ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಎಚ್‌ ಡಿ ಕುಮಾರಸ್ವಾಮಿ ಸೇರಿ ಮಿತ್ರಪಕ್ಷಗಳ ಬೆಂಬಲ

ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಆಯ್ಕೆ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಎಚ್‌ ಡಿ ಕುಮಾರಸ್ವಾಮಿ ಸೇರಿ ಮಿತ್ರಪಕ್ಷಗಳ ಬೆಂಬಲ

ವದೆಹಲಿ: ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರ ಹೆಸರನ್ನು ಬಿಜೆಪಿ ನಾಯಕ ಜೆಪಿ ನಡ್ಡಾ ಪ್ರಸ್ತಾಪಿಸಿದಾಗ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್, ಜೆಡಿ ಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಇತರೆ ಮಿತ್ರ ಪಕ್ಷಗಳ ನಾಯಕರು ಶುಕ್ರವಾರ ಅನುಮೋದಿಸಿದರು.

ಸಂಸತ್‌ ಭವನದ ಸಂವಿಧಾನ್ ಸದನದಲ್ಲಿ ಶುಕ್ರವಾರ ನಡೆದ ಎನ್‌ಡಿಎ ನಾಯಕರ ಪ್ರಮುಖ ಸಭೆಯಲ್ಲಿ ನರೇಂದ್ರ ಮೋದಿಯವರನ್ನು ಮೈತ್ರಿಕೂಟದ ನಾಯಕನನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು.

ಎನ್‌ಡಿಎ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಪ್ರಧಾನಿಯನ್ನು ‘ಮೋದಿ, ಮೋದಿ’ ಸ್ವಾಗತ್ ಹೆ ಭಾಯ್ ಸ್ವಾಗತ್ ಹೇ ಎಂಬಿತ್ಯಾದಿ ಘೋಷಣೆಗಳೊಂದಿಗೆ ಸ್ವಾಗತಿಸಲಾಯಿತು. ಮೋದಿ ಅವರು ಭಾರತದ ಸಂವಿಧಾನದ ಪ್ರತಿಯನ್ನು ಹಣೆಗೊತ್ತಿಕೊಂಡು ವೇದಿಕೆ ಏರಿದರು.

ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ನಾಯಕತ್ವ- ಚಂದ್ರಬಾಬು ನಾಯ್ಡು

“ನಾವು ಅದ್ಭುತವಾದ ಬಹುಮತ ಪಡೆದಿದ್ದೇವೆ. ಎನ್‌ಡಿಎಗೆ ಸ್ಪಷ್ಟ ಬಹುಮತ ಇರುವುದರಿಂದ ಎಲ್ಲರನ್ನೂ ಅಭಿನಂದಿಸುತ್ತೇನೆ. ನಾನು ಚುನಾವಣಾ ಪ್ರಚಾರದ ಸಮಯದಲ್ಲಿ ನೋಡಿದ್ದೇನೆ, ಮೂರು ತಿಂಗಳ ಕಾಲ ಪ್ರಧಾನಿ ಮೋದಿ ಎಂದಿಗೂ ವಿಶ್ರಾಂತಿ ತೆಗೆದುಕೊಳ್ಳಲಿಲ್ಲ. ಹಗಲು ರಾತ್ರಿ ಪ್ರಚಾರ ಮಾಡಿದ್ದಾರೆ. ಅವರು ಅದೇ ಉತ್ಸಾಹದಿಂದ ಶುರುಮಾಡಿದರು ಮತ್ತು ಪ್ರಚಾರ ಕೊನೆಗೊಳಿಸಿದರು. ಆಂಧ್ರಪ್ರದೇಶದಲ್ಲಿ, ಟಿಡಿಪಿ, ಜನಸೇನಾ ಪಾರ್ಟಿ, ಬಿಜೆಪಿ ಸೇರಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ನಾವು ಮೂರು ಸಾರ್ವಜನಿಕ ಸಭೆಗಳು ಮತ್ತು ಒಂದು ದೊಡ್ಡ ರ‍್ಯಾಲಿಯನ್ನು ನಡೆಸಿದ್ದೇವೆ. ಆಂಧ್ರಪ್ರದೇಶದಲ್ಲಿ ಚುನಾವಣೆಯಲ್ಲಿ ಗೆಲ್ಲುವಲ್ಲಿ ಇದು ದೊಡ್ಡ ಪಾತ್ರವನ್ನು ನಿರ್ವಹಿಸಿದೆೆ …” ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಕಳೆದ 10 ವರ್ಷಗಳಲ್ಲಿ ದೇಶದ ಪ್ರಗತಿಯನ್ನು ಕಂಡಿದ್ದೇವೆ. ಜಾಗತಿಕ ಮಟ್ಟದಲ್ಲಿ ದೇಶವನ್ನು ಗುರುತಿಸುವಂತೆ ಮಾಡಿದ್ದಾರೆ. ಈ ಸಲ ಮೈತ್ರಿಗೆ ಬಲ ಬಂದಿದೆ. ಮುಂದಿನ ಸಲ ಇನ್ನಷ್ಟು ಬಲಪಡಿಸೋಣ. ದೇಶವನ್ನು, ರಾಜ್ಯವನ್ನು ಮುನ್ನಡೆಸೋಣ ಎಂದು ನಾಯ್ಡು ಹೇಳಿದರು.

ನರೇಂದ್ರ ಮೋದಿ ನಾಯಕತ್ವ ಸದ್ಯದ ಅಗತ್ಯ. ತಡ ಮಾಡುವುದು ಬೇಡ. ಬೇಗ ಪ್ರಮಾಣ ವಚನ ಮುಗಿಯಲಿ. ಇಂದೇ ಆಗಿದ್ದರೂ ಒಳಿತೇ ಇತ್ತು ಎಂದು ಜೆಡಿಯು ನಾಯಕ ನಿತೀಶ್ ಕುಮಾರ್ ಹೇಳಿದರು.

ಎನ್‌ಡಿಎ ನಾಯಕನಾಗಿ ನರೇಂದ್ರ ಮೋದಿ; ರಾಜನಾಥ್ ಸಿಂಗ್, ನಡ್ಡಾ ಪ್ರಸ್ತಾವನೆ

ಬಿಜೆಪಿ ಸಂಸದ ರಾಜನಾಥ್ ಸಿಂಗ್, “ನಾನು ಹೊಸದಾಗಿ ಆಯ್ಕೆಯಾದ ಎಲ್ಲಾ ಸಂಸದರನ್ನು ಅಭಿನಂದಿಸಲು ಬಯಸುತ್ತೇನೆ… ಇಂದು, ನಾವು ಎನ್‌ಡಿಎ ನಾಯಕನನ್ನು ಆಯ್ಕೆ ಮಾಡಲು ಇಲ್ಲಿದ್ದೇವೆ. ಈ ಎಲ್ಲಾ ಹುದ್ದೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೆಚ್ಚು ಸೂಕ್ತವಾಗಿದೆ ಎಂದು ನಾನು ನಂಬುತ್ತೇನೆ ” ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ “ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ಸಿಕ್ಕಿದೆ. ನಾವು ಒಡಿಶಾದಲ್ಲಿ ನಮ್ಮ ಸರ್ಕಾರವನ್ನು ರಚಿಸಿದ್ದೇವೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಅರುಣಾಚಲ ಪ್ರದೇಶದಲ್ಲೂ ನಾವು ಮೂರನೇ ಬಾರಿಗೆ ಸರ್ಕಾರ ರಚಿಸಿದ್ದೇವೆ. ಸಿಕ್ಕಿಂನಲ್ಲಿಯೂ ಎನ್‌ಡಿಎ ಸರ್ಕಾರ ರಚಿಸಿದೆ” ಎಂದು ಹೇಳಿದರು.

“10 ವರ್ಷಗಳ ಹಿಂದೆ, ಅಸಡ್ಡೆ ಭಾರತವಿತ್ತು, ಇಲ್ಲಿ ಏನೂ ಬದಲಾಗುವುದಿಲ್ಲ ಎಂದು ಭಾರತದ ಬಗ್ಗೆ ಹೇಳಲಾಗಿತ್ತು ಮತ್ತು ಇಂದು, 10 ವರ್ಷಗಳ ನಂತರ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಅದೇ ಭಾರತವು ಮಹತ್ವಾಕಾಂಕ್ಷೆಯ ಭಾರತವಾಗಿ ಮಾರ್ಪಟ್ಟಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ಹೊರಟಿದೆ ” ಎಂದು ನಡ್ಡಾ ಹೇಳಿದರು.

ಎಚ್‌ ಡಿ ಕುಮಾರಸ್ವಾಮಿ, ಅಜಿತ್ ಪವಾರ್, ಚಿರಾಗ್ ಬೆಂಬಲ

ಸ್ಥಿರ ಸರ್ಕಾರ ರಚಿಸಲು ಮೋದಿ ಮತ್ತು ಎನ್ಡಿಎಗೆ ತಮ್ಮ ಪಕ್ಷದ ಬೆಂಬಲವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುನರುಚ್ಚರಿಸಿದರು. ಅದೇ ರೀತಿ, ಸಭೆಯಲ್ಲಿ ಎನ್‌ಸಿಪಿಯ ಅಜಿತ್ ಪವಾರ್, ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಉಪಸ್ಥಿತರಿದ್ದು, ಅವರೂ ಬೆಂಬಲ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಅವರು ಭಾನುವಾರ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಪ್ರಲ್ಹಾದ್‌ ಜೋಷಿ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ತಿಳಿಸಿದರು.

ಜೂನ್ 9 ರಂದು ಸಂಜೆ 6 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಜೋಶಿ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನೆರೆದಿದ್ದ ಎನ್ಡಿಎ ನಾಯಕರಿಗೆ ಮೋದಿ ಅವರನ್ನು ತಮ್ಮ ನಾಯಕರಾಗಿ ಆಯ್ಕೆ ಮಾಡಲು ಹೇಳಿದರು.

Previous Post
ಮೋದಿ ಪ್ರಮಾಣ ವಚನ ಕಾರ್ಯಕ್ರಮ: ಭಾರತದ ಆಹ್ವಾನ ಸ್ವೀಕರಿಸಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು
Next Post
ನದಿಯಲ್ಲಿ ಮುಳುಗಿ ಭಾರತೀಯ ಮೂಲದ ನಾಲ್ವರು ವಿದ್ಯಾರ್ಥಿಗಳ ದುರಂತ ಅಂತ್ಯ

Recent News