ಅರ್ಜುನ ಪ್ರಶಸ್ತಿ ಸ್ವೀಕರಿಸಿದ ವೇಗಿ ಮೊಹಮ್ಮದ್ ಶಮಿ

ಅರ್ಜುನ ಪ್ರಶಸ್ತಿ ಸ್ವೀಕರಿಸಿದ ವೇಗಿ ಮೊಹಮ್ಮದ್ ಶಮಿ

ನವದೆಹಲಿ, ಜ. 9: ಭಾರತೀಯ ಕ್ರಿಕೆಟಿಗ, ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ. 2023ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಶಮಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಪ್ರತಿಷ್ಠಿತ ಗೌರವಕ್ಕೆ ಮೊಹಮ್ಮದ್ ಶಮಿ ಹೆಸರನ್ನು ಶಿಫಾರಸು ಮಾಡಿತ್ತು.

ಪ್ರಶಸ್ತಿಗೆ ನಾಮನಿರ್ದೇಶನಗೊಂಡಾಗ ಶಮಿಯು ಸಂತಸವನ್ನು ವ್ಯಕ್ತಪಡಿಸಿದ್ದರು. ಈ ಪ್ರಶಸ್ತಿಯು ಒಂದು ಕನಸು, ಹಲವಾರು ಮಂದಿ ತಮ್ಮ ಜೀವಿತಾವಧಿ ಮುಗಿದರೂ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನನ್ನನ್ನು ನಾಮಕರಣ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ ಮತ್ತು ನಾನು ಹೆಮ್ಮೆಪಡುತ್ತೇನೆ. ಇದು ಅನೇಕರಿಗೆ ನನಸಾಗದ ಕನಸಾಗಿದೆ ಎಂದು ಶಮಿ ಸೋಮವಾರ ದೇಶದ ಎರಡನೇ ಅತಿದೊಡ್ಡ ಕ್ರೀಡಾ ಗೌರವಕ್ಕೆ ನಾಮನಿರ್ದೇಶನಗೊಂಡ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ.

2023ರ ಏಕದನ ವಿಶ್ವಕಪ್‌ ಪಂದ್ಯದಲ್ಲಿ ಮೊಹಮ್ಮದ್ ಶಮಿ ಭಾರತೀಯ ತಂಡದ ಪ್ರಕಾಶಮಾನವಾದ ತಾರೆಗಳಲ್ಲಿ ಒಬ್ಬರಾಗಿದ್ದರು. ಶಮಿ ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಹಲವಾರು ದಾಖಲೆಗಳನ್ನು ಮುರಿದರು ಮತ್ತು ಪಂದ್ಯಾವಳಿಯ ಇತಿಹಾಸದಲ್ಲಿ ಭಾರತದ ಸಾರ್ವಕಾಲಿಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಶಮಿ ಈ ಟೂರ್ನಿಯಲ್ಲಿ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗಿಂತ ಹೆಚ್ಚು ವಿಕೆಟ್‌ಗಳನ್ನು ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಶಮಿ ಉತ್ತರಪ್ರದೇಶದ ಅಮ್ರೋಹದ ಸಹಸ್ಪುರ ಗ್ರಾಮದ ನಿವಾಸಿಯಾಗಿದ್ದಾರೆ. ಅವರ ತಂದೆ ತೌಸೀಫ್‌ ಅಲಿ ರೈತರಾಗಿದ್ದಾರೆ. ಇವರ ತಂದೆ ತಾಯಿಗೆ ಐವರು ಮಕ್ಕಳು. ಶಮಿ ತಮ್ಮ ಯೌವನದಲ್ಲಿ ವೇಗದ ಬೌಲರ್ ಆಗಿದ್ದರು. ಶಮಿ 15 ವರ್ಷದವನಾಗಿದ್ದಾಗ ಅವರ ಮನೆಯಿಂದ 22 ಕಿಲೋಮೀಟರ್ ದೂರದಲ್ಲಿರುವ ಮೊರದಾಬಾದ್‌ನಲ್ಲಿರುವ ಕ್ರಿಕೆಟ್ ತರಬೇತುದಾರ ಬದ್ರುದ್ದೀನ್ ಸಿದ್ದಿಕ್ ಬಳಿಗೆ ತರಬೇತಿಗೆ ತೆರಳಿದ್ದರು. ಅಲ್ಲಿ ಪರಿಶ್ರಮದಿಂದ ತರಭೇತಿಯನ್ನು ಪಡೆದರು. ಆದರೆ ಉತ್ತರಪ್ರದೇಶದ ಅಂಡರ್‌ 19 ತಂಡಕ್ಕೆ ಪ್ರವೇಶ ಸಿಕ್ಕಿರಲಿಲ್ಲ. 2005ರಲ್ಲಿ ಇವರನ್ನು ರಾಜ್ಯ ತಂಡಕ್ಕೆ ಆಯ್ಕೆ ಮಾಡುವ ಉದ್ದೇಶದಿಂದ ಕೋಚ್‌ ಬದ್ರುದ್ದೀನ್ ಕೊಲ್ಕತ್ತಾಗೆ ಕಳುಹಿಸಿದ್ದರು. ಆ ಬಳಿಕ ಅವರು ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಮಾಜಿ ಸಹಾಯಕ ಕಾರ್ಯದರ್ಶಿ ದೇಬಬ್ರತ ದಾಸ್‌ ಅವರ ಕ್ಲಬ್‌ನಲ್ಲಿ ತರಬೇತಿಯನ್ನು ಪಡೆದಿದ್ದರು. ಶಮಿ ಅವರನ್ನು 2010-11ರಲ್ಲಿ ರಣಜಿ ಟ್ರೋಪಿಗೆ ಬಂಗಾಳ ತಂಡಕ್ಕೆ ಸೇರಿಸಲಾಗಿತ್ತು. ಬಳಿಕ 2010ರಲ್ಲಿ ಅವರು ಟ್ವೆಂಟಿ20 ಪಂದ್ಯಗಳಲ್ಲಿ ಆಡಿದ್ದರು. 2013ರಲ್ಲಿ ಅವರು ಅಂತಾರಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.

ಏಷ್ಯನ್ ಗೇಮ್ಸ್‌ನ ತಾರೆಗಳಿಗೂ ಪ್ರಶಸ್ತಿ ಪ್ರಧಾನ:
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಏಷ್ಯನ್ ಗೇಮ್ಸ್ ತಾರೆ ಶೀತಲ್ ದೇವಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಇದಲ್ಲದೆ ಭಾರತದ ಏಷ್ಯನ್ ಗೇಮ್ಸ್ ಹೀರೋಗಳಾದ ಅದಿತಿ ಗೋಪಿಚಂದ್ ಸ್ವಾಮಿ, ಶ್ರೀಶಂಕರ್ ಮುರಳಿ, ಪಾರುಲ್ ಚೌಧರಿ, ಇಶಾ ಸಿಂಗ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರಿಗೂ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

2023 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಕ್ರೀಡಾಪಟುಗಳ ಪಟ್ಟಿ

-ಓಜಸ್ ಪ್ರವೀಣ್ ಡಿಯೋಟಾಲೆ (ಬಿಲ್ಲುಗಾರಿಕೆ)
-ಅದಿತಿ ಗೋಪಿಚಂದ್ ಸ್ವಾಮಿ (ಬಿಲ್ಲುಗಾರಿಕೆ)
-ಶ್ರೀಶಂಕರ್ ಎಂ (ಅಥ್ಲೆಟಿಕ್ಸ್)
-ಪಾರುಲ್ ಚೌಧರಿ (ಅಥ್ಲೆಟಿಕ್ಸ್)
-ಮೊಹಮೀದ್ ಹುಸಾಮುದ್ದೀನ್ (ಬಾಕ್ಸಿಂಗ್)
-ಆರ್ ವೈಶಾಲಿ (ಚೆಸ್)
-ಮೊಹಮ್ಮದ್ ಶಮಿ (ಕ್ರಿಕೆಟ್)
-ಅನುಷ್ ಅಗರ್ವಾಲಾ (ಈಕ್ವೆಸ್ಟ್ರಿಯನ್)
-ದಿವ್ಯಾಕೃತಿ ಸಿಂಗ್ (ಈಕ್ವೆಸ್ಟ್ರಿಯನ್ ಡ್ರೆಸ್ಸೇಜ್)
-ದೀಕ್ಷಾ ದಾಗರ್ (ಗಾಲ್ಫ್)
-ಕ್ರಿಶನ್ ಬಹದ್ದೂರ್ ಪಾಠಕ್ (ಹಾಕಿ)
-ಪುಖ್ರಂಬಂ ಸುಶೀಲಾ ಚಾನು (ಹಾಕಿ)
-ಪವನ್ ಕುಮಾರ್ (ಕಬಡ್ಡಿ)
-ರಿತು ನೇಗಿ (ಕಬಡ್ಡಿ)
-ನಸ್ರೀನ್ (ಖೋ-ಖೋ)
-ಪಿಂಕಿ (ಲಾನ್ ಬೌಲ್ಸ್)
-ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಶೂಟಿಂಗ್)
-ಇಶಾ ಸಿಂಗ್ (ಶೂಟಿಂಗ್)
-ಹರಿಂದರ್ ಪಾಲ್ ಸಿಂಗ್ ಸಂಧು (ಸ್ಕ್ವಾಷ್)
-ಅಹಿಕಾ ಮುಖರ್ಜಿ (ಟೇಬಲ್ ಟೆನಿಸ್)
-ಸುನಿಲ್ ಕುಮಾರ್ (ಕುಸ್ತಿ)
-ಆಂಟಿಮ್ (ಕುಸ್ತಿ)
-ನವೋರೆಮ್ ರೋಶಿಬಿನಾ ದೇವಿ (ವುಶು)
-ಶೀತಲ್ ದೇವಿ (ಪ್ಯಾರಾ ಆರ್ಚರಿ)
-ಇಲ್ಲೂರಿ ಅಜಯ್ ಕುಮಾರ್ ರೆಡ್ಡಿ (ಅಂಧ ಕ್ರಿಕೆಟ್)
-ಪ್ರಾಚಿ ಯಾದವ್ (ಪ್ಯಾರಾ ಕ್ಯಾನೋಯಿಂಗ್)

Previous Post
ರಾಮಮಂದಿರ ಉದ್ಘಾಟನೆ ಗಿಮಿಕ್ ಶೋ: ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ
Next Post
ಮಾಧ್ಯಮ ಸಂಸ್ಥೆಗಳ ಮಾಲೀಕತ್ವ ನಿಯಂತ್ರಣ ಕಾನೂನು ಜಾರಿ ಅಗತ್ಯ: ತರೂರ್

Recent News