ಆಂಧ್ರ ತೆಲಂಗಾಣದಲ್ಲಿ ಭಾರಿ ಮಳೆ ಪ್ರವಾಹ ; 35 ಮಂದಿ ಸಾವು
ಹೈದ್ರಬಾದ್ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿದ್ದು 35 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಿಂದ 19 ಜನರು ಸಾವನ್ನಪ್ಪಿದ್ದರೆ, ತೆಲಂಗಾಣದಲ್ಲಿ ಮಳೆ ಮತ್ತು ಪ್ರವಾಹದ ಪ್ರಕೋಪಕ್ಕೆ 16 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ರಾಜ್ಯಗಳಲ್ಲಿ 47,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ ಒಟ್ಟು 47 ರಕ್ಷಣಾ ತಂಡಗಳನ್ನು ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. 3.5 ಲಕ್ಷಕ್ಕೂ ಅಧಿಕ ಜನರಿಗೆ ಆಹಾರ ಪೊಟ್ಟಣಗಳು, ಕುಡಿಯುವ ನೀರು ವಿತರಿಸಲಾಗಿದೆ.
ಅದಿಲಾಬಾದ್, ಮಂಚೇರಿಯಲ್, ಖಮ್ಮಂ, ಸೂರ್ಯಪೇಟ್, ಕೊಮಾರಂ ಭೀಮ್ ಆಸಿಫಾಬಾದ್, ಪೆದ್ದಪಲ್ಲಿ, ಜಯಶಂಕರ್ ಭೂಪಾಲಪಲ್ಲಿ, ಮುಲುಗು, ಭದ್ರಾದ್ರಿ ಕೊತಗುಡೆಂ, ಮತ್ತು ಮಹಬೂಬಾಬಾದ್ ಸೇರಿದಂತೆ ತೆಲಂಗಾಣದ 10 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಕುರಿತು ಹವಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಸಂಭವಿಸಿದ ಪ್ರವಾಹವನ್ನು ಅದರಲ್ಲೂ ವಿಶೇಷವಾಗಿ ವಿಜಯವಾಡದಲ್ಲಿ ಅವಘಡ ರಾಜ್ಯ ಕಂಡ “ದೊಡ್ಡ ದುರಂತ” ಎಂದು ಕರೆದಿದ್ದಾರೆ. ಸದ್ಯ ಎನ್‌ಟಿಆರ್ ಜಿಲ್ಲೆಯ ಕಲೆಕ್ಟರೇಟ್‌ನಲ್ಲಿ ತಂಗಿರುವ ಅವರು ಆಂಧ್ರಪ್ರದೇಶದ ಪ್ರವಾಹವನ್ನು ನೈಸರ್ಗಿಕ ವಿಕೋಪ ಎಂದು ಘೋಷಿಸಲು ಕೇಂದ್ರಕ್ಕೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದಾಗಿ ಇದುವರೆಗೆ 5,000 ಕೋಟಿ ರೂಪಾಯಿಗೂ ಹೆಚ್ಚು ಹಾನಿಯಾಗಿದೆ, ಕೇಂದ್ರದಿಂದ 2,000 ಕೋಟಿ ರೂಪಾಯಿಗಳ ತಕ್ಷಣದ ಪರಿಹಾರ ನೆರವು ಕೋರಿದ್ದಾರೆ, ಇದೇ ವೇಳೆ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
10 ಗಂಟೆಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡು ನೆರವಿಗಾಗಿ ಕಾದಿದ್ದ 9 ಜನರನ್ನು ಪ್ರಾಣವನ್ನ ಪಣಕ್ಕಿಟ್ಟು ಜೆಸಿಬಿ ಚಾಲಕ ರಕ್ಷಿಸಿದ್ದಾನೆ. ಖಮ್ಮಂನ ಪ್ರಕಾಶ್ ನಗರ ಸೇತುವೆ ಮೇಲೆ 9 ಜನರಿದ್ದರು, ಹೆಲಿಕ್ಯಾಪ್ಟರ್ ಮೂಲಕ ರಕ್ಷಣೆಗೆ ಹವಮಾನ ಪರಿಸ್ಥಿತಿ ಅಡ್ಡಿಯಾದ ಹಿನ್ನಲೆ ಸ್ಥಳೀಯ ವ್ಯಕ್ತಿ ಶುಭಂ ಖಾನ್ ಜನರನ್ನು ರಕ್ಷಿಸಿದ್ದಾರೆ.
ಭಯಂಕರ ಮಳೆಗೆ ತತ್ತರಿಸಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಎರಡು ಕಡೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಒಟ್ಟು ಒಂದು ಕೋಟಿ ರೂ. ದೇಣಿಗೆ ನೀಡುವ ಮೂಲಕ ಕಷ್ಟದಲ್ಲಿರುವ ಜನರ ನೆರವಿಗೆ ತಾರಕ್ ರಾಮ್ ಕೈಜೋಡಿಸಿದ್ದಾರೆ. ತೆಲಂಗಾಣದ ಸರ್ಕಾರಿ ನೌಕರರು ಒಂದು ದಿನದ ಸಂಬಂಳ ನೀಡಿದ್ದು, ಸುಮಾರು ನೂರು ಕೋಟಿ ಸರ್ಕಾರಕ್ಕೆ ನೀಡಿದ್ದಾರೆ.