ನು ಯಾವುದೂ ಉಳಿಯುವುದಿಲ್ಲ ಎಂದು ವ್ಯಂಗ್ಯವಾಡಿದರು. ಗ್ಯಾರಂಟಿಗೆ ಹಣ ಮೀಸಲಿಡದೆ ಸರ್ಕಾರ ದಿವಾಳಿಯಾಗಿದೆ. ಇಂತಹ ಸ್ಥಿತಿಯಲ್ಲೂ ಕಾಂಗ್ರೆಸ್ ನಾಯಕರು ಏಣಿ ಹತ್ತಿಸಿದ ಮತದಾರರ ಬಗ್ಗೆ ಬಹಳ ಕೀಳಾಗಿ ಮಾತಾಡುತ್ತಿದ್ದಾರೆ. ಮುಂದೆ ಅಧಿಕಾರಕ್ಕೆ ಬರಲ್ಲ ಎಂಬುದು ಖಚಿತವಾಗಿರುವುದರಿಂದ ಆದಷ್ಟು ಲೂಟಿ ಮಾಡಲು ನೋಡುತ್ತಿದ್ದಾರೆ. ಶಾಸಕರಿಗೆ ಹಣ ಕೊಡಲು ಬಂದವರು ಯಾರೆಂದು ಸರಿಯಾಗಿ ತಿಳಿಸಲಿ. ಇಲ್ಲವಾದರೆ ಇದು ಹಿಟ್ ಆಂಡ್ ರನ್ ಆಗುತ್ತದೆ ಎಂದರು. ಅತ್ಯಾಚಾರ ಪ್ರಕರಣ ಹೆಚ್ಚಳ: ರಾಜ್ಯದಲ್ಲಿ ಲವ್ ಜಿಹಾದ್ ಲಿಂಕ್ ಇರುವ ಅತ್ಯಾಚಾರ ಪ್ರಕರಣ ಉಡುಪಿಯಲ್ಲಿ ನಡೆದಿದೆ. ಈ ಹಿಂದೆ ಹುಬ್ಬಳ್ಳಿ, ಹಾವೇರಿಯಲ್ಲಿ ನಡೆದ ಪ್ರಕರಣಗಳನ್ನು ಮುಚ್ಚಿ ಹಾಕಲಾಗಿದೆ. ಇದು ಪೂರ್ವ ನಿಯೋಜಿತವಾಗಿ ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇದು ಹೆಚ್ಚಿದ್ದು, ಸರ್ಕಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ. ಕಾಂಗ್ರೆಸ್ ತಮ್ಮನ್ನು ಏನೂ ಮಾಡುವುದಿಲ್ಲ ಎಂಬ ನಂಬಿಕೆ ಇಂತಹವರಿಗೆ ಬಂದಿದೆ. ಕೇರಳದಲ್ಲಿ ಲವ್ ಜಿಹಾದ್ ಕೇಂದ್ರವೂ ಇದ್ದು, ಅಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತಿದೆ. 2047 ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುತ್ತೇವೆ ಎಂಬ ಕರಪತ್ರಗಳು ಕೂಡ ಹರಿದಾಡಿವೆ ಎಂದರು.
ಕೊಲೆ ಆರೋಪಿ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರವಾಗಿ ಮಾತನಾಡಿದ ಅವರು, ಫೋಟೋ ತೆಗೆಯಲು ಮೊಬೈಲ್ ಎಲ್ಲಿಂದ ಬಂತು. ಇದೆಲ್ಲ ನುಳುಚಿಕೊಳ್ಳುವ ವಿಚಾರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಇಷ್ಟೆಲ್ಲ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ, ಕೆಲವು ಮಂತ್ರಿಗಳು ನಮಗೆ ಯಾವ ಖಾತೆ ಸಿಗುತ್ತದೆ, ಯಾವ ಖಾತೆ ಹೋಗುತ್ತದೆ ಅಂತ ಭೀತಿಯಲ್ಲಿದ್ದಾರೆ. ಈ ಅವಧಿಯಲ್ಲೇ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲು ತಂತ್ರ ಮಾಡುತ್ತಿದ್ದಾರೆ.ಜೈಲಿನಲ್ಲಿ ನಡೆದ ಘಟನೆ ಬಗ್ಗೆ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಅನ್ನು ಸಿಪಿ ಯೋಗೇಶ್ವರ್ ಅವರಿಗೆ ನೀಡುವಂತೆ ಹೈಕಮಾಂಡ್ ಬಳಿ ಮನವಿ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು, ಅಶ್ವತ್ಥ್ ನಾರಾಯಣ ಸಿ.ಪಿ.ಯೋಗೇಶ್ವರ್ ಅವರನ್ನು ಭೇಟಿ ಮಾಡಿದ್ದೇವೆ. ಹಾಗೆ ಹೆಚ್. ಡಿ.ಕುಮಾರಸ್ವಾಮಿ ಅವರ ಜೊತೆ ಕೂಡ ಚರ್ಚೆ ಮಾಡಿದ್ದೇವೆ. ಸಿಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಕೇಳುತ್ತೇವೆ. ಯಾವಾಗ ದೆಹಲಿಗೆ ಹೋಗುತ್ತೇವೆ ಎಂದು ಶೀಘ್ರದಲ್ಲೇ ತಿಳಿಸುತ್ತೇವೆ ಎಂದ ಹೇಳಿದರು.