ಕರ್ನಾಟಕ ಸರ್ಕಾರ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳ ಸೀಟು ಹಂಚಿಕೆ, ಶುಲ್ಕ ನಿಗದಿ ಮತ್ತು ಪ್ರವೇಶ ಪರೀಕ್ಷೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

ಕರ್ನಾಟಕ ಸರ್ಕಾರ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳ ಸೀಟು ಹಂಚಿಕೆ, ಶುಲ್ಕ ನಿಗದಿ ಮತ್ತು ಪ್ರವೇಶ ಪರೀಕ್ಷೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.

ಬೆಂಗಳೂರು, ಜನವರಿ 10: ಕರ್ನಾಟಕ ಸರ್ಕಾರ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಾದ ಎಂಬಿಎ/ ಎಂಸಿಎ/ ಎಂಇ/ ಎಂಟೆಕ್ ಕೋರ್ಸುಗಳಿಗೆ ಸೀಟು ಹಂಚಿಕೆ, ಶುಲ್ಕ ನಿಗದಿ ಮತ್ತು ಪ್ರವೇಶ ಪರೀಕ್ಷೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಮಹಾಂತಪ್ಪ ಎಸ್. ತುರಕನೂರ್ ಸರ್ಕಾರದ ಅಧೀನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ) ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಾದ ಎಂಬಿಎ/ ಎಂಸಿಎ/ ಎಂಇ/ ಎಂಟೆಕ್ ಕೋರ್ಸುಗಳ ಸೀಟು ಹಂಚಿಕೆ, ಶುಲ್ಕ ನಿಗದಿ ಹಾಗೂ ಪ್ರವೇಶ ಪ್ರಕ್ರಿಯೆಯನ್ನು ಈ ಕೆಳಗಿನಂತೆ ಪರಿಗಣಿಸಿ ಆದೇಶಿಸಿದೆ ಎಂದು ಹೇಳಿದೆ. ಶುಲ್ಕದ ವಿವರಗಳನ್ನು ನೀಡಿದೆ. ಈ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯನ್ನು ನಿರ್ವಹಿಸಲು ಮುಂದಿನ ಆದೇಶದವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ ಎಂದು ತಿಳಿಸಿದೆ. ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿ: 2023-24ನೇ ಶೈಕ್ಷಣಿಕ ಸಾಲಿನಲ್ಲಿ ಎಲ್ಲಾ ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿನ ಎಂಬಿಎ ಸ್ನಾತಕೋತ್ತರ ಕೋರ್ಸಿನ ಒಟ್ಟು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಸ್ನಾತಕೋತ್ತರ ಸಾಮಾನ್ಯ ನಿರ್ವಹಣಾ ಪ್ರವೇಶ ಪರೀಕ್ಷೆ ಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಹತೆಯ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಆನ್‌ಲೈನ್/ ಕೇಂದ್ರೀಕೃತ ಕೌನ್ಸಿಲಿಂಗ್ ಮುಖಾಂತರ ಭರ್ತಿ ಮಾಡತಕ್ಕದ್ದು. ಉಳಿದ ಶೇ.50 ರಷ್ಟು ಸೀಟುಗಳನ್ನು ಆಯಾ ಆಡಳಿತ ಮಂಡಳಿಗಳು ಕರ್ನಾಟಕ ಖಾಸಗಿ ಸ್ನಾತಕೋತ್ತರ ಪದವಿ ಕಾಲೇಜುಗಳ ಸಂಘದವರು ನಡೆಸುವ ಕರ್ನಾಟಕ ನಿರ್ವಹಣಾ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಹತೆಯ ಆಧಾರದ ಮೇಲೆ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳು ಅಥವಾ ಸಿ-ಮ್ಯಾಟ್ ರ‍್ಯಾಂಕಿಂಗ್ ಆಧಾರದ ಮೇಲೆ ಶೈಕ್ಷಣಿಕ ಅರ್ಹತೆ ಪಡೆದಿರುವ ಷರತ್ತಿಗೊಳಪಟ್ಟು ಭರ್ತಿ ಮಾಡಿಕೊಳ್ಳತಕ್ಕದ್ದು. ಎಂಸಿಎ ಸ್ನಾತಕೋತ್ತರ ಪದವಿ ಕೋರ್ಸಿನ ಶೇ.50ರಷ್ಟು ಸೀಟುಗಳನ್ನು ಎಲ್ಲಾ ಖಾಸಗಿ ಅನುದಾನರಹಿತ ಸಂಸ್ಥೆಗಳು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಹತೆಯ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೀಸಲಾತಿ ನೀತಿಯನ್ನು ಅನುಸರಿಸಿ ನಡೆಸುವ ಆನ್‌ಲೈನ್/ ಕೇಂದ್ರೀಕೃತ ಕೌನ್ಸಿಲಿಂಗ್ ಮುಖಾಂತರ ಭರ್ತಿ ಮಾಡತಕ್ಕದ್ದು. ಉಳಿದ ಶೇಕಡ 50 ರಷ್ಟು ಸೀಟುಗಳನ್ನು ಆಯಾ ಆಡಳಿತ ಮಂಡಳಿಗಳು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಹತೆಯ ಆಧಾರದ ಮೇಲೆ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳ ಅರ್ಹತಾ ಪರೀಕ್ಷೆಯಲ್ಲಿನ ರ‍್ಯಾಂಕ್ ಆಧಾರದ ಮೇಲೆ ಶೈಕ್ಷಣಿಕ ಅರ್ಹತ ಪಡೆದಿರುವ ಷರತ್ತಿಗೊಳಪಟ್ಟು ಭರ್ತಿ ಮಾಡಿಕೊಳ್ಳತಕ್ಕದ್ದು. ಎಂಇ ಮತ್ತು ಎಂಟೆಕ್ ಸ್ನಾತಕೋತ್ತರ ಪದವಿ: ಎಂಇ/ ಎಂಟೆಕ್ ಸ್ನಾತಕೋತ್ತರ ಪದವಿ ಕೋರ್ಸುಗಳ ಶೇ.80ರಷ್ಟು ಸೀಟುಗಳನ್ನು ಎಲ್ಲಾ ಖಾಸಗಿ ಅನುದಾನರಹಿತ ಸಂಸ್ಥೆಗಳು ಮತ್ತು ಖಾಸಗಿ ಅನುದಾನಿತ ಸಂಸ್ಥೆಗಳ ಅನುದಾನರಹಿತ ಕೋರ್ಸುಗಳಿಗೆ GATE ಅಥವಾ PGCET ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಹತೆಯ ಆಧಾರದ ಮೇಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸ್ನಾತಕೋತ್ತರ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳುರಲ್ಲಿ ವಿಧಿಸಿರುವ ನಿಬಂಧನೆಗಳನ್ವಯ ನಡೆಸುವ ಆನ್‌ಲೈನ್/ ಕೇಂದ್ರೀಕೃತ ಕೌನ್ಸಿಲಿಂಗ್‌ ಮುಖಾಂತರ ಭರ್ತಿ ಮಾಡತಕ್ಕದ್ದು. ಎಂಇ/ ಎಂಟೆಕ್ ಸ್ನಾತಕೋತ್ತರ ಪದವಿ ಕೋರ್ಸುಗಳ ಶೇ.20ರಷ್ಟು ಸೀಟುಗಳನ್ನು ಎಲ್ಲಾ ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿನ ಅನುದಾನರಹಿತ ಕೋರ್ಸುಗಳಿಗೆ GATE ಅಥವಾ PGCET ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆಯುವ ಅರ್ಹತೆಯ ಆಧಾರದ ಮೇಲೆ ಅಥವಾ ಕೋರ್ಸಿನ ಪ್ರವೇಶಾತಿ ಅರ್ಹತೆ ಕುರಿತಂತೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ/ ವಿಶ್ವವಿದ್ಯಾಲಯಗಳು ನಿಗದಿಪಡಿಸುವ ಪ್ರವೇಶಾತಿ ಅರ್ಹತೆಯ ಆಧಾರದ ಮೇಲೆ ಸಾಮಾನ್ಯ ಪ್ರವೇಶ ಪರೀಕ್ಷೆಯ ನಂತರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದವರು ಸಿದ್ಧಪಡಿಸುವ ಅರ್ಹತಾ ಪಟ್ಟಿಯ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳತಕ್ಕದ್ದು. ಶುಲ್ಕಗಳ ವಿವರ; ಸರ್ಕಾರಿ/ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಅನುದಾನಿತ ಕೋರ್ಸ್‌ಗಳ ಬೋಧನಾ ಶುಲ್ಕದ ವಿವರ. ಎಂಬಿಎ/ ಎಂಸಿಎ/ ಎಂಇ/ ಎಂಟೆಕ್ ವಾರ್ಷಿಕ ಬೋಧನಾ ಶುಲ್ಕ 20,000 ರೂ.ಗಳು. ವಿದ್ಯಾರ್ಥಿಗಳು ಬೋಧನಾ ಶುಲ್ಕದೊಂದಿಗೆ ವಿಶ್ವವಿದ್ಯಾಲಯ ಶುಲ್ಕವನ್ನು ಸಹ ಪಾವತಿಸತಕ್ಕದು. ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೌನ್ಸೆಲಿಂಗ್ ಮತ್ತು ಹಂಚಿಕೆ ಮಾಡಲಾಗುವ ಸೀಟುಗಳಿಗೆ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ವಿದ್ಯಾರ್ಥಿಗಳು ವರದಿ ಮಾಡಿದ ಒಂದು ತಿಂಗಳೊಳಗೆ ಆಯಾ ಕಾಲೇಜುಗಳಿಗೆ ವರ್ಗಾಯಿಸುವುದು ಮತ್ತು ವಿಶ್ವವಿದ್ಯಾಲಯದ ಶುಲ್ಕವನ್ನು ಮಾತ್ರ ವಿಶ್ವವಿದ್ಯಾಲಯಗಳಿಗೆ ವರ್ಗಾಯಿಸುವುದು. ಖಾಸಗಿ ಅನುದಾನರಹಿತ ಸಂಸ್ಥೆಗಳ ಅನುದಾನರಹಿತ ಕೋರ್ಸುಗಳ ಬೋಧನಾ ಶುಲ್ಕ ಎಂಬಿಎ, ಎಂಸಿಎ, ಎಂಇ, ಎಂಟೆಕ್ 57,750 ರೂ.ಗಳು. ವಿದ್ಯಾರ್ಥಿಗಳು ಬೋಧನಾ ಶುಲ್ಕದೊಂದಿಗೆ ವಿಶ್ವವಿದ್ಯಾಲಯ ಶುಲ್ಕವನ್ನು ಸಹ ಪಾವತಿಸತಕ್ಕದು. ಈ ವಿದ್ಯಾರ್ಥಿಗಳಿಗೆ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳ ಹಂತದಲ್ಲಿ ಯಾವುದೇ ಬೋಧನಾ ಶುಲ್ಕ ಅಥವಾ ಯಾವುದೇ ಇತರ ಶುಲ್ಕಗಳನ್ನು ಸಂಗ್ರಹಿಸತಕ್ಕದಲ್ಲ ಅಥವಾ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳು ಬೇಡಿಕೆ ಇಡತಕ್ಕದ್ದಲ್ಲ.

Previous Post
ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post
ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.

Recent News