Four prominent Malayalam actors accused of sexual assault

ಮಲಯಾಳಂನ ನಾಲ್ವರು ಪ್ರಮುಖ ನಟರ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ

ತಿರುವನಂತಪುರ, ಆ. 26: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಂಜಿತ್ ಮತ್ತು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ತಮ್ಮ ಸ್ಥಾನದಿಂದ ಕೆಳಗಿಳಿದ ಬೆನ್ನಲ್ಲೇ, ಕೇರಳ ವಿಧಾನಸಭೆಗೆ ಎರಡು ಬಾರಿ ಆಯ್ಕೆಯಾಗಿರುವ ಸಿಪಿ (ಎಂ) ಶಾಸಕ ಸೇರಿದಂತೆ ಹಲವು ನಟರಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದಾಗಿ ನಟಿ ಮಿನು ಮುನೀರ್ ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮಿನು ಮುನೀರ್, ನಟರಾದ ಜಯಸೂರ್ಯ, ಮಣಿಯನ್ ಪಿಳ್ಳ ರಾಜು, ಶಾಸಕ ಹಾಗೂ ನಟ ಮುಖೇಶ್, ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಪ್ರಮುಖ ನಾಯಕ ಇಡವೇಳ ಬಾಬು ಅವರನ್ನು ಹೆಸರಿಸಿದ್ದಾರೆ. ಮಿನು ಮುನೀರ್ ಅವರ ಆರೋಪಗಳಿಗೆ ಮುಖೇಶ್, ಜಯಸೂರ್ಯ ಮತ್ತು ಬಾಬು ಪ್ರತಿಕ್ರಿಯಿಸಿಲ್ಲ. ರಾಜು ಮಾತ್ರ ತನಿಖೆಗೆ ಸ್ವಾಗತ ಎಂದಿದ್ದಾರೆ. “ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾದ ಆರೋಪಗಳ ತನಿಖೆಗೆ ನಿಯೋಜಿಸಲಾದ ರಾಜ್ಯ ಪೊಲೀಸ್ ತಂಡಕ್ಕೆ ನಾನು ದೂರು ನೀಡುತ್ತೇನೆ” ಎಂದು ಮಿನು ಮುನೀರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Four prominent Malayalam actors accused of sexual assault
Four prominent Malayalam actors accused of sexual assault

2009ರಲ್ಲಿ ತೆರೆಗೆ ಬಂದ ‘ಕ್ಯಾಲೆಂಡರ್’ ಮತ್ತು 2011ರಲ್ಲಿ ತೆರೆಕಂಡ ‘ನಾಡಗಮೆ ಉಲಗಂ’ ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಹೋಟೆಲ್‌ನಲ್ಲಿ ನಟರೊಬ್ಬರು ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಮಿನು ದೂರಿದ್ದಾರೆ. “ಆತ (ನಟ) ನನ್ನ ಕೊಠಡಿಗೆ ಬಂದು ನನ್ನನ್ನು ಎಳೆದು ಬೆಡ್ ಮೇಲೆ ಹಾಕಿದರು. ಬಳಿಕ ಉತ್ತಮ ಅವಕಾಶಕ್ಕಾಗಿ ನಾನು ಪರಿಗಣಿಸಬೇಕಾದವರನ್ನು ಪರಿಗಣಿಸಬೇಕು ಎಂದು ಹೇಳಿದರು. ಬಳಿಕ ನಾನು ಅಲ್ಲಿಂದ ಹೊರಟೆ..ಅದಕ್ಕೂ ಮುನ್ನ ಕಾರಿನಲ್ಲಿ ಹೋಗುತ್ತಿದ್ದಾಗ ಮತ್ತೊಬ್ಬ ನಟ ರಾತ್ರಿ ನನ್ನ ಕೋಣೆಗೆ ಬರುವುದಾಗಿ ಹೇಳಿದ್ದರು. ಮರುದಿನ ರಾತ್ರಿ ಅವರು ಬಂದು ನನ್ನ ಕೋಣೆಯ ಬಾಗಿಲು ತಟ್ಟಿದ್ದರು” ಮಿನು ಹೇಳಿದ್ದಾರೆ. 2008ರಲ್ಲಿ ಇನ್ನೋರ್ವ ನಟ ದುರ್ವರ್ತನೆ ತೋರಿರುವುದಾಗಿ ಮಿನು ವಿವರಿಸಿದ್ದಾರೆ.
“ರಾಜ್ಯ ರಾಜಧಾನಿಯಲ್ಲಿ ಚಿತ್ರೀಕರಣದ ಸಮಯದಲ್ಲಿ, ನಾನು ವಿಶ್ರಾಂತಿ ಕೊಠಡಿಯಿಂದ ಹಿಂತಿರುಗುತ್ತಿದ್ದಾಗ, ನಟರೊಬ್ಬರು ನನ್ನನ್ನು ಹಿಂದಿನಿಂದ ತಬ್ಬಿ ಹಿಡಿದು ಮುತ್ತಿಕ್ಕಿದರು. ನಾನು ಅವರನ್ನು ತಳ್ಳಿ ಓಡಿಹೋದೆ. ನನ್ನನ್ನು ಅವರ ಫ್ಲಾಟ್‌ಗೆ ಆಹ್ವಾನಿಸಿದ್ದರು. ನಾನು ಆ ಆಹ್ವಾನವನ್ನು ತಿರಸ್ಕರಿಸಿದ ನಂತರ, ಅವರ ಕಡೆಯಿಂದ ಯಾವುದೇ ಸಮಸ್ಯೆ ಇರಲಿಲ್ಲ” ಎಂದು ಮಿನು ಹೇಳಿಕೊಂಡಿದ್ದಾರೆ.
“2013ರಲ್ಲಿ ಚಲನಚಿತ್ರ ಕಲಾವಿದರ ಸಂಘ (ಅಮ್ಮ) ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ನಾನು ಮುಂದಾಗಿದ್ದೆ. ಆಗ ಅರ್ಜಿ ನಮೂನೆ ಭರ್ತಿ ಮಾಡುವ ಬಗ್ಗೆ ತಿಳಿಯಲು ನಾನು ನಟರೊಬ್ಬರಿಗೆ ಫೋನ್‌ ಕರೆ ಮಾಡಿದಾಗ, ಅವರು ನನ್ನನ್ನು ತಮ್ಮ ಫ್ಲಾಟ್‌ಗೆ ಆಹ್ವಾನಿಸಿದ್ದರು. ನಾನು ಅವರ ಫ್ಲಾಟ್‌ನಲ್ಲಿ ಅರ್ಜಿ ನಮೂನೆ ತುಂಬುತ್ತಿದ್ದಾಗ ಅವರು ಹಿಂದಿನಿಂದ ನನ್ನ ಕತ್ತಿಗೆ ಮುತ್ತಿಟ್ಟರು. ನಾನು ಫ್ಲಾಟ್‌ನಿಂದ ಹೊರಗೆ ಓಡಿದೆ. ನನಗೆ ಇದುವರೆಗೆ ಸದಸ್ಯತ್ವ ಸಿಕ್ಕಿಲ್ಲ” ವಿವರಿಸಿದ್ದಾರೆ. “ಈ ರೀತಿಯ ‘ಅನುಭವಗಳಿಂದ’ ನಾನು ಮಲಯಾಳಂ ಚಲನಚಿತ್ರೋದ್ಯಮ ತೊರೆದು ಚೆನ್ನೈಗೆ ಸ್ಥಳಾಂತರಗೊಳ್ಳುವಂತೆ ಆಯಿತು” ಎಂದು ಮಿನು ಮುನೀರ್ ತಿಳಿಸಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ: ತನಿಖೆಗೆ ತಂಡ ರಚನೆ :

ಕೇರಳದಲ್ಲಿ ತೀವ್ರ ಸಂಚಲ ಸೃಷ್ಟಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದೆ. ಪೊಲೀಸ್ ಮಹಾ ನಿರೀಕ್ಷಕ ಸ್ಪರ್ಜನ್ ಕುಮಾರ್ ನೇತೃತ್ವದ ಏಳು ಜನರ ವಿಶೇಷ ತಂಡದಲ್ಲಿ, ರಾಜ್ಯದ ನಾಲ್ವರು ಮಹಿಳಾ ಐಪಿಎಸ್ ಅಧಿಕಾರಿಗಳು ಇದ್ದಾರೆ. ಕ್ರೈಂ ಬ್ರಾಂಚ್ ಎಡಿಜಿಪಿ ಹೆಚ್. ವೆಂಕಟೇಶ್ ಅವರು ತಂಡದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತ ಆಘಾತಕಾರಿ ಮಾಹಿತಿಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಇತ್ತೀಚೆಗೆ ಬಿಚ್ಚಿಟ್ಟಿತ್ತು. ವರದಿ ಬಹಿರಂಗಗೊಂಡ ಬಳಿಕ ಅದರಲ್ಲಿ ಆರೋಪಿಸಿರುವ ಪ್ರಕರಣಗಳ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ತಿರುವನಂತಪುರ ನಿವಾಸಿ ನವಾಝ್ ಎಂಬುವರು ಕೇರಳ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ನ್ಯಾಯಮೂರ್ತಿ ಎ.ಮುಷ್ತಾಕ್ ಹಾಗೂ ನ್ಯಾಯಮೂರ್ತಿ ಎಸ್. ಮಾನು ಅವರಿದ್ದ ವಿಭಾಗೀಯ ಪೀಠ, ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Previous Post
ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳ ಸ್ಥಾಪನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ
Next Post
ಇಸ್ರೇಲ್ಗೆ ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸುವಂತೆ ಬಿಜೆಪಿಗೆ ಮಿತ್ರಪಕ್ಷ ಜೆಡಿಯು ಒತ್ತಾಯ

Recent News