ಗೂಗಲ್ ಲೊಕೇಷನ್ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆಯ ಹಕ್ಕಿಗೆ ಧಕ್ಕೆ: ಸುಪ್ರೀಂ
ನವದೆಹಲಿ, ಏ. 30: ಆರೋಪಿ ಗೂಗಲ್ ಲೊಕೇಷನ್ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮೌಖಿಕವಾಗಿ ಹೇಳಿದೆ. ಗೂಗಲ್ ಲೊಕೇಷನ್ ಪಿನ್ ಹಂಚಿಕೊಳ್ಳಲು ಈ ಹಿಂದೆ ಎರಡು ಬಾರಿ ಸುಪ್ರೀಂ ಕೋರ್ಟ್ ನಿರ್ದೇಶಿಸಿದ್ದನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಒಪ್ಪಿಕೊಂಡಿತಾದರೂ, ಅದು ಜಾಮೀನು ಷರತ್ತಾಗಿರಲು ಸಾಧ್ಯವಿಲ್ಲ ಎಂದಿದೆ.
ಗೂಗಲ್ ಮ್ಯಾಪ್ ಅಪ್ಲಿಕೇಷನ್ನಲ್ಲಿರುವ ಲೊಕೇಷನ್ ಪಿನ್ ಹಂಚಿಕೊಂಡರೆ ಮಾತ್ರ ಜಾಮೀನು ನೀಡುವುದಾಗಿ ದೆಹಲಿ ಹೈಕೋರ್ಟ್ ವಿಧಿಸಿರುವ ಷರತ್ತು ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ, ತನ್ನ ಲೊಕೇಷನ್ ಪಿನ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುವುದನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್ ಗೂಗಲ್ ಇಂಡಿಯಾಕ್ಕೆ ಈ ಹಿಂದೆ ನಿರ್ದೇಶನ ನೀಡಿತ್ತು.
ಪ್ರಕರಣದಲ್ಲಿ ಗೂಗಲ್ ಇಂಡಿಯಾವನ್ನು ಪಕ್ಷಕಾರನನ್ನಾಗಿ ಸೇರಿಸಿಕೊಳ್ಳುತ್ತಿಲ್ಲ ಬದಲಿಗೆ ಲೊಕೇಶನ್ ಪಿನ್ ಕಾರ್ಯನಿರ್ವಹಣೆಯ ಬಗ್ಗೆ ಕಂಪನಿಯಿಂದ ಮಾಹಿತಿಯನ್ನಷ್ಟೇ ಕೋರಲಾಗುತ್ತಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಗೂಗಲ್ ವಿವರಣೆ ಆಲಿಸಿದ ನ್ಯಾಯಾಲಯ, ಜಾಮೀನು ಷರತ್ತಿನಂತೆ ಗೂಗಲ್ ಲೊಕೇಶನ್ ಪಿನ್ ಹಂಚಿಕೊಳ್ಳುವ ಕುರಿತ ಆದೇಶ ಕಾಯ್ದಿರಿಸಿದೆ. ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ ಜುಲೈ 26ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿದ್ದ ನೈಜೀರಿಯಾ ಪ್ರಜೆ ಫ್ರಾಂಕ್ ವಿಟಾಸ್ ಮತ್ತು ಸಹ ಆರೋಪಿಗೆ ಮಧ್ಯಂತರ ಜಾಮೀನು ನೀಡುವಾಗ ದೆಹಲಿ ಹೈಕೋರ್ಟ್ ವಿಧಿಸಿದ್ದ ಕೆಲವು ಷರತ್ತುಗಳಲ್ಲಿ ತಾನಿರುವ ಸ್ಥಳದ ಮಾಹಿತಿಯನ್ನು (ಗೂಗಲ್ ಲೊಕೇಷನ್ ಪಿನ್) ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕೆಂಬುದೂ ಸೇರಿತ್ತು. ಇದನ್ನು ಫ್ರಾಂಕ್ ವಿಟಾಸ್ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ವಾದ ಆಲಿಸಿದ ಸುಪ್ರೀಂ ಕೋರ್ಟ್ ಇಂತಹ ಕಠಿಣ ಜಾಮೀನು ಷರತ್ತು ವಿಧಿಸುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದೆ.
ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿ ಗೂಗಲ್ ಲೊಕೇಶನ್ ಪಿನ್ಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಸ್ಥಳದ ವಿವರಗಳನ್ನು ನಿರಂತರವಾಗಿ ಪೊಲೀಸರಿಗೆ ಕಳುಹಿಸಬೇಕು ಎಂಬ ಜಾಮೀನು ಷರತ್ತಿಗೆ ನ್ಯಾಯಮೂರ್ತಿ ಓಕಾ ನೇತೃತ್ವದ ಮತ್ತೊಂದು ಪೀಠ ಕಳೆದ ವರ್ಷದ ಜುಲೈನಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಕಣ್ಗಾವಲಿಗೆ ಸಮನಾಗಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಟೀಕಿಸಿತ್ತು.