ಎನ್‌ಸಿಪಿ ಪಕ್ಷದ ಹಕ್ಕಿನ ವಿಚಾರ: ಸುಪ್ರೀಂ ಮೆಟ್ಟಿಲೇರಿದ ಶರದ್ ಪವಾರ್

ಎನ್‌ಸಿಪಿ ಪಕ್ಷದ ಹಕ್ಕಿನ ವಿಚಾರ: ಸುಪ್ರೀಂ ಮೆಟ್ಟಿಲೇರಿದ ಶರದ್ ಪವಾರ್

ನವದೆಹಲಿ, ಫೆ. 13: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ಗುರುತಿಸಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಹಿರಿಯ ನಾಯಕ ಶರದ್ ಪವಾರ್ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಸೋಮವಾರ ಸಂಜೆ ವಕೀಲ ಅಭಿಷೇಕ್ ಜೆಬರಾಜ್ ಮೂಲಕ ಪವಾರ್ ಅಜಿತ್ ಪವಾರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಈಗಾಗಲೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಅಜಿತ್ ಪವಾರ್ ಬಣ, ವಕೀಲ ಅಭಿಕಲ್ಪ್ ಪ್ರತಾಪ್ ಸಿಂಗ್ ಮೂಲಕ ಕೇವಿಯಟ್ ಸಲ್ಲಿಸಿದ್ದು, ಶರದ್ ಪವಾರ್ ಬಣ ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿದರೂ, ಅದಕ್ಕೂ ಮುನ್ನ ನಮ್ಮ ವಾದ ಆಲಿಸುವಂತೆ ಕೋರಿದೆ. ಫೆಬ್ರವರಿ 6ರಂದು, ಚುನಾವಣಾ ಆಯೋಗವು ಅಜಿತ್ ಪವಾರ್ ಬಣ ನಿಜವಾದ ಎನ್‌ಸಿಪಿ ಎಂದು ಘೋಷಿಸಿದೆ. ಇದರಿಂದ ಪಕ್ಷದ ಸಂಸ್ಥಾಪಕ ಶರದ್ ಪವಾರ್‌ಗೆ ದೊಡ್ಡ ಹಿನ್ನಡೆಯಾಗಿದೆ. ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್‌ಸಿಪಿ ಚಿಹ್ನೆಯಾದ ‘ಗಡಿಯಾರ’ವನ್ನು ಸಹ ನೀಡಿದೆ.

ಜುಲೈ 2023ರಲ್ಲಿ ಎನ್‌ಸಿಪಿ ನಾಯಕರಾಗಿದ್ದ ಅಜಿತ್ ಪವಾರ್ ಮತ್ತು ಕೆಲ ಶಾಸಕರು ಪಕ್ಷದ ಉನ್ನತ ನಾಯಕ ಶರದ್ ಪವಾರ್ ವಿರುದ್ದ ಬಂಡೆದ್ದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಬಣಕ್ಕೆ ಬೆಂಬಲ ಸೂಚಿಸಿದ್ದರು. ಈ ಮೂಲಕ ಅವರಿಗೆ ಶಿಂದೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಮತ್ತು ಕೆಲ ಶಾಸಕರಿಗೆ ಸಚಿವ ಸ್ಥಾನ ದೊರೆತಿತ್ತು. ಶರದ್ ಪವಾರ್ ಅವರು 1999ರಲ್ಲಿ ಎನ್‌ಸಿಪಿ ಪಕ್ಷವನ್ನು ಸ್ಥಾಪಿಸಿದ್ದರು. ಫೆ.6,2024 ಅವರು ತಮ್ಮ ಪಕ್ಷದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ.

Previous Post
ಪಡಿತರ ಅಂಗಡಿಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್ ಹಾಕುವಂತೆ ಸೂಚನೆ: ತಿರಸ್ಕರಿಸಿದ ಕೇರಳ
Next Post
ಶೆಹಬಾಝ್ ಷರೀಫ್ ಪಾಕಿಸ್ತಾನದ ಪ್ರಧಾನಿ ಅಭ್ಯರ್ಥಿ

Recent News