ಬೆಂಗಳೂರು : ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿ ಪರಿವರ್ತಿಸಿ ಉದ್ಯೋಗ ಹಾಗೂ ಇತರ ಕಾರಣಗಳಿಗೆ ಕನ್ನಡ ಭಾಷೆಯನ್ನೇ ಪ್ರಧಾನವನ್ನಾಗಿಸುವ ಸವಾಲು ನಮ್ಮ ಮುಂದಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲರೂ ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ ಕರೆ ನೀಡಿದ್ದಾರೆ. ಅಮೇರಿಕಾ ದೇಶದ ವರ್ಜೀನಿಯಾ ರಾಜ್ಯದ ರಾಜಧಾನಿಯಾಗಿರುವ ರಿಚ್ಮಂಡ್ ನಗರದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ೧೨ ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ವ್ಯವಹಾರಿಕವಾಗಿ ಕನ್ನಡ ಬಳಸುವುದನ್ನು ಕಡಿಮೆ ಮಾಡುತ್ತಿದ್ದು, ಉದ್ಯೋಗ ಹಾಗೂ ಇತರೆ ಕಾರಣಗಳಿಗಾಗಿ ಬಹುತೇಕ ಜನರು ಆಂಗ್ಲ ಭಾಷೆಯನ್ನೇ ಬಳಸುತ್ತಿದ್ದಾರೆ. ಹೀಗಾಗಿ ಕನ್ನಡ ಭಾಷೆಯಲ್ಲಿಯೇ ಕಲಿತರೂ ಸೂಕ್ತ ಉದ್ಯೋಗ ದೊರೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದರು. ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅಂತೆಯೇ ಕನ್ನಡವೂ ಸಹ ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿದೆ ಎನ್ನುವ ಹೇಳಿಕೆಗಳನ್ನು ಅಲ್ಲಗಳೆಯಲಾರದ ಸ್ಥಿತಿ ಇಂದು ನಿರ್ಮಾಣವಾಗಿದೆ. ಇಂದಿನ ಜಾಗತಿಕ ಪೈಪೋಟಿಯ ಭರಾಟೆಯಲ್ಲಿ ನಮ್ಮ ಮಾತೃ ಭಾಷೆಯನ್ನು ಮರೆತು ಅನ್ಯ ಭಾಷೆಗೆ ಜೋತು ಬೀಳುವ ವಾತಾವರಣ ಇಂದು ಎಲ್ಲೆಡೆ ಕಾಣಸಿಗುತ್ತಿರುವುದು ದುರ್ದೈವದ ಸಂಗತಿ ಎಂದರು. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕತ್ವದ ಅಸ್ತಿತ್ವಕ್ಕಾಗಿ “ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್, ಡೆಪ್ಯೂಟಿ ಚನ್ನಬಸಪ್ಪ ಮತ್ತಿತರ ಮಹಾನ್ ಪುರುಷರು ಕನ್ನಡ ಪ್ರಜ್ಞೆಯನ್ನು ಉಳಿಸಿ, ಬೆಳೆಸಿ ಕನ್ನಡದ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಿ ಚಲುವ ಕನ್ನಡ ನಾಡನ್ನು ಕಟ್ಟಲು ಶ್ರಮಿಸಿದ ಇತಿಹಾಸ ನಾವೆಲ್ಲರೂ ಇಂದು ಅರಿಯಬೇಕಿದೆ. ಕನ್ನಡದ ರಕ್ಷಣೆ ಕೇವಲ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಹಳ್ಳಿಗರಿಂದ ಎಂಬ ಮಾತು ಇಂದು ಸತ್ಯವಾಗುತ್ತಿದ್ದು, ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಓದಿದ ಹಾಗೂ ಓದುತ್ತಿರುವವರಿಂದ ಕನ್ನಡದ ಬಗೆಗಿನ ಅಸಡ್ಡೆ ಕಂಡು ಬರುತ್ತಿರುವುದು ದುರದೃಷ್ಠಕರ ಸಂಗತಿಯಾಗಿದೆ ಎಂದು ಹೊರಟ್ಟಿ ನುಡಿದರು. ನಾಡು ಉಳಿಯಬೇಕೆಂದರೆ ಭಾಷೆ ಉಳಿಯಬೇಕು, ಭಾಷೆ ಉಳಿಯಬೇಕೆಂದರೆ ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ್ಮ ಅದ್ಯತೆಯ ಭಾಷೆ ಮೊದಲು ಕನ್ನಡವಾಗಿ ನಂತರ ಇತರ ಭಾಷೆಗಳಾಗಿರಬೇಕು. ಕನ್ನಡದಲ್ಲಿ ಲಭ್ಯವಿಲ್ಲದ್ದನ್ನು ಲಭ್ಯ ಮಾಡಿಕೊಂಡು ಅದನ್ನು