ಉತ್ತರಖಂಡದಲ್ಲಿ ಕೋರ್ಟ್‌ ಆದೇಶವಿಲ್ಲದೆ ಮದರಸಾ ಧ್ವಂಸ

ಉತ್ತರಖಂಡದಲ್ಲಿ ಕೋರ್ಟ್‌ ಆದೇಶವಿಲ್ಲದೆ ಮದರಸಾ ಧ್ವಂಸ

ನವದೆಹಲಿ, ಫೆ. 10: ಉತ್ತರಖಂಡದ ಹಲ್ದ್ವಾನಿ ಪುರಸಭೆಯು ಅತಿಕ್ರಮಣ ವಿರೋಧಿ ಅಭಿಯಾನ ಎಂದು ಪಟ್ಟಣದ ಬನ್‌ಭೂಲ್‌ಪುರ ಪ್ರದೇಶದಲ್ಲಿ ಮದ್ರಸಾ ಮತ್ತು ಮಸೀದಿಯನ್ನು ಕೆಡವಿದೆ. ಪುರಸಭೆಯ ಈ ಕೃತ್ಯವು ಸ್ಥಳೀಯರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆಗೆ ಕಾರಣವಾಗಿ ಐವರ ಸಾವಿಗೆ ಕಾರಣವಾಗಿದ್ದು, 100 ಪೊಲೀಸ್‌ ಸಿಬ್ಬಂದಿಗಳಿಗೆ ಗಾಯವಾಗಿದೆ.

ಘರ್ಷಣೆಯ ನಂತರ ಕರ್ಫ್ಯೂ ಮತ್ತು ‘ಕಂಡಲ್ಲಿ ಗುಂಡು ಆದೇಶಗಳನ್ನು’ ನೀಡಲಾಗಿತ್ತು. ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಈ ಕುರಿತು ಮಾತನಾಡಿದ್ದು, ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದಾರೆ. ಧ್ವಂಸ ಕಾರ್ಯಾಚರಣೆಯಲ್ಲಿ 100 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಮಸೀದಿಯ ಧ್ವಂಸದ ಬಳಿಕ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರದ ಹಿನ್ನೆಲೆ ಅರೆಸೇನಾ ಪಡೆಯ ನಾಲ್ಕು ತುಕಡಿಗಳನ್ನು ನಿಯೋಜಿಸಿ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಸ್ತುತ ಹಲ್ದ್ವಾನಿಯಲ್ಲಿ ಜಿಲ್ಲಾಡಳಿತ ಕರ್ಫ್ಯೂ ವಿಧಿಸಿದ್ದು, ಕಂಡಲ್ಲಿ ಗುಂಡು ಆದೇಶ ಹೊರಡಿಸಿದೆ. ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಇಂದು ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಬಂಭೂಲ್ಪುರದಲ್ಲಿ ಹಿಂಸಾಚಾರದ ನಡೆದಿದ್ದರೂ, ಉತ್ತರಾಖಂಡ ಸರ್ಕಾರ ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೀನಾ, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮದ್ರಸಾಕ್ಕೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು ಎಂದಿದ್ದಾರೆ. ನೈನಿತಾಲ್ ಜಿಲ್ಲಾಧಿಕಾರಿ ವಂದನಾ ಅವರು ಮಾತನಾಡಿ, ಬಂಭೂಲ್ಪುರ ಪೊಲೀಸ್ ಠಾಣೆಯ ಹೊರಗೆ ನಡೆದ ಹಿಂಸಾಚಾರದಲ್ಲಿ ಕೆಲವರು ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಅವರು ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಅಥವಾ ಅವರ ನಡುವಿನ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆಯೇ ಎಂದು ತಿಳಿದು ಬರಬೇಕಿದೆ ಎಂದು ಹೇಳಿದ್ದರು.

ಮರಿಯಮ್ ಮಸೀದಿ ಮತ್ತು ಅಬ್ದುಲ್ ರಝಾಕ್ ಝಕರಿಯಾ ಮದರಸಾವನ್ನು 2002ರಲ್ಲಿ ಬಂಬೂಲ್ಪುರದ ಕಂಪನಿ ಬಾಗ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಅದನ್ನು ಅಬ್ದುಲ್ ಮಲಿಕ್ ಮತ್ತು ಅವರ ಪತ್ನಿ ಸಫಿಯಾ ಮಲಿಕ್ ನೋಡಿಕೊಳ್ಳುತ್ತಿದ್ದರು. ಹಲ್ದ್ವಾನಿಯ ಮುನ್ಸಿಪಲ್ ಕಮಿಷನರ್ ಪಂಕಜ್ ಉಪಾಧ್ಯಾಯ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ಮಸೀದಿಯನ್ನು ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಜನವರಿ 30ರಂದು ಅಬ್ದುಲ್ ಮಲಿಕ್ ಅವರಿಗೆ ಮಸೀದಿ ಮತ್ತು ಮದರಸಾವನ್ನು ಕೆಡವಲು ಪಾಲಿಕೆ ನೋಟಿಸ್ ನೀಡಿತ್ತು ಎಂದು ಹೇಳಿದ್ದಾರೆ.

ಆದರೆ ಫೆಬ್ರುವರಿ 6ರಂದು ಸಫಿಯಾ ಮಲಿಕ್ ಅವರು ಉತ್ತರಾಖಂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಸೀದಿ ಮತ್ತು ಮದರಸಾವನ್ನು ನಿರ್ಮಿಸಿದ ಭೂಮಿಯನ್ನು 1937ರಲ್ಲಿ ಗುತ್ತಿಗೆಗೆ ನೀಡಲಾಗಿದೆ ಮತ್ತು 1994ರಲ್ಲಿ ತನ್ನ ಕುಟುಂಬಕ್ಕೆ ಮಾರಾಟ ಮಾಡಲಾಗಿದೆ ಎಂದು ಮಲಿಕ್ ಮಸೀದಿ ತೆರವು ವಿರುದ್ಧ ಮಧ್ಯಂತರ ಪರಿಹಾರವನ್ನು ಕೋರಿದ್ದರು. ವಿಶೇಷವಾಗಿ ಬಡ ಮಕ್ಕಳಿಗಾಗಿ ನಡೆಸಲ್ಪಡುವ ಮದ್ರಸಾ ಎಂಬುವುದನ್ನು ಉಲ್ಲೇಖಿಸಿ ಪ್ರಕರಣವನ್ನು ಕೋರ್ಟ್‌ ಮುಂದಿಟ್ಟಿದ್ದರು. ಫೆಬ್ರುವರಿ 14ರಂದು ನ್ಯಾಯಾಲಯ ಈ ಪ್ರಕರಣದ ವಿಚಾರಣೆಗೆ ಪಟ್ಟಿ ಮಾಡಿತ್ತು. ಆದರೆ ಕೋರ್ಟ್‌ ಪಟ್ಟಿ ಮಾಡಿದ ಮುಂದಿನ ವಿಚಾರಣೆಗೆ ಮೊದಲೇ ಪಾಲಿಕೆ ಮಸೀದಿಯನ್ನು ನೆಲಸಮ ಮಾಡಿದ್ದಾರೆ.

ನ್ಯಾಯಾಲಯದ ನಿರ್ದೇಶನದ ಮೇರೆಗೆ ಅತಿಕ್ರಮಣ ತಡೆ ಅಭಿಯಾನಕ್ಕೆ ಅನುಮತಿ ನೀಡಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡ ಇದನ್ನೇ ಹೇಳಿದ್ದಾರೆ. ಮಲಿಕ್ ಅವರ ವಕೀಲರಾದ ಅಹ್ರಾರ್ ಬೇಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಸೀದಿಯನ್ನು ಕೆಡವುವ ವೇಳೆ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ, ನಮಗೆ ನೋಟಿಸ್ ನೀಡಲಾಗಿಲ್ಲ ಅಥವಾ ಪ್ರಕರಣವನ್ನು ಮುಂದುವರಿಸಲು ಸಮಯವನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ.

ಉತ್ತರಾಖಂಡ ಹೈಕೋರ್ಟ್‌ನಲ್ಲಿ ಮಲಿಕ್ ಸಲ್ಲಿಸಿರುವ ಅರ್ಜಿ ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳು ಮಲಿಕ್ ಕುಟುಂಬ ಆಸ್ತಿಯ ಕುರಿತು ಸಲ್ಲಿಸಿದ ದಾಖಲೆಗಳನ್ನು ಒಳಗೊಂಡಿದೆ. ಹಲ್ದ್ವಾನಿಯಲ್ಲಿನ ಮಸೀದಿಯ ಧ್ವಂಸವು ಬಿಜೆಪಿ ನೇತೃತ್ವದ ಉತ್ತರಾಖಂಡ ಸರ್ಕಾರವು “ಕಾನೂನುಬಾಹಿರ” ಎಂದು ಪರಿಗಣಿಸಿ ಇಸ್ಲಾಮಿಕ್ ರಚನೆಗಳನ್ನು ನೆಲಸಮಗೊಳಿಸುವ ದೊಡ್ಡ ನೀತಿಯ ಒಂದು ಭಾಗವಾಗಿದೆ ಎಂದು ಹೇಳಲಾಗಿದೆ. ಹಲ್ದ್ವಾನಿ ಮದರಸಾ ಪ್ರಕರಣದಲ್ಲಿ, ಬಿಜೆಪಿಯ ಅಲ್ಪಸಂಖ್ಯಾತ ಘಟಕದ ನಾಯಕರು ಮುಖ್ಯಮಂತ್ರಿಗೆ ಪತ್ರ ಬರೆದು ಬಡ ಮಕ್ಕಳಿಗೆ ಶಿಕ್ಷಣ ನೀಡಲು ಬಳಸುತ್ತಿದ್ದ ಕಟ್ಟಡವನ್ನು ಕೆಡವಿದರೆ, ಅಲ್ಪಸಂಖ್ಯಾತರಿಗೆ ಉತ್ತಮ ಸಂದೇಶ ರವಾನೆಯಾಗುವುದಿಲ್ಲ ಎಂದು ಎಚ್ಚರಿಸಿದ್ದರು ಎನ್ನವುದು ಕೂಡ ಗಮನಾರ್ಹ.

Previous Post
ಪಂಜಾಬ್‌ನ ಎಲ್ಲಾ ಲೋಕಸಭಾ ಸ್ಥಾನಗಳಲ್ಲಿ ಆಪ್ ಏಕಾಂಗಿ ಸ್ಪರ್ಧೆ: ಕೇಜ್ರಿವಾಲ್
Next Post
ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News