ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಬಂಪರ್: ಕೇಂದ್ರದ ವಾಗ್ದಾನ ಏನು ತಿಳಿಯಿರಿ!

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಬಂಪರ್: ಕೇಂದ್ರದ ವಾಗ್ದಾನ ಏನು ತಿಳಿಯಿರಿ!

ನವದೆಹಲಿ, ಫೆಬ್ರವರಿ 1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ಪ್ರಾಮುಖ್ಯತೆ ಕೊಡಲಾಗಿದ್ದು, ಮಹಿಳೆಯರಿಗಾಗಿ ಕೇಂದ್ರದಿಂದ ಮಧ್ಯಂತರ ಬಜೆಟ್‌ನಲ್ಲಿ ವಿಶೇಷ ಉಡುಗೊರೆ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 2024ರ ಕೇಂದ್ರ ಬಜೆಟ್ಮೂಲಕ ಮಹಿಳೆಯ ಅಭಿವೃದ್ಧಿಗೆ ವಿಶೇಷ ಕೊಡುಗೆಗಳನ್ನು ನೀಡುವ ಭರವಸೆ ನೀಡಿದೆ. ಈ ಬಾರಿಯ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆರು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡ ಕೇಂದ್ರ ಸರ್ಕಾರ ಪರಿಗಣಿಸಿದ್ದು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ವಿಸ್ತರಣೆ ಮಾಡುವ ಭರವಸೆ ನೀಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ ಮಂಡನೆ ವೇಳೆ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ದೇಶದ ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ, ಕಳೆದ ಕೆಲವು ವರ್ಷಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳಾಗುತ್ತಿರುವ ಬಗ್ಗೆ ಮಾತನಾಡಿದ್ದು, ಕಳೆದ ದಶಕದಲ್ಲಿ ಎಸ್‌ಟಿಇಎಮ್ ಕೋರ್ಸ್‌ಗಳಲ್ಲಿ ಮಹಿಳೆಯರ ದಾಖಲಾತಿ ಶೇಕಡಾ 28ರಷ್ಟು ಹೆಚ್ಚಾಗಿದೆ ಎಂದಿದ್ದಾರೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಮೀಸಲಿಡುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 70%ರಷ್ಟು ಮನೆಗಳು ಮಹಿಳೆಯರಿಗೆ ನೀಡುವುದು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದರು.

ಇನ್ನು 2024ರ ಬಜೆಟ್‌ ಮಂಡನೆಯಲ್ಲಿ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ದೇಶದ ಮಹಿಳೆಯರ ಆರ್ಥಿಕ ಶಕ್ತಿ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 3 ಕೋಟಿ ಮಹಿಳಾ ಲಕ್ಷಾಧಿಪತಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

Previous Post
Vande bharat ಮಾದರಿ 40 ಸಾವಿರ ಬೋಗಿ ಅಭಿವೃದ್ಧಿ
Next Post
25 ಕೋಟಿ ಜನರು ಬಡತನದಿಂದ ಪಾರು- 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ- ನಿರ್ಮಲಾ

Recent News