ಎಲ್ಲರಿಗೂ ತಲುಪಿಸುವ ಮೂಲಕ ನಮ್ಮ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು, ಕಲಿಯಬೇಕು, ಆದರೆ ನಮ್ಮ ಕನ್ನಡವನ್ನು ಸಾಂಸ್ಕೃತಿವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕಿದೆ ಎಂದರು. ಕನ್ನಡ ತಾಯಿ ಕರ್ನಾಟಕದಲ್ಲಿ ಕಳೆದು ಹೋಗದಂತೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಿ ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗಳ ಉಳಿವಿಗಾಗಿ ಶ್ರಮಿಸಬೇಕು, ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಸಹ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದೆ, ಇದರ ಕಟ್ಟುನಿಟ್ಟಿನ ಪಾಲನೆಯಾಗುವತ್ತ ಕರ್ನಾಟಕ ಸರ್ಕಾರ ಹಾಗೂ ಅಧಿಕಾರಿಗಳು ಸಹ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಶ್ರೀ ಬಸವರಾಜ ಹೊರಟ್ಟಿ ನುಡಿದರು. ಜಗತ್ತಿನೆಲ್ಲೆಡೆ ಇರುವ ಕನ್ನಡಿಗರು ಎಂದೆಂದಿಗೂ ಕನ್ನಡಿಗರಾಗಿ ಉಳಿದು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಂಕಲ್ಪದ ಭಾಗವಾಗಿ ಇಂದಿನ ಅಕ್ಕ ಕನ್ನಡ ಸಮ್ಮೇಳನ ಅಮೇರಿಕಾದಲ್ಲಿ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಶ್ರೀ ಬಸವರಾಜ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಸಚಿವರು, ಶಾಸಕರು, ಕನ್ನಡನಾಡಿನ ಹಲವು ಪ್ರತಿಷ್ಠಿತ ಧಾರ್ಮಿಕ ಮಠಗಳ ಮಠಾಧೀಶರುಗಳು, ಸಾಹಿತಿಗಳು , ಚಿಂತಕರು ಸೇರಿದಂತೆ . ಅಮೇರಿಕಾದ ವಿವಿಧ ಪ್ರದೇಶಗಳಲ್ಲಿರುವ ಕನ್ನಡಿಗರು ಪಾಲ್ಗೊಂಡಿದ್ದಾರೆ.
ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು ಗಂಭೀರ ಚಿಂತನೆ ಅಗತ್ಯ : ಬಸವರಾಜ ಹೊರಟ್ಟಿ
Recent News
- ಸತೀಶ್ ಜಾರಕಿಹೋಳಿ ಸಿಎಂ ಆದರೆ ನನ್ನ ಸಂಪೂರ್ಣ ಬೆಂಬಲವಿದೆ: ಲಕ್ಷ್ಮಣ್ ಸವದಿ
- ರಾಜ್ಯದ ಚುಕ್ಕಾಣಿ ಬದಲಾವಣೆ ಆದರೂ ಆಶ್ಚರ್ಯ ಇಲ್ಲ: ಬಸವರಾಜ ಬೊಮ್ಮಾಯಿ
- ಓದುವ ಬೆಳಕು ಕಾರ್ಯಕ್ರಮದಡಿ ಸೆಪ್ಟೆಂಬರ್ ತಿಂಗಳಲ್ಲಿ : ಅರಿವು ಕೇಂದ್ರಗಳಲ್ಲಿ ವಿಶೇಷ ಕಾರ್ಯಕ್ರಮ: ಪ್ರಿಯಾಂಕ್ ಖರ್ಗೆ
- ನಗರದಲ್ಲಿ ರಸ್ತೆಗುಂಡಿ ಮುಚ್ಚಲು ಉಪಮುಖ್ಯಮಂತ್ರಿ 15 ದಿನ ಗಡುವು
- ಕ್ಷಮೆಯಾಚಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
- ಇನ್ನೆರಡು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ: ಬಸವರಾಜ ಬೊಮ್ಮಾಯಿ
- ಕಾಂಗ್ರೆಸ್ ಸೇರಿದ ವಿನೇಶಾ ಫೋಗಟ್, ಬಜರಂಗ್ ಪುನಿಯಾ
- ಇಡಿ ನಡೆಗೆ ಸುಪ್ರೀಂ ಕೋರ್ಟ್ ಕಿಡಿ
- ಏತ ನೀರಾವರಿ ಯೋಜನೆಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಿ: ಸಚಿವ ಎನ್ ಎಸ್ ಭೋಸರಾಜು
- ಪ್ರತಿಯೊಬ್ಬ ನಟಿಯರದ್ದೂ ಒಂದೊಂದು ಕಥೆಯಿದೆ, ಅದು ಎಲ್ಲಾ ನಟರಿಗೂ ಗೊತ್ತಿದೆ: ರಾಧಿಕಾ