ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ನಾಟ್ ಓಕೆ

ಒಂದು ರಾಷ್ಟ್ರ, ಒಂದು ಚುನಾವಣೆ’ಗೆ ನಾಟ್ ಓಕೆ

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ‘ಒಂದು ರಾಷ್ಟ್ರ ಒಂದು ಚುನಾವಣೆ‘ ಕುರಿತ ಉನ್ನತ ಮಟ್ಟದ ಸಮಿತಿ ಜೊತೆ ಪ್ರತಿಪಕ್ಷಗಳ ನಿಯೋಗ ಮಾತುಕತೆ ನಡೆಸಿದ್ದು, ಪ್ರಸ್ತಾವನೆಗೆ ತಮ್ಮ ಬಲವಾದ ವಿರೋಧ ವ್ಯಕ್ತಪಡಿಸಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮತ್ತು ಸಮಾಜವಾದಿ (ಎಸ್‌ಪಿ) ಪಕ್ಷಗಳು ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾವನೆಯನ್ನು ವಿರೋಧಿಸಿವೆ.

ಇದಲ್ಲದೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್(ಎಫ್‌ಐಸಿಸಿಐ) ನಿಯೋಗವು ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತ ಉನ್ನತ ಮಟ್ಟದ ಸಮಿತಿಯನ್ನು ಭೇಟಿ ಮಾಡಿದ್ದು, ಏಕಕಾಲಕ್ಕೆ ಚುನಾವಣೆಯ ಕುರಿತ ಕಲ್ಪನೆಯನ್ನು ಬೆಂಬಲಿಸಿದೆ. ಟಿಎಂಸಿಯ ಹಿರಿಯ ನಾಯಕರಾದ ಸುದೀಪ್ ಬಂಡೋಪಾಧ್ಯಾಯ ಮತ್ತು ಕಲ್ಯಾಣ್ ಬ್ಯಾನರ್ಜಿ ಪ್ರಸ್ತಾವಣೆ ಬಗ್ಗೆ ಸಮಿತಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಗೆ ತಮ್ಮ ಪಕ್ಷದ ಆಕ್ಷೇಪವನ್ನು ಪುನರುಚ್ಚರಿಸಿದ್ದಾರೆ, ಈ ಕ್ರಮವು ಭಾರತವನ್ನು ಸರ್ವಾಧಿಕಾರದೆಡೆಗೆ ಪರಿವರ್ತಿಸುವ ಗೌಪ್ಯ ಅಜೆಂಡಾವನ್ನು ಹೊಂದಿದೆ ಎಂದು ಹೇಳಿದ್ದಾರೆ.

ನಾವು ಮಾಜಿ ರಾಷ್ಟ್ರಪತಿಗಳ ನೇತೃತ್ವದ ಸಮಿತಿಯ ಮುಂದೆ ಹಾಜರಾಗಿದ್ದೇವೆ. ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಬರೆದ ಪತ್ರವನ್ನು ನಾವು ಉಲ್ಲೇಖಿಸಿದ್ದೇವೆ. ನಾವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕಲ್ಪನೆಯನ್ನು ವಿರೋಧಿಸುತ್ತಿದ್ದೇವೆ ಎಂದು ಖಡಕ್‌ ಆಗಿ ಹೇಳಿದ್ದೇವೆ ಎಂದು ಹೇಳಿದ್ದಾರೆ. ಈ ಕಲ್ಪನೆಯನ್ನು ಕಾರ್ಯಗತಗೊಳಿಸಿದರೆ, ದೇಶದ ಸಂಯುಕ್ತ ರಚನೆಗೆ ಧಕ್ಕೆಯುಂಟುಮಾಡಲಿದೆ. ಉದಾಹರಣೆಗೆ ರಾಜ್ಯ ಸರ್ಕಾರ ಪತನವಾಗಿದೆ ಎಂದು ಭಾವಿಸೋಣ. ಅದು ಈಗ ಎಲ್ಲೆಡೆ ನಡೆಯುತ್ತಿದೆ. ಹಾಗಿದ್ದರೆ ಆ ರಾಜ್ಯ ಸರ್ಕಾರ ಮುಂದುವರಿಯುತ್ತದೆಯೇ ಅಥವಾ ಉಳಿದ ಅವಧಿಗೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ? ಹೀಗಾದರೆ ಜನರ ಆಯ್ಕೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಸಿಪಿಐ(ಎಂ) ಪ್ರಧಾನ ಸೀತಾರಾಂ ಯೆಚೂರಿ, ಪಾಲಿಟ್‌ಬ್ಯೂರೋ ಸದಸ್ಯ ನೀಲೋತ್ಪಾಲ್ ಬಸು ಮತ್ತು ಕೇಂದ್ರ ಕಾರ್ಯದರ್ಶಿ ಮುರಳೀಧರನ್ ಅವರನ್ನೊಳಗೊಂಡ ಮೂವರು ಸದಸ್ಯರ ಸಿಪಿಐ(ಎಂ) ನಿಯೋಗವೂ ಸಮಿತಿಯನ್ನು ಭೇಟಿ ಮಾಡಿ ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ.

ಸಮಿತಿಯನ್ನು ತಾನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದು ಪ್ರತಿಪಾದಿಸಿದ ಯೆಚೂರಿ, ಒಂದು ರಾಷ್ಟ್ರ, ಒಂದು ಚುನಾವಣೆ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂಯುಕ್ತ ವ್ಯವಸ್ಥೆಗೆ ವಿರೋಧಿಯಾಗಿದೆ. ಸದನದಲ್ಲಿ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡಾಗ, ಅದರ ಮುಂದುವರಿಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ. ರಾಜ್ಯ ಶಾಸಕಾಂಗದ ಅವಧಿಯನ್ನು ಮೊಟಕುಗೊಳಿಸುವುದು ಅಥವಾ ದೀರ್ಘಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಿದ್ದಾರೆ.

ಕೆಕೆ ಶ್ರೀವಾಸ್ತವ ಮತ್ತು ಹರಿಶ್ಚಂದ್ರ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ನಿಯೋಗ ಕೂಡ ಕೋವಿಂದ್ ನೇತೃತ್ವದ ಸಮಿತಿಯನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಪಕ್ಷದ ನಿಲುವನ್ನು ತಿಳಿಸಿದೆ. ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಎಸ್‌ಪಿ ಈಗಾಗಲೇ ಸಮಿತಿಗೆ ಲಿಖಿತವಾಗಿ ತನ್ನ ಅಭಿಪ್ರಾಯವನ್ನು ಸಲ್ಲಿಸಿದೆ, ಈ ಕಲ್ಪನೆಯನ್ನು ಸಂವಿಧಾನ ವಿರೋಧಿ ಮತ್ತು ರಾಜಪ್ರಭುತ್ವವನ್ನು ಸ್ಥಾಪಿಸುವ ದುರುದ್ದೇಶಪೂರಿತ ಪ್ರಯತ್ನ ಎಂದು ಕರೆದಿದೆ.

ಈ ಮಧ್ಯೆ FICCIಯ ನಿಯೋಗವು ಸಮಿತಿಯನ್ನು ಭೇಟಿ ಮಾಡಿದೆ ಮತ್ತು ಏಕಕಾಲಕ್ಕೆ ಮತದಾನದ ಕುರಿತ ಪ್ರಸ್ತಾವನೆಯನ್ನು ಬೆಂಬಲಿಸಿದೆ. ಏಕಕಾಲಕ್ಕೆ ಚುನಾವಣೆಯಿಂದ ಖರ್ಚಿನ ಉಳಿತಾಯವಾಗಲಿದೆ, ಆರ್ಥಿಕ ಬೆಳವಣಿಗೆ ಈ ಹಣವನ್ನು ಬಳಸಿಕೊಳ್ಳಬಹುದು ಎಂದು ಹೇಳಿದೆ.

 

Previous Post
ಸಚಿವ ರಾಮಲಿಂಗಾರೆಡ್ಡಿ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ
Next Post
ಬಿಜೆಪಿ ಬಗ್ಗೆ ಜಗನ್ ಗರಂ

Recent News