ಕರ್ನಾಟಕದ ಬಳಿಕ ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ ಸಿಎಂ ಪಿಣರಾಯಿ ವಿಜಯನ್‌ಗೆ ವಿಪಕ್ಷ ನಾಯಕರ ಬೆಂಬಲ

ಕರ್ನಾಟಕದ ಬಳಿಕ ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ ಸಿಎಂ ಪಿಣರಾಯಿ ವಿಜಯನ್‌ಗೆ ವಿಪಕ್ಷ ನಾಯಕರ ಬೆಂಬಲ

ನವದೆಹಲಿ : ತೆರಿಗೆ ಪಾಲಿನಲ್ಲಿ ಕೇಂದ್ರದ ಅನ್ಯಾಯ ಮತ್ತು ಪ್ರತಿಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ಸರಕಾರಗಳ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸಲು ರಾಜ್ಯಪಾಲರನ್ನು ಬಳಕೆ ಮಾಡುತ್ತಿರುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಕೇರಳದ ಎಡ ಪ್ರಜಾಸತ್ತಾತ್ಮಕ ರಂಗದ ನಾಯಕರು ಮತ್ತು ಶಾಸಕರು ಗುರುವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಡಿಎಂಕೆ ಮುಖಂಡರಾದ ತಿರುಚ್ಚಿ ಶಿವ ಮತ್ತು ಪಳನಿವೇಲ್ ತ್ಯಾಗರಾಜನ್ ಸೇರಿದಂತೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಮಾತನಾಡಿದ ಪಿಣರಾಯ್‌ ವಿಜಯನ್, ಪ್ರತಿಭಟನೆಗಳು ಉತ್ತರ-ದಕ್ಷಿಣ ಎಂಬ ವಿಭಜನೆಯನ್ನು ಉತ್ತೇಜಿಸುತ್ತದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ. ರಾಜ್ಯದ ಜನರ ಹಿತಾಸಕ್ತಿಗಳನ್ನು ಕಾಪಾಡಲು ನಾವು ಇಲ್ಲಿದ್ದೇವೆ. ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೆರಿಗೆಯ ಪಾಲನ್ನು ನೀಡುತ್ತಿಲ್ಲ ಮತ್ತು ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸಲು ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಬಳಸಲಾಗುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಆರೋಪಿಸಿದ್ದಾರೆ.

ಭಾರತದ ಒಕ್ಕೂಟ ರಚನೆಯನ್ನು ಸಂರಕ್ಷಿಸಲು ನಾವೆಲ್ಲರೂ ಒಗ್ಗೂಡಿದ್ದೇವೆ. ಕೇಂದ್ರವು ಹಲವಾರು ಕ್ಷೇತ್ರಗಳಲ್ಲಿ ರಾಜ್ಯಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ಅತಿಕ್ರಮಿಸುವ ಕಾನೂನುಗಳನ್ನು ರೂಪಿಸುತ್ತಿದೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಕೇಂದ್ರ ಸರ್ಕಾರದ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಮತ್ತು ರಾಜ್ಯ ಸರ್ಕಾರದ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ರಾಜ್ಯ ಸರಕಾರದ ಬಗೆಗೆ ಕೇಂದ್ರದ ಮನಸ್ಥಿತಿಯು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳಾದ್ಯಂತ ರಾಜ್ಯಪಾಲರು ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ. ಸಾಂವಿಧಾನಿಕವಾಗಿ, ರಾಜ್ಯಪಾಲರು ರಾಜ್ಯ ಸಚಿವ ಸಂಪುಟಗಳ ಸಲಹೆಯ ಮೇರೆಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಆದರೆ ಪ್ರತಿಪಕ್ಷಗಳ ಆಡಳಿತದ ರಾಜ್ಯದಲ್ಲಿ ರಾಜ್ಯಪಾಲರು ತಮ್ಮನ್ನು ನೇಮಿಸಿದ ಕೇಂದ್ರ ಸರ್ಕಾರದ ಆದೇಶದಂತೆ ವರ್ತಿಸುವ ಈ ವಿದ್ಯಮಾನವನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾವು ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ತಮಿಳುನಾಡು ಹೀಗೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರ ಹಸ್ತಕ್ಷೇಪವನ್ನು ನೋಡಿದ್ದೇವೆ. ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಶಾಸಕಾಂಗದ ಕಾರ್ಯದಲ್ಲಿ ಮಧ್ಯಪ್ರವೇಶಿಸುವ ಮೂಲಕ ಸಾಂವಿಧಾನಿಕ ಆದೇಶವನ್ನು ಮೀರಲು ಪ್ರಯತ್ನಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇದು ರಾಜ್ಯಗಳ ವಿರುದ್ಧದ ತಾರತಮ್ಯದ ವಿರುದ್ಧ ಪ್ರಜಾಸತ್ತಾತ್ಮಕ ಪ್ರತಿಭಟನೆಯಾಗಿದೆ. ನಮ್ಮ ಜನರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಂಡು ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಪಿಣರಾಯ್ ವಿಜಯನ್‌ ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆ ರಕ್ಷಿಸಲು ಹೋರಾಟ ಎಂಬ ಹೆಸರಿನಡಿ ಪ್ರತಿಭಟನೆ ಆರಂಭಿಸಿರುವ ಪಕ್ಷದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ಶಾಸಕರು, ಸಚಿವರು ಕೇಂದ್ರ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Previous Post
91 ವರ್ಷದಲ್ಲಿ ಬಿಜೆಪಿ ಜೊತೆಗೆ ಮೈತ್ರಿ, ಮೋದಿ ಹೊಗಳುವ ಗೌಡರ ಮರ್ಮ ಅರ್ಥವಾಗ್ತಿಲ್ಲ, ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ, ನಯವಾಗೇ ತಿರುಗೇಟು ನೀಡಿದ ಹೆಚ್.ಡಿ ದೇವೇಗೌಡ
Next Post
ಕಲಬುರಗಿ – ಬೆಂಗಳೂರು ನಡುವೆ ಹೊಸ ರೈಲು ನಡೆಸಲು ಮನವಿ

Recent News