ಒಕ್ಕೂಟ ಸರ್ಕಾರ ರಚನೆಗೆ ಹಮಾಸ್, ಫತಾಹ್ ಸಮ್ಮತಿ

ಒಕ್ಕೂಟ ಸರ್ಕಾರ ರಚನೆಗೆ ಹಮಾಸ್, ಫತಾಹ್ ಸಮ್ಮತಿ

ನವದೆಹಲಿ, ಜು. 25: ಪ್ಯಾಲೆಸ್ತೀನ್‌ನ ಎರಡು ಬಣಗಳಾದ ಹಮಾಸ್ ಮತ್ತು ಫತಾಹ್ ‘ಒಕ್ಕೂಟ ಸರ್ಕಾರ’ ರಚಿಸುವ ಐತಿಹಾಸಿಕ ಘೋಷಣೆಗೆ ಸಹಿ ಹಾಕಿವೆ. ಗಾಝಾ ಮೇಲಿನ ಇಸ್ರೇಲ್ ಆಕ್ರಮಣ ನಡುವೆ ಇದು ಮಹತ್ವದ ಬೆಳವಣಿಗೆಯಾಗಿದೆ. ವರದಿಗಳ ಪ್ರಕಾರ, ಚೀನಾದ ಮಧ್ಯಸ್ಥಿಕೆಯಲ್ಲಿ ಎರಡು ಬಣಗಳು ಒಕ್ಕೂಟ ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದಿವೆ. ಈ ಮೂಲಕ ಸುದೀರ್ಘ ಸಮಯದ ಪೈಪೋಟಿಯನ್ನು ಕೊನೆಗೊಳಿಸಲು ಮುಂದಾಗಿವೆ.
ಬೀಜಿಂಗ್‌ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗಿನ ಮಾತುಕತೆಯ ನಂತರ ಎರಡು ಬಣಗಳು ತಮ್ಮ ನಡುವಿನ ವೈಷಮ್ಯ ಮರೆತು ದೇಶಕ್ಕಾಗಿ ಒಂದಾಗುವ ನಿರ್ಧಾರಕ್ಕೆ ಬಂದಿದೆ. ಈ ನಡೆಯನ್ನು ಇಸ್ರೇಲ್ ಖಂಡಿಸಿದೆ ಎಂದು ವರದಿಯಾಗಿದೆ. ಈ ಹಿಂದೆ 2011ರಲ್ಲೂ ಇದೇ ರೀತಿಯ ಒಮ್ಮತ ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಕೊನೆಗೆ ಅದು ಯಶಸ್ವಿಯಾಗಿರಲಿಲ್ಲ. ಈ ಬಾರಿ ಫಲ ಕೊಡುತ್ತದಾ? ಎಂಬ ಪ್ರಶ್ನೆ ಉದ್ಬವಿಸಿದೆ.
ವಿಭಜನೆಯನ್ನು ಕೊನೆಗೊಳಿಸಬೇಕು ಮತ್ತು ಪ್ಯಾಲೆಸ್ತೀನ್ ಏಕತೆಯನ್ನು ಬಲಪಡಿಸಬೇಕು ಎಂಬ ಎರಡು ಬಣಗಳ ನಿರ್ಣಯಕ್ಕೆ ಇತರ 12 ರಾಜಕೀಯ ಗುಂಪುಗಳು ಸಹಿ ಹಾಕಿವೆ. ಎರಡು ಬಣಗಳ ಜಂಟಿ ಹೇಳಿಕೆಯು ಹೊಸ ಸರ್ಕಾರ ರಚನೆಯ ವಿವರಗಳು ಅಥವಾ ಸಮಯವನ್ನು ಸ್ಪಷ್ಟಪಡಿಸಿಲ್ಲ. ಆದರೆ 1967 ರ ಗಡಿ ನೀತಿಯ ಆಧಾರದ ಮೇಲೆ ಪ್ಯಾಲೆಸ್ತೀನ್ ಸ್ವತಂತ್ರ ದೇಶ ಸ್ಥಾಪಿಸುವ ಬದ್ಧತೆಯನ್ನು ದೃಢಪಡಿಸಿದೆ.
ವರದಿಗಳ ಪ್ರಕಾರ, ಪ್ಯಾಲೆಸ್ತೀನ್‌ನ ಗಾಝಾ ಪಟ್ಟಿಯ ಆಡಳಿತವನ್ನು ಕಳೆದ 17 ವರ್ಷಗಳಿಂದ ಹಮಾಸ್ ನೋಡಿಕೊಳ್ಳುತ್ತಿದೆ. ಇನ್ನುಳಿದ ಪ್ರದೇಶಗಳು ಮತ್ತು ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಕೆಲವು ಭಾಗಗಳನ್ನು ಅಮೆರಿಕ ಬೆಂಬಲಿತ ಪ್ಯಾಲೆಸ್ತೀನ್ ಪ್ರಾಧಿಕಾರ(ಪಿಎ)ದ ಪ್ರಮುಖ ಘಟಕವಾದ ಫತಾಹ್ ನಿಯಂತ್ರಿಸುತ್ತಿದೆ. 2007 ರಲ್ಲಿ ಹಮಾಸ್ ಗಾಝಾವನ್ನು ಬಲವಂತವಾಗಿ ಹಿಡಿತಕ್ಕೆ ತೆಗೆದುಕೊಂಡಾಗಿನಿಂದ ಫತಾಹ್ ಮತ್ತು ಹಮಾಸ್ ನಡುವೆ ಭಿನ್ನಾಭಿಪ್ರಾಯ ಇದೆ.
ಗಾಝಾ ಮೇಲಿನ ಇಸ್ರೇಲ್ ಆಕ್ರಮಣ 10 ತಿಂಗಳೂ ಕಳೆದರೂ ಮುಂದುವರೆದಿದೆ. ನಮ್ಮ ಗುರಿ ಸಾಧಿಸುವವರೆಗೆ ದಾಳಿ ಕೊನೆಗೊಳಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲದ ಸರಣಿ ಆದೇಶಗಳು ಮತ್ತು ಯುದ್ದ ವಿರಾಮಕ್ಕೆ ಆಗ್ರಹಿಸಿದ ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಇಸ್ರೇಲ್ ಕಡೆಗಣಿಸಿದೆ.

Previous Post
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ
Next Post
ನೀಟ್: ಪರಿಷ್ಕೃತ ಅಂಕಗಳ ಫಲಿತಾಂಶಗಳ ಬಿಡುಗಡೆ ಮಾಡದ ಕೇಂದ್ರ

Recent News