ಚುನಾವಣಾ ಬಾಂಡ್: ಮಾಹಿತಿ ನೀಡಲು ಮತ್ತೆ ನಿರಾಕರಿಸಿದ ಎಸ್‌ಬಿಐ
ನವದೆಹಲಿ, ಮೇ 21: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಒಪಿ ಮಾಹಿತಿಯನ್ನು ನೀಡಲು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತೆ ನಿರಾಕರಿಸಿದ್ದು, ಕೇಂದ್ರ ಮಾಹಿತಿ ಆಯೋಗಕ್ಕೆ (ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಮುಂದಾಗಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಲಾದ ಮೊದಲ ಮೇಲ್ಮನವಿಗೆ ಪ್ರತಿಕ್ರಿಯೆಯಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ನಗದೀಕರಣ ಕುರಿತಂತೆ ಶಾಖೆಗಳಿಗೆ ನೀಡಿದ ಎಸ್ಒಪಿ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್) ಪ್ರತಿಯನ್ನು ಒದಗಿಸಲು ಮತ್ತೆ ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಕೋರಲಾದ ಮಾಹಿತಿಯನ್ನು ಬ್ಯಾಂಕ್ “ಕಮರ್ಷಿಯಲ್ ಕಾನ್ಫಿಡೆನ್ಸ್” ಆಗಿ ಇರಿಸಿಕೊಂಡಿದೆ ಮತ್ತು ಅದು “ಬ್ಯಾಂಕ್‌ನ ಬೌದ್ಧಿಕ ಆಸ್ತಿ” ಎಂದು ಮಾಹಿತಿ ನಿರಾಕರಣೆಗೆ ಬ್ಯಾಂಕ್ ಕಾರಣ ನೀಡಿದೆ. ಮೇಲಾಗಿ ಆಂತರಿಕ ಮಾರ್ಗಸೂಚಿಗಳು ಚುನಾವಣಾ ಬಾಂಡ್ ಕುರಿತಂತೆ ಕಾರ್ಯನಿರ್ವಹಿಸುವ ಸಿಬ್ಬಂದಿಗಾಗಿ ಮಾತ್ರ ಆಗಿವೆ ಎಂದೂ ಬ್ಯಾಂಕ್ ಹೇಳಿದೆ.
ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್, ಎಪ್ರಿಲ್ 2017ರಂದು ಬ್ಯಾಂಕ್ ಇದೀಗ ರದ್ದುಗೊಂಡಿರುವ ಬಾಂಡ್‌ಗಳ ಕುರಿತಂತೆ ಜಾರಿಗೊಳಿಸಲಾದ ಎಸ್ಒಪಿ ಕುರಿತು ಮಾಹಿತಿ ಕೋರಿದ್ದರು. ಮಾರ್ಚ್ 30ರಂದು ಬ್ಯಾಂಕ್ ಮಾಹಿತಿಯನ್ನು ನೀಡಲು ನಿರಾಕರಿಸಿದ ನಂತರ, ಅವರು ಎಸ್‌ಬಿಐನ ಮೇಲ್ಮನವಿ ಪ್ರಾಧಿಕಾರಕ್ಕೆ (ಎಫ್‌ಎಎ)ಗೆ ಮನವಿಯನ್ನು ಸಲ್ಲಿಸಿದ್ದರು. ಎಫ್‌ಎಎಯಿಂದ ಮೇ 17ರಂದು ಸ್ವೀಕರಿಸಿದ ಪ್ರತಿಕ್ರಿಯೆಯಿಂದ ಅತೃಪ್ತರಾಗಿರುವ ಭಾರದ್ವಾಜ್ ಈಗ ಕೇಂದ್ರ ಮಾಹಿತಿ ಆಯೋಗಕ್ಕೆ(ಸಿಐಸಿ) ನಿರಾಕರಣೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಮೇ 17ರ ಆದೇಶದಲ್ಲಿ ಮಾಹಿತಿಯು ಬ್ಯಾಂಕ್‌ನ ಬೌದ್ಧಿಕ ಆಸ್ತಿಯಾಗಿದೆ. ಆದ್ದರಿಂದ RTI ಕಾಯಿದೆಯಡಿ ಸೆಕ್ಷನ್ 8(1)(d) ಅಡಿಯಲ್ಲಿ ಸರಿಯಾಗಿ ನಿರಾಕರಿಸಲಾಗಿದೆ. ವಾಣಿಜ್ಯ ವಿಶ್ವಾಸ, ವ್ಯಾಪಾರ ರಹಸ್ಯಗಳು ಅಥವಾ ಬೌದ್ಧಿಕ ಆಸ್ತಿ ಸೇರಿದಂತೆ ಮಾಹಿತಿ ಬಹಿರಂಗಪಡಿಸುವಿಕೆಯು ಮೂರನೇ ವ್ಯಕ್ತಿಯ ಸ್ಪರ್ಧಾತ್ಮಕ ಸ್ಥಾನಕ್ಕೆ ಹಾನಿಯುಂಟುಮಾಡುತ್ತದೆ ಎಂದು ಹೇಳಲಾಗಿದೆ.
ಎಸ್‌ಬಿಐ ಬಾಂಡ್‌ಗಳ ವಹಿವಾಟು ಡೇಟಾವನ್ನು ಹೇಗೆ ನಿರ್ವಹಿಸುತ್ತದೆ ಎಂಬುದರ ಕುರಿತು ಅಸ್ಪಷ್ಟತೆಯಿಂದಾಗಿ ಎಸ್‌ಒಪಿಗಳನ್ನು ವಿನಂತಿಸಲಾಗಿದೆ. ಬಾಂಡ್‌ಗಳ ಸಂಭಾವ್ಯ ಟ್ರ್ಯಾಕಿಂಗ್ ಬಗ್ಗೆ ಕಳವಳಗಳು ಇದ್ದವು. ಏಕೆಂದರೆ ಎಸ್‌ಬಿಐ ಖರೀದಿದಾರ ಮತ್ತು ರಿಡೀಮರ್ ಇಬ್ಬರಿಗೂ ವಿಶಿಷ್ಟ ಸಂಖ್ಯೆಯನ್ನು ದಾಖಲಿಸಿದೆ. ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ನಂತರ ಮತ್ತು ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಆದೇಶಿಸಿದ ನಂತರವೂ, ಎಸ್‌ಬಿಐ ನಿರ್ಣಾಯಕ ಮಾಹಿತಿಯನ್ನು ತಡೆಹಿಡಿಯುವುದನ್ನು ಮುಂದುವರೆಸಿದೆ ಎಂದು ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಹೇಳಿದ್ದಾರೆ.