ನವದೆಹಲಿ : ಗುಜರಾತ್ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಸುಮಾರು 15ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಮಳೆ ಇನ್ನೂ ಕೂಡಾ ಅಧಿಕವಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈಗಾಗಲೇ 23,000ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಗುಜರಾತ್ನ ವಿವಿಧ ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.
ನಿರಾಶ್ರಿತರಿಗೆ ವಸತಿ ಒದಗಿಸುವ ಕಾರ್ಯವನ್ನು ವೇಗಗೊಳಿಸುವ ನಿಟ್ಟಿನಲ್ಲಿ ಗುಜರಾತ್ ಸರ್ಕಾರವು ಆರು ಭಾರತೀಯ ಸೇನೆಯ ಕಾಲಂಗಳನ್ನು ಕೋರಿದೆ. ದ್ವಾರಕಾ, ಆನಂದ್, ವಡೋದರಾ, ಖೇಡಾ, ಮೊರ್ಬಿ ಮತ್ತು ರಾಜಕೋಟ್ನಲ್ಲಿ ತಲಾ ಒಂದು ಕಾಲಂಗಳನ್ನು ಕೋರಿದೆ. ವಿಪತ್ತು ನಿರ್ವಹಣೆ ಪ್ರಯತ್ನಗಳಿಗೆ ಬೆಂಬಲ ನೀಡಲು ಈಗಾಗಲೇ 14 ಎನ್ಡಿಆರ್ಎಫ್ ತಂಡ ಮತ್ತು 22 ಎಸ್ಡಿಎಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ.
ಗುಜರಾತ್ನ ಸುರೇಂದ್ರನಗರ ಜಿಲ್ಲೆಯ ಭೋಗಾವೊ ನದಿಯ ನೀರಿನ ಹಠಾತ್ ಏರಿಕೆಯಿಂದಾಗಿ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸುಮಾರು 100 ಮೀಟರ್ ಉದ್ದದ ಸೇತುವೆಯು ಹಬಿಯಾಸರ್ ಗ್ರಾಮವನ್ನು ಚೋಟಿಲಾ ಪಟ್ಟಣದೊಂದಿಗೆ ಸಂಪರ್ಕಿಸುತ್ತದೆ. ಈ ಸೇತುವೆ ಕುಸಿತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಂಗಳವಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದರು. ಅತಿವೃಷ್ಟಿಯಿಂದ ತುಂಬಿ ಹರಿಯುತ್ತಿರುವ ನದಿ, ಚರಂಡಿ, ಕೆರೆಗಳಿಗೆ ಯಾರೂ ಹೋಗದಂತೆ ಸಂಪೂರ್ಣ ನಿಗಾವಹಿಸಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಗುಜರಾತ್ನ ಮಳೆ ಪರಿಸ್ಥಿತಿಯ ಬಗ್ಗೆ ಭೂಪೇಂದ್ರ ಪಟೇಲ್ ಅವರೊಂದಿಗೆ ಪ್ರಧಾನಿ ಮೋದಿ ಕೂಡಾ ಮಾತಾನಾಡಿದ್ದಾರೆ.