ಕೇಂದ್ರದ ತಾರತಮ್ಯ ವಿರೋಧಿಸಿ‌ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಿಪಿಐ(ಎಂ) ನಿರ್ಧಾರ

ಕೇಂದ್ರದ ತಾರತಮ್ಯ ವಿರೋಧಿಸಿ‌ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಿಪಿಐ(ಎಂ) ನಿರ್ಧಾರ

ನವದೆಹಲಿ, ಜ. 16: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರಕಾರದ ಪ್ರತಿನಿಧಿಗಳು ಫೆ.8ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಿದ್ದಾರೆ. ಮಂಗಳವಾರ ತಿರುವನಂತಪುರದಲ್ಲಿ ನಡೆದ ಎಲ್‌ಡಿಎಫ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್‌ಡಿಎಫ್ ಸಂಚಾಲಕ ಮತ್ತು ಹಿರಿಯ ಸಿಪಿಐ(ಎಂ) ನಾಯಕ ಇ ಪಿ ಜಯರಾಜನ್ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅಭಿವೃದ್ಧಿಯಲ್ಲಿ ಹಿನ್ನೆಡೆ ಸೃಷ್ಟಿಸುವ ಮೂಲಕ ಎಲ್‌ಡಿಎಫ್ ಸರ್ಕಾರದ ಜನಪ್ರಿಯತೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರದ ಕಡೆಯಿಂದ ಸಂಘಟಿತ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ತೆರಿಗೆ ಪಾಲು ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಹಣವನ್ನು ಕೇಂದ್ರ ತಡೆ ಹಿಡಿಯುತ್ತದೆ. ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಬಹಳ ಮುಖ್ಯ. ರಾಜ್ಯವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಕೇಂದ್ರ ಸರ್ಕಾರವು ಅಭಿವೃದ್ಧಿ ಚಟುವಟಿಕೆಗಳಿಗೆ ಹಣಕಾಸು ಸಹಾಯ ಪಡೆಯುವ ಹಕ್ಕನ್ನು ಸಹ ಮೊಟಕುಗೊಳಿಸಿದೆ. ಕೇರಳಕ್ಕೆ ಸಾಲ ಪಡೆಯಲು ಅವಕಾಶವಿಲ್ಲದಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇರಳಕ್ಕೆ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯವನ್ನು ಎತ್ತಿ ತೋರಿಸಲಾಗುವುದು ಎಂದು ಜಯರಾಜನ್ ಹೇಳಿದ್ದಾರೆ. ಫೆಬ್ರವರಿ 8 ರಂದು ಪಿಣರಾಯ್‌ ವಿಜಯನ್ ನೇತೃತ್ವದ ಸಚಿವ ಸಂಪುಟವು ದೆಹಲಿಯ ಕೇರಳ ಹೌಸ್‌ನಿಂದ ಜಂತರ್ ಮಂತರ್‌ಗೆ ಪ್ರತಿಭಟನೆ ಮೆರವಣಿಗೆ ನಡೆಸಲಿದೆ. ಅಲ್ಲದೆ ಕ್ಯಾಬಿನೆಟ್ ಸದಸ್ಯರು, ಎಲ್ಲಾ ಎಲ್‌ಡಿಎಫ್ ಶಾಸಕರು ಮತ್ತು ಸಂಸತ್ ಸದಸ್ಯರು ಆಂದೋಲನದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಹಲವಾರು ತಿಂಗಳುಗಳಿಂದ ಕೇರಳ ಸರ್ಕಾರ ಮತ್ತು ಎಲ್‌ಡಿಎಫ್ ರಾಜ್ಯದಲ್ಲಿ ಪ್ರತಿಭಟನೆಗೆ ಮುಂದಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದ ಸಾಲದ ಮಿತಿಯನ್ನು ಕಡಿತಗೊಳಿಸುವ ಮೂಲಕ ರಾಜ್ಯವನ್ನು ಹೇಗೆ ಆರ್ಥಿಕವಾಗಿ ಉಸಿರುಗಟ್ಟಿಸುತ್ತಿದೆ ಎಂಬುವುದನ್ನು ಹೇಳಿಕೊಂಡು ಬಂದಿದೆ. ರಾಜ್ಯದ ಸಾಲದ ಮೇಲೆ ಕೇಂದ್ರ ಸರ್ಕಾರ ಹೇರಿರುವ ಮಿತಿಯನ್ನು ಪ್ರಶ್ನಿಸಿ ರಾಜ್ಯವು ಈಗಾಗಲೇ ಸುಪ್ರೀಂಕೋರ್ಟ್‌ಗೆ ಅರ್ಜಿಯನ್ನು ಕೂಡ ಸಲ್ಲಿಸಿದೆ.

ಎಲ್‌ಡಿಎಫ್ ಇಡೀ ರಾಜ್ಯದಲ್ಲಿ ಈ ಬಗ್ಗೆ ಆಂದೋಲನವಾಗಬೇಕೆಂದು ಬಯಸುತ್ತದೆ ಎಂದು ಜಯರಾಜನ್ ಹೇಳಿದ್ದು, ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಯುಡಿಎಫ್ ಆಂದೋಲನಕ್ಕೆ ಸಹಕರಿಸಬೇಕೆಂದು ನಾವು ಬಯಸುತ್ತೇವೆ. ಇದು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧದ ರಾಜ್ಯದ ಪ್ರತಿಭಟನೆಯಾಗಿದೆ. ಯುಡಿಎಫ್‌ ಶಾಸಕರು ಮತ್ತು ಸಂಸದರು ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ರಾಜ್ಯದ ಬೂತ್ ಮಟ್ಟದ ಎಲ್‌ಡಿಎಫ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ರಾಜ್ಯದ ಜನರಿಗೆ ಈ ಬಗ್ಗೆ ತಿಳಿಸಲಿದ್ದಾರೆ. ಎಲ್ಲಾ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಈ ಬಗ್ಗೆ ಸಾರ್ವಜನಿಕ ಸಭೆ ಕೂಡ ನಡೆಯಲಿದೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹಾಗೂ ಉಪ ನಾಯಕ ಪಿ.ಕೆ.ಕುನ್ಹಲಿಕುಟ್ಟಿ ಅವರೊಂದಿಗೆ ಆನ್‌ಲೈನ್ ಮೂಲಕ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಧರಣಿಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿಗೆ ಸತೀಶನ್ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Previous Post
INDIA ಮೈತ್ರಿಕೂಟದ ಸ್ಥಿತಿ ಉತ್ತಮವಾಗಿದೆ: ರಾಹುಲ್ ಗಾಂಧಿ
Next Post
ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣದಲ್ಲಿ ರಾಜ್ಯದ ಸಾಧನೆ ತೃಪ್ತಿಕರವಾಗಿಲ್ಲ: ಸಿಎಂ

Recent News