ಕೇಂದ್ರದ ವಿರುದ್ಧ ಇಂದು ಕೇರಳ ಪ್ರತಿಭಟನೆ: ತಮಿಳುನಾಡಿನ ಬೆಂಬಲ

ಕೇಂದ್ರದ ವಿರುದ್ಧ ಇಂದು ಕೇರಳ ಪ್ರತಿಭಟನೆ: ತಮಿಳುನಾಡಿನ ಬೆಂಬಲ

ನವದೆಹಲಿ, ಫೆ. 7: ಕೇಂದ್ರ ಸರ್ಕಾರದ ಅನುದಾನ ಹಂಚಿಕೆ ತಾರತಮ್ಯ ನೀತಿ ಖಂಡಿಸಿ ಕರ್ನಾಟಕ ಸರ್ಕಾರದಿಂದ ಇಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ನಾಳೆ ಇದೇ ಜಾಗದಲ್ಲಿ ಕೇರಳ ಸರ್ಕಾರ ಪ್ರತಿಭಟಿಸಲಿದೆ. ಕೇಂದ್ರದ ಆರ್ಥಿಕ ತಾರತಮ್ಯ ಖಂಡಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು, ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ದ ಶಾಸಕರು ಮತ್ತು ಸಂಸದರೊಂದಿಗೆ ಗುರುವಾರ (ಫೆ 8) ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಕೇರಳವನ್ನು ನಿರ್ಲಕ್ಷಿಸಿರುವ ಕೇಂದ್ರದ ಧೋರಣೆಯ ವಿರುದ್ಧ ಫೆ.8ರಂದು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ತಮಿಳುನಾಡು, ದೆಹಲಿ ಮತ್ತು ಪಂಜಾಬ್ ಸರ್ಕಾರಗಳು ಬೆಂಬಲ ಘೋಷಿಸಿವೆ ಎಂದು ಎಲ್‌ಡಿಎಫ್ ಸರ್ಕಾರದ ಕೆವಿ ಥಾಮಸ್ ಹೇಳಿದ್ದಾರೆ. ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರಿಗೆ ಸಿಎಂ ಪಿಣರಾಯಿ ವಿಜಯನ್ ಧನ್ಯವಾದ ತಿಳಿಸಿದ್ದಾರೆ. “ಸ್ಟಾಲಿನ್ ಅವರ ಈ ನಡೆ ಹೋರಾಟಕ್ಕೆ ಪ್ರೋತ್ಸಾಹ ನೀಡಲಿದೆ ