ಇಸ್ರೇಲ್‌-ಹಮಾಸ್ ಸಂಘರ್ಷ: ಒಂದೇ ದಿನ 24 ಇಸ್ರೇಲಿ ಸೈನಿಕರು ಸಾವು

ಇಸ್ರೇಲ್‌-ಹಮಾಸ್ ಸಂಘರ್ಷ: ಒಂದೇ ದಿನ 24 ಇಸ್ರೇಲಿ ಸೈನಿಕರು ಸಾವು

ಗಾಝಾ, ಜ. 23: ಗಾಝಾದಲ್ಲಿ ಮಾರಣಹೋಮ ನಡೆಸುತ್ತಿರುವ ಇಸ್ರೇಲ್‌ ಸೇನೆಗೆ ತೀವ್ರ ಹಿನ್ನೆಡೆಯಾಗಿದೆ. ಹಮಾಸ್ ಗುಂಪು ನಡೆಸಿದ ದಾಳಿಯಲ್ಲಿ 24 ಇಸ್ರೇಲಿ ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಪೈಕಿ 21 ಸೈನಿಕರು ಒಂದೇ ಸ್ಪೋಟದಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲಿ ಮಿಲಿಟರಿ ಮಂಗಳವಾರ ಮುಂಜಾನೆ ಸೈನಿಕರ ಸಾವಿನ ಕುರಿತು ಘೋಷಿಸಿದೆ. ಇಸ್ರೇಲಿ ಮಿಲಿಟರಿಯ ಮುಖ್ಯ ವಕ್ತಾರರಾದ ರಿಯರ್ ಅಡ್ಮ್ ಡೇನಿಯಲ್ ಹಗರಿ ಪ್ರಕಾರ, ಗಾಝಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಲು ಇಸ್ರೇಲ್‌ ಮಿಲಿಟರಿ ಇಟ್ಟಿದ್ದ ಸ್ಫೋಟಕಗಳಿಂದ ಉಂಟಾದ ಸ್ಫೋಟದಲ್ಲಿ ಸೈನಿಕರು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಈ ವೇಳೆ ಇಸ್ರೇಲಿ ಸೈನಿಕರು ಕುಸಿದ ಎರಡು ಅಂತಸ್ತಿನ ಕಟ್ಟಡಗಳ ಒಳಗೆ ಇದ್ದರು.

ಒಂದೇ ಸ್ಪೋಟದಲ್ಲಿ ಮೃತಪಟ್ಟ 21 ಸೈನಿಕರು ದಕ್ಷಿಣ ಇಸ್ರೇಲ್‌ನಲ್ಲಿರುವ ಜನರು ತಮ್ಮ ಮನೆಗಳಿಗೆ ಮರಳದಂತೆ ತಡೆಯಲು ಇಸ್ರೇಲ್ ಮತ್ತು ಗಾಜಾ ನಡುವಿನ ಗಡಿ ಬಳಿ ಕಟ್ಟಡಗಳು ಮತ್ತು ಇತರ ಮೂಲಸೌಕರ್ಯಗಳನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದ್ದರು ಎಂದು ಅಡ್ಮಿರಲ್ ಹಗರಿ ಹೇಳಿದ್ದಾರೆ. ಸ್ಫೋಟದ ಸಮಯದಲ್ಲಿ ಹತ್ತಿರದ ಟ್ಯಾಂಕ್‌ಗೆ ಕ್ಷಿಪಣಿಯನ್ನು ಹಾರಿಸಲಾಗಿತ್ತು. ಇದೂ ಕೂಡ ಕಟ್ಟಡ ಕುಸಿತಕ್ಕೆ ಕಾರಣವಾಗಿರಬಹುದು ಎಂದು ಅವರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುದ್ದ ಆರಂಭವಾದಾಗಿನಿಂದ ನಮ್ಮ ಸೇನೆ ಅತ್ಯಂತ ಕಷ್ಟಕರವಾದ ದಿನಗಳನ್ನು ಮುಂದೂಡುತ್ತಿದೆ. ನಿನ್ನೆಯ ಘಟನೆಯ ಬಗ್ಗೆ ಸೇನೆಯು ಪರಿಶೀಲನೆ ನಡೆಸುತ್ತಿದೆ. ನಾವು ಕೆಲವೊಂದು ಪಾಠಗಳನ್ನು ಕಲಿಯಬೇಕಾಗಿದೆ. ನಮ್ಮ ಸೈನಿಕರ ಜೀವಗಳನ್ನು ಸಂರಕ್ಷಿಸಲು ಎಲ್ಲವನ್ನೂ ಮಾಡಬೇಕಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ

ಇಸ್ರೇಲ್‌ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮೃತ ಸೈನಿಕರಿಗೆ ಸಂತಾಪ ಸೂಚಿಸಿದ್ದಾರೆ. ಬೆಳಿಗ್ಗೆ ಎದ್ದೇಳುವಾಗ ಬಂದ ಸೈನಿಕರ ಸಾವಿನ ಸುದ್ದಿ ಆರಗಿಸಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಅಕ್ಟೋಬರ್ 7 ರಂದು ಪ್ರಾರಂಭಗೊಂಡ ಗಾಝಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಇದುವರೆಗೆ 25,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 62,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

Previous Post
ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ, ಆದರೆ ಕಾನೂನನ್ನು ಮೀರುವುದಿಲ್ಲ: ರಾಹುಲ್ ಗಾಂಧಿ
Next Post
ಪ್ರಶ್ನೆಗಾಗಿ ನಗದು ಪ್ರಕರಣ: ವಕೀಲ ಜೈ ಅನಂತ್ ಗೆ ಸಿಬಿಐನಿಂದ ಸಮನ್ಸ್

Recent News