ನವದೆಹಲಿ : ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಜಯ್ ಶಾ ರಾಜೀನಾಮೆ ನೀಡಿದರೆ, ಆ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅವರ ಪುತ್ರ ರೋಹನ್ ಜೇಟ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸದ್ಯ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಎಸೋಶಿಯೇಷನ್ (ಡಿಡಿಸಿಎ)ನ ಅಧ್ಯಕ್ಷರಾಗಿರುವ ರೋಹನ್ ಜೇಟ್ಲಿ ಬಿಸಿಸಿಐ ಕಾರ್ಯದರ್ಶಿಯಾಗುವ ಸಾಧ್ಯತೆ ಇದೆ ಎಂದು ದೈನಿಕ್ ಭಾಸ್ಕರ್ ಪತ್ರಿಕೆಯನ್ನು ಉಲ್ಲೇಖಿಸಿ ಹಲವು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಸದ್ಯ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರ ಅವಧಿ ಇನ್ನೂ ಇಂದು ವರ್ಷ ಇರಲಿದ್ದು, ಅವರು ಮುಂದುವರಿಯಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಐಸಿಸಿಯ ಅಧ್ಯಕ್ಷರಾಗುವುದಕ್ಕೆ ಜಯ್ ಶಾ ಅವರಿಗೆ ಉತ್ಸಾಹ ಇದೆಯೋ ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನ. ಐಸಿಸಿಯ ನಿರ್ಗಮಿತ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ ಅವರು ಮತ್ತೊಂದು ಅವಧಿಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಅವರ ಅವಧಿ ನವೆಂಬರ್‌ನಲ್ಲಿ ಅಂತ್ಯವಾಗಲಿದೆ. 35 ವರ್ಷದ ಜಯ್ ಶಾ ಒಂದು ವೇಳೆ ಅಧ್ಯಕ್ಷರಾದರೆ, ಐಸಿಸಿ ಇತಿಹಾಸದಲ್ಲೇ ಅತಿ ಕಿರಿಯ ಅಧ್ಯಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಭಾರತದಿಂದ ಈ ಹಿಂದೆ ಜಗನ್‌ಮೋಹನ್ ದಾಲ್ಮಿಯ, ಶರದ್ ಪವಾರ್, ಎನ್. ಶ್ರೀನಿವಾಸನ್ ಹಾಗೂ ಶಶಾಂಕ್ ಮನೋಹರ್ ಐಸಿಸಿಯ ಅಧ್ಯಕ್ಷರಾಗಿದ್ದರು.