ಅಬಕಾರಿ ನೀತಿ ಹಗರಣ: ಕೇಜ್ರಿವಾಲ್‌ಗೆ ಕೋರ್ಟ್‌ ಸಮನ್ಸ್

ಅಬಕಾರಿ ನೀತಿ ಹಗರಣ: ಕೇಜ್ರಿವಾಲ್‌ಗೆ ಕೋರ್ಟ್‌ ಸಮನ್ಸ್

ನವದೆಹಲಿ, ಫೆ. 7: ಆಪಾದಿತ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬುಧವಾರ ಸಮನ್ಸ್ ಜಾರಿ ಮಾಡಿದೆ. ರೋಸ್ ಅವೆನ್ಯೂ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಫೆಬ್ರವರಿ 17 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದ್ದಾರೆ.

ಜಾರಿ ನಿರ್ದೇಶನಾಲಯ (ಇಡಿ) ಐದು ಬಾರಿ ಸಮನ್ಸ್ ನೀಡಿದರೂ, ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಇಡಿ ಕೋರ್ಟ್ ಮೊರೆ ಹೋಗಿತ್ತು. ಸಿಎಂ ಕೇಜ್ರಿವಾಲ್ ಕಳೆದ ವರ್ಷ ನವೆಂಬರ್ 2 ಮತ್ತು ಡಿಸೆಂಬರ್ 21 ಮತ್ತು ಈ ವರ್ಷದ ಜನವರಿ 3 ಮತ್ತು ಜನವರಿ 18 ರಂದು ನೀಡಲಾದ ಇಡಿ ಸಮನ್ಸ್‌ಗಳನ್ನು ತಿರಸ್ಕರಿಸಿದ್ದರು. ಸಮನ್ಸ್ ನೋಟಿಸ್‌ಗಳನ್ನು “ಕಾನೂನುಬಾಹಿರ” ಎಂದಿದ್ದರು.

ಅಬಕಾರಿ ನೀತಿ ಹಗರಣದ ವಿಚಾರಣೆಗಾಗಿ ಇಡಿ ನನಗೆ ಸಮನ್ಸ್ ನೀಡುತ್ತಿಲ್ಲ. ವಿಚಾರಣೆ ನೆಪದಲ್ಲಿ ನನ್ನನ್ನು ವಿಚಾರಣೆಗೆ ಕರೆಸಿಕೊಂಡು ಲೋಕಸಭೆ ಚುನಾವಣೆಗೂ ಬಂಧಿಸುವ ತಂತ್ರವನ್ನು ಕೇಂದ್ರದ ಬಿಜೆಪಿ ಸರ್ಕಾ ರೂಪಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೆಲ ಖಾಸಗಿ ಕಂಪನಿಗಳಿಗೆ ಶೇ.12 ರಷ್ಟು ಸಗಟು ವ್ಯಾಪಾರ ಲಾಭವನ್ನು ನೀಡುವ ಪಿತೂರಿಯ ಭಾಗವಾಗಿ ಅಬಕಾರಿ ನೀತಿಯನ್ನು ಜಾರಿಗೆ ತರಲಾಗಿತ್ತು ಎಂದು ಇಡಿ ಆರೋಪಿಸಿದೆ. ಸಗಟು ವ್ಯಾಪಾರಿಗಳಿಗೆ ಅಸಾಧಾರಣ ಲಾಭಾಂಶವನ್ನು ನೀಡಲು ಸೌತ್ ಗ್ರೂಪ್ ಜೊತೆಗೆ ವಿಜಯ್ ನಾಯರ್ ಮತ್ತು ಇತರ ವ್ಯಕ್ತಿಗಳು ಸಂಯೋಜಿತ ಸಂಚು ನಡೆಸಿದ್ದರು. ಅದರ ಭಾಗವಾಗಿ ದೆಹಲಿ ಅಬಕಾರಿ ನೀತಿ ತರಲಾಗಿತ್ತು ಎಂದು ಇಡಿ ಹೇಳಿದೆ.

Previous Post
ಚಂದಾ ಕೊಚ್ಚರ್ ಬಂಧನ ‘ಅಕ್ರಮ’: ಹೈಕೋರ್ಟ್‌ ತೀರ್ಪು
Next Post
ನಿರುದ್ಯೋಗ ಸಮಸ್ಯೆ ಬಗ್ಗೆ ರಾಹುಲ್‌ ಗಾಂಧಿ ತರಾಟೆ

Recent News