ಕಂಗನಾ ರಣಾವತ್‌ ಆಯ್ಕೆ ಬಗ್ಗೆ ಹೈಕೋರ್ಟ್ ನೋಟಿಸ್

ಕಂಗನಾ ರಣಾವತ್‌ ಆಯ್ಕೆ ಬಗ್ಗೆ ಹೈಕೋರ್ಟ್ ನೋಟಿಸ್

ನವದೆಹಲಿ, ಜು. 25: ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿರುವ ಹಿಮಾಚಲ ಪ್ರದೇಶ ಹೈಕೋರ್ಟ್, ಕಂಗನಾ ಅವರಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 21ರ ಒಳಗಾಗಿ ಉತ್ತರ ನೀಡುವಂತೆ ಕಂಗನಾ ಅವರಿಗೆ ನ್ಯಾಯಮೂರ್ತಿ ಜೋತ್ಸ್ನಾ ರೆವಾಲ್ ಅವರು ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಸಭೆ ಚುನಾವಣೆ ವೇಳೆ ಮಂಡಿಯ ಚುನಾವಣಾಧಿಕಾರಿ ತನ್ನ ನಾಮಪತ್ರವನ್ನು ಅನ್ಯಾಯವಾಗಿ ತಿರಸ್ಕರಿಸಿದ್ದರು ಎಂದು ಆರೋಪಿಸಿ ಕಿನ್ನೂರು ನಿವಾಸಿ ಲಾಯಕ್ ರಾಮ್ ನೇಗಿ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯನ್ನು ಪ್ರಕರಣದ ಪಕ್ಷಗಾರನ್ನಾಗಿ ಮಾಡಿದ್ದಾರೆ.
ಅರಣ್ಯ ಇಲಾಖೆಯ ಮಾಜಿ ನೌಕರ ನೇಗಿ ಅವರು ಅವಧಿಪೂರ್ವ ನಿವೃತ್ತಿ ಪಡೆದಿದ್ದರು. ಇಲಾಖೆಯಿಂದ ಯಾವುದೇ ಬಾಕಿಯಿಲ್ಲ ಪ್ರಮಾಣಪತ್ರ (NO due Certificate)ಪಡೆದಿದ್ದರು. ಅದನ್ನು ಲಗ್ಗತ್ತಿಸಿ ಲೋಕಸಭೆ ಚುನಾವಣೆಗೆ ಮಂಡಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ರು.
ಆದರೆ, ಚುನಾವಣಾಧಿಕಾರಿ ವಿದ್ಯುತ್, ನೀರು ಮತ್ತು ದೂರವಾಣಿ ಇಲಾಖೆಗಳಲ್ಲಿ ಯಾವುದೇ ಬಾಕಿ ಇಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಲು ಒಂದು ದಿನದ ಗಡುವು ನೀಡಿದ್ದರು. ಅದರಂತೆ, ಪ್ರಮಾಣಪತ್ರ ಸಲ್ಲಿಸಿದರೂ, ಅವರು ನಾಮಪತ್ರವನ್ನು ಸ್ವೀಕರಿಸಿಲ್ಲ ಎಂದು ನೇಗಿ ಆರೋಪಿಸಿದ್ದಾರೆ. ಒಂದು ವೇಳೆ ನಾಮಪತ್ರ ತಿರಸ್ಕೃತವಾಗದಿದ್ದರೆ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದೆ. ಹೀಗಾಗಿ ಮಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಬೇಕು ಎಂದು ನೇಗಿ ಕೋರಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮಂಡಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟಿ ಕಂಗನಾ ರಣಾವತ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ಅವರ ವಿರುದ್ದ 74,755 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

Previous Post
ಕೇಜ್ರಿವಾಲ್, ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
Next Post
ಜಗನ್ ಮೋಹನ್ ರೆಡ್ಡಿಯನ್ನು ಡ್ರಗ್ ಲಾರ್ಡ್ ಪ್ಯಾಬ್ಲೋ ಎಸ್ಕೋಬಾರ್‌ಗೆ ಹೋಲಿಸಿದ ಚಂದ್ರಬಾಬು ನಾಯ್ಡು

Recent News