ಏಕನಾಥ ಶಿಂಧೆ ಆಪ್ತನ ಮೇಲೆ ಬಿಜೆಪಿ ಶಾಸಕನಿಂದ ಪೊಲೀಸ್‌ ಠಾಣೆಯಲ್ಲೇ ಗುಂಡಿನ ದಾಳಿ

ಏಕನಾಥ ಶಿಂಧೆ ಆಪ್ತನ ಮೇಲೆ ಬಿಜೆಪಿ ಶಾಸಕನಿಂದ ಪೊಲೀಸ್‌ ಠಾಣೆಯಲ್ಲೇ ಗುಂಡಿನ ದಾಳಿ

ಮುಂಬೈ, ಫೆ. 3: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಹರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಪ್ತ ಮತ್ತು ಶಿಂಧೆ ನೇತೃತ್ವದ ಶಿವಸೇನೆಯ ನಾಯಕನ ಮೇಲೆ ಪೊಲೀಸ್‌ ಠಾಣೆಯಲ್ಲೇ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಬಿಜೆಪಿ ಶಾಸಕನನ್ನು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ ಉಲ್ಲಾಸ್‌ನಗರ ಪ್ರದೇಶದ ಹಿಲ್‌ಲೈನ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್‌ನ ಕೊಠಡಿಯೊಳಗೆ ಕಲ್ಯಾಣ್‌ ಕ್ಷೇತ್ರದ ಶಿವಸೇನಾ(ಶಿಂಧೆ ಬಣ) ಮುಖ್ಯಸ್ಥ ಮಹೇಶ್ ಗಾಯಕ್ವಾಡ್ ಮೇಲೆ ಕಲ್ಯಾಣ್ ಕ್ಷೇತ್ರದ ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಗುಂಡು ಹಾರಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತಾತ್ರ್ಯ ಶಿಂಧೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಹೇಶ್ ಗಾಯಕ್ವಾಡ್ ಮತ್ತು ಗಣಪತ್ ಗಾಯಕ್ವಾಡ್ ನಡುವೆ ಭೂ ವಿವಾದವಿತ್ತು. ದೂರು ನೀಡಲು ಹಿಲ್ ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು, ಆದರೆ ಗಣಪತ್ ಗಾಯಕ್ವಾಡ್‌ ಮಾತುಕತೆಯ ಸಮಯದಲ್ಲಿ ಮಹೇಶ್ ಗಾಯಕ್ವಾಡ್ ಮತ್ತು ಅವರ ಸಹಚರರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಡಿಸಿಪಿ ಪಠಾರೆ ಹೇಳಿದ್ದಾರೆ.

ಘಟನೆಯ ನಂತರ ಬಂಧಿತರಾಗಿರುವ ಗಣಪತ್ ಗಾಯಕ್ವಾಡ್ ಅವರು ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿ, ಹೌದು, ನಾನೇ ಗುಂಡು ಹಾರಿಸಿದೆ. ನನಗೆ ಯಾವುದೇ ವಿಷಾದವಿಲ್ಲ. ಪೊಲೀಸ್ ಠಾಣೆಯೊಳಗೆ ಪೊಲೀಸರ ಮುಂದೆಯೇ ನನ್ನ ಮಗನಿಗೆ ಥಳಿಸಿದರೆ ನಾನೇನು ಮಾಡುತ್ತೇನೆ? ಐದು ಸುತ್ತು ಗುಂಡು ಹಾರಿಸಿದ್ದೇನೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದಲ್ಲಿ ಅಪರಾಧಿಗಳ ಸಾಮ್ರಾಜ್ಯವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಶಿಂಧೆ ಸಾಹೇಬ್, ಉದ್ಧವ್ ಠಾಕ್ರೆ ಸಾಹೇಬ್‌ಗೆ ದ್ರೋಹ ಮಾಡಿದ್ದಾರೆ, ಅವರು ಬಿಜೆಪಿಗೂ ದ್ರೋಹ ಮಾಡುತ್ತಾರೆ. ಮಹಾರಾಷ್ಟ್ರದ ಒಳಿತಿಗೆ ಶಿಂಧೆ ರಾಜೀನಾಮೆ ನೀಡಬೇಕು. ದೇವೇಂದ್ರ ಫಡ್ನವೀಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ನನ್ನ ವಿನಮ್ರ ವಿನಂತಿ ಎಂದು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಮಹೇಶ್ ಗಾಯಕ್ವಾಡ್ ಅವರನ್ನು ಥಾಣೆ ನಗರದ ಖಾಸಗಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿದೆ ಎಂದು ಶಿವಸೇನೆಯ ಕಲ್ಯಾಣ್ ಉಸ್ತುವಾರಿ ಗೋಪಾಲ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಗಣಪತ್ ಗಾಯಕ್‌ವಾಡ್ ಅವರಲ್ಲದೆ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ 307 (ಕೊಲೆ ಯತ್ನ) ಮತ್ತು 120 ಬಿ (ಅಪರಾಧ ಸಂಚು) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಗೃಹ ಖಾತೆಯನ್ನು ಹೊಂದಿರುವ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಯಾರೂ ಕೂಡ ಕಾನೂನು ಮತ್ತು ಸುವ್ಯವಸ್ಥೆಯನ್ನು ತನ್ನ ಕೈಗೆ ತೆಗೆದುಕೊಳ್ಳಬಾರದು ಎಂದು ಎನ್‌ಸಿಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಸರ್ಕಾರವನ್ನು ಶಿವಸೇನೆಯ ಉದ್ಧವ್ ಠಾಕ್ರೆ ಬಣ ಟೀಕಿಸಿದ್ದು, ಪೊಲೀಸ್ ಠಾಣೆಯೊಳಗೆ ಬಿಜೆಪಿ ಶಾಸಕ ಗುಂಡಿನ ದಾಳಿ ನಡೆಸಿದ್ದು, ಗುಂಡು ತಗುಲಿದ ವ್ಯಕ್ತಿ ಮಾಜಿ ಕಾರ್ಪೋರೇಟರ್ ಮತ್ತು ಸಿಎಂ ಆಪ್ತ. ಆರೋಪಿ ಶಾಸಕರ ಪಕ್ಷವೂ ಅಧಿಕಾರದಲ್ಲಿದೆ. ಇವರಿಗೆ ಕಾನೂನಿನ ಭಯವಿಲ್ಲ. ಕಾನೂನು ಸುವ್ಯವಸ್ತೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಉದ್ಧವ್ ಬಣದ ವಕ್ತಾರ ಆನಂದ್ ದುಬೆ ಹೇಳಿದ್ದಾರೆ. ಈ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರು ಸೋಮವಾರ ಸಂಸತ್ತಿನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದ್ದರೆ, ರಾಜ್ಯದಲ್ಲಿ ಗೂಂಡಾಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಹೇಳಿದ್ದಾರೆ.

Previous Post
ಶಾಸಕರ ಖರೀದಿ ಆರೋಪ: ಕೇಜ್ರಿವಾಲ್‌ಗೆ ದೆಹಲಿ ಪೊಲೀಸರಿಂದ ನೋಟಿಸ್
Next Post
ಪಂಜಾಬ್ ಗವರ್ನರ್ ಹುದ್ದೆಗೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ

Recent News