I.N.D.I.A ಒಕ್ಕೂಟದಲ್ಲಿ ಒಡಕು, ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

I.N.D.I.A ಒಕ್ಕೂಟದಲ್ಲಿ ಒಡಕು, ಚೂರನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್‌?

ನವದೆಹಲಿ : ಲೋಕಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಅಖಾಡದಲ್ಲಿ ಸೆಣಸಾಡಲು ಪೈಲ್ವಾನರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಎನ್‌ಡಿಎ ಒಕ್ಕೂಟವನ್ನು ಮಟ್ಟಹಾಕಲು ಒಂದಾಗಿದ್ದ ಯುಪಿಎ ನೇತೃತ್ವದ ಇಂಡಿಯಾ ಮೈತ್ರಿಕೂಟ ಈಗ ನಾಲ್ಕು ದಿಕ್ಕಿಗೂ ಹರಿದು ಹಂಚಿಹೋಗಿದೆ. ಒಡೆದ ಮಡಿಕೆಯಂತಾಗಿರುವ ಮೈತ್ರಿಕೂಟವನ್ನು ಮತ್ತೆ ಜೋಡಿಸುತ್ತಾ ಕಾಂಗ್ರೆಸ್?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಮತ್ತೊಂದು ಗೆಲುವು ಸಾಧಿಸುವುದನ್ನು ತಡೆಯಲು ರಚಿಸಲಾಗಿದ್ದ ‘ಇಂಡಿಯಾ’ ಬಣವು ಶಿಥಿಲಗೊಳ್ಳುತ್ತಿರುವಂತೆ ತೋರುತ್ತಿದೆ. ಮೈತ್ರಿಕೂಟದ ಭಾಗವಾಗಿದ್ದ ತೃಣಮೂಲ ಕಾಂಗ್ರೆಸ್ ಸಮಿತಿ (ಟಿಎಂಸಿ), ಜೆಡಿಯು, ಆರ್‌ಎಲ್‌ಡಿ ಪಕ್ಷಗಳು ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ಗೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿಯೇ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದ ಎಸ್‌ಪಿ ಮತ್ತು ಎಎಪಿ ಸಂಧಾನ ಮಾತುಕತೆ ಬಳಿಕ ಮತ್ತೆ ಮೈತ್ರಿಕೂಟಕ್ಕೆ ವಾಪಸ್ ಆಗಿವೆ. ಮೈತ್ರಿಕೂಟದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯವನ್ನು ಕಾಂಗ್ರೆಸ್‌ ಹೇಗೆ ನಿಭಾಯಿಸಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಕಮಲ ಮುಡಿದ ಜೆಡಿಯು!
ವಿಪಕ್ಷಗಳ ಮೈತ್ರಿಕೂಟಕ್ಕೆ ಐಎನ್‌ಡಿಐಎ ಹೆಸರು ಸೇರಿದಂತೆ ಹಲವು ವಿಚಾರಗಳಿಗಾಗಿ ಮುನಿಸಿಕೊಂಡು ಬಿಹಾರ ಸಿಎಂ ನಿತೀಶ್ ಕುಮಾರ್ ಮಹಾಘಟಬಂಧನದಿಂದ ಹೊರಬಂದರು. ನಂತರ ಮಹಾ ಘಟಬಂಧನ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಿದರು. ಇಂಡಿಯಾ ಮೈತ್ರಿಕೂಟದ ಕಥೆ ಈಗ ಮುಗಿದ ಅಧ್ಯಾಯ ಎಂಬ ಮಾತುಗಳನ್ನು ನಿತೀಶ್ ಕುಮಾರ್ ಆಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಅವಿಭಾಜ್ಯ ಅಂಗವೇ ಆಗಿದ್ದ ಜೆಡಿಯು ಇನ್ಮುಂದೆ ಮೈತ್ರಿಯ ಭಾಗವಾಗಿಲ್ಲ. ಅಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಿತೀಶ್ ಕುಮಾರ್ ಮೈತ್ರಿಕೂಟದಿಂದ ಹೊರಬರುತ್ತಿದ್ದಂತೆ ಅನೇಕ ರಾಜಕೀಯ ಬೆಳವಣಿಗೆಗಳು ನಡೆದವು. ಇದು ಇಂಡಿಯಾ ಬಣಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಟಿಎಂಸಿ ಜೊತೆಗಿನ ಮೈತ್ರಿ ಏನಾಯ್ತು? ಮೈತ್ರಿಕೂಟದಿಂದ ಜೆಡಿಯು ಹೊರಬರುತ್ತಿದ್ದಂತೆ ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಲ್ಲೂ ಅಸಮಾಧಾನ ಸ್ಫೋಟಿಸಿತು. ಲೋಕಸಭೆ ಚುನಾವಣೆಯಲ್ಲಿ ಬಂಗಾಳದಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಕಳೆದ ತಿಂಗಳು ಬ್ಯಾನರ್ಜಿ ಘೋಷಿಸಿದ್ದರು. ಮೈತ್ರಿಕೂಟದ ಜೊತೆಗಿನ ಟಿಎಂಸಿ ಮುನಿಸು ಇನ್ನೂ ಶಮನವಾದಂತೆ ಕಾಣುತ್ತಿಲ್ಲ.

2019 ರ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 18 ಹಾಗೂ ಕಾಂಗ್ರೆಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡಲಿಲ್ಲ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಗೆ ಪಟ್ಟು ಹಿಡಿದಿದೆ. ಟಿಎಂಸಿ ಕೂಡ ತನ್ನ ಹಠ ಬಿಡುತ್ತಿಲ್ಲ. ಹೀಗಾಗಿ ಎರಡೂ ಪಕ್ಷಗಳ ನಡುವೆ ಅಸಮಾಧಾನ ಹಾಗೆಯೇ ಮುಂದುವರಿದಿದೆ.

ಎಎಪಿ ಜೊತೆ ಸಂಧಾನ?ಪಂಜಾಬ್‌ನಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 8, ಎಸ್‌ಎಡಿ ಮತ್ತು ಬಿಜೆಪಿ ತಲಾ 2 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಸೀಟು ಹಂಚಿಕೆ ಸಂಬಂಧ ಎಎಪಿ-ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಸಾರ್ವತ್ರಿಕ ಚುನಾವಣೆಗೆ ಪಂಜಾಬ್‌ನಲ್ಲಿ 13 ಮತ್ತು ಚಂಡೀಗಢದಲ್ಲಿ 1 ಸ್ಥಾನಕ್ಕಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಕೆಲದಿನಗಳ ಹಿಂದಷ್ಟೇ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದರು. ಮೈತ್ರಿಕೂಟದ ಒಡಕಿನಿಂದ ಎಚ್ಚೆತ್ತ ಕಾಂಗ್ರೆಸ್ ಕೇಜ್ರಿವಾಲ್ ಜೊತೆಗೆ ಸಂಧಾನ ಮಾತುಕತೆಯಾಡಿತು. ಈಗ ಎರಡೂ ಪಕ್ಷಗಳ ನಡುವೆ ಸೀಟು ಹಂಚಿಕೆ ಮಾತುಕತೆ ಅಂತಿಮ ಹಂತದಲ್ಲಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಎಸ್‌ಪಿ-ಕಾಂಗ್ರೆಸ್ ಮುನಿಸು ಶಮನ? ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧವೇ ಮೈತ್ರಿಕೂಟದಿಂದ ದೂರವಾಗಿದ್ದ ಸಮಾಜವಾದಿ ಪಕ್ಷ ಈಗ ಮತ್ತೆ ಒಂದಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಿದೆ. ಯುಪಿ ಯಲ್ಲಿ ಕಾಂಗ್ರೆಸ್‌ಗೆ 11 ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಎಸ್‌ಪಿ ಹೇಳಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ತಕರಾರು ತೆಗೆದು ಹೆಚ್ಚಿನ ಸ್ಥಾನಕ್ಕೆ ಬೇಡಿಕೆ ಇಟ್ಟಿತ್ತು. ಇದಕ್ಕೆ ಎಸ್‌ಪಿ ಒಪ್ಪಿಗೆ ಸೂಚಿಸಿರಲಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ಸಹ ಅಖಿಲೇಶ್ ಯಾದವ್ ಘೋಷಿಸಿದ್ದರು. ಆದರೀಗ ಎರಡೂ ಪಕ್ಷಗಳು ಒಂದಾಗಿವೆ.
ಯುಪಿಯಲ್ಲಿ ರಾಷ್ಟ್ರೀಯ ಲೋಕದಳ ಕೈ ಕೊಟ್ಟ ಕಾರಣ, ಕಾಂಗ್ರೆಸ್‌ಗೆ 17 ಕ್ಷೇತ್ರಗಳನ್ನು ಬಿಟ್ಟುಕೊಡಲು ಎಸ್‌ಪಿ ಒಪ್ಪಿಗೆ ಸೂಚಿಸಿದೆ. ಸಂಧಾನ ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಉತ್ತರ ಪ್ರದೇಶ ತಲುಪಿದ್ದ ರಾಹುಲ್ ಗಾಂಧಿ ಯಾತ್ರೆಯನ್ನು ಅಖಿಲೇಶ್ ಯಾದವ್ ಸೇರಿಕೊಂಡರು. ಉಭಯ ಪಕ್ಷಗಳ ನಾಯಕರೂ ಶಕ್ತಿ ಪ್ರದರ್ಶನ ಮಾಡಿದರು. ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸಲಾಗುವುದು ಎಂದು ಅಖಿಲೇಶ್ ಘೋಷಿಸಿದ್ದಾರೆ.

ಕಾಂಗ್ರೆಸ್ ನಿಲುವೇನು?ಟಿಎಂಸಿ ಇಲ್ಲದ ಮೈತ್ರಿಕೂಟವನ್ನು ಪಕ್ಷವು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ 255 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಕಳೆದ ತಿಂಗಳು ಘೋಷಿಸಿತ್ತು. ಇದು 2019 ರ ಲೋಕಸಭೆ ಚುನಾವಣೆಗಿಂತ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಹೊಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 421 ಸ್ಥಾನಗಳಲ್ಲಿ ಸ್ಪರ್ಧಿಸಿ 52 ಸ್ಥಾನಗಳನ್ನು ಗೆದ್ದಿತ್ತು. ಇದು ಬಿಹಾರದ ಆರ್‌ಜೆಡಿ, ಮಹಾರಾಷ್ಟ್ರದ ಎನ್‌ಸಿಪಿ, ಕರ್ನಾಟಕದ ಜೆಡಿಎಸ್, ಜಾರ್ಖಂಡ್‌ನ ಜೆಎಂಎಂ ಮತ್ತು ತಮಿಳುನಾಡಿನ ಡಿಎಂಕೆ ಜೊತೆ ಮೈತ್ರಿಯ ಭಾಗವಾಗಿತ್ತು. ಸ್ಥಳೀಯ ಪಕ್ಷಗಳ ಪ್ರಭಾವವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿ ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ಜೊತೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಿ, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಪರಸ್ಪರ ಟೀಕೆ ಮಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮುಂದಿನ ನಡೆ ಏನು? 7 ತಿಂಗಳ ಹಿಂದೆ ಪಾಟ್ನಾದಲ್ಲಿ ರಚನೆಯಾದಾಗಿನಿಂದ 28 ವಿಪಕ್ಷಗಳ ಇಂಡಿಯಾ ಬಣವು ಮತದಾರರನ್ನು ಸೆಳೆಯಲು ಯಾವುದೇ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಆದರೆ ಒಕ್ಕೂಟದ ಪಕ್ಷಗಳಲ್ಲೇ ಆಂತರಿಕ ಭಿನ್ನಾಭಿಪ್ರಾಯದಿಂದಾದ ಗಾಯವೇ ದೊಡ್ಡದಾಗಿದೆ. ಗಾಯಕ್ಕೆ ಮುಲಾಮು ಹಚ್ಚಿ, ಚುನಾವಣೆಯಲ್ಲಿ ಒಕ್ಕೂಟದ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸವಾಲು ಕಾಂಗ್ರೆಸ್ ಮುಂದಿದೆ.
ಸೀಟು ಹಂಚಿಕೆ ಒಪ್ಪಂದಗಳು ಮತ್ತು ಚುನಾವಣೋತ್ತರ ಮೈತ್ರಿಯನ್ನು ಅವಲಂಬಿಸಿ ರಾಜ್ಯಗಳ ಜೊತೆಗಿನ ಮೈತ್ರಿಯನ್ನು ಕಾಂಗ್ರೆಸ್ ನೋಡಬೇಕಿದೆ. ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢವನ್ನು ಕಾಂಗ್ರೆಸ್ ಕಳೆದುಕೊಂಡಿರುವುದು, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಸಂಘರ್ಷ, ಆಡಳಿತ ವಿರೋಧಿ ಅಲೆ (ಹಿರಿಯ ನಾಯಕ ಕಮಲ್ ನಾಥ್), ಅತಿಯಾದ ಆತ್ಮವಿಶ್ವಾಸ (ಭೂಪೇಶ್ ಬಘೇಲ್) ಮತ್ತು ರಾಜ್ಯ ನಾಯಕತ್ವಕ್ಕೆ ಪ್ರಾಮುಖ್ಯತೆ ಇಲ್ಲದಿರುವುದು ಕಾಂಗ್ರೆಸ್ ಅವನತಿಗೆ ಕಾರಣವಾಗಬಹುದು. ಇದೆಲ್ಲವನ್ನೂ ಅರಿತು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಮತ್ತೊಂದು ಸವಾಲು ಕೂಡ ಕಾಂಗ್ರೆಸ್ ಮುಂದೆ ಈಗ ಇದೆ.

Previous Post
ಅಖಿಲೇಶ್‌ ಯಾದವ್‌ಗೆ ಸಿಬಿಐ ಸಮನ್ಸ್‌
Next Post
ಬೆಂಗಳೂರಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ 9,651 ಮಂದಿಗೆ ನೇರ ಉದ್ಯೋಗ

Recent News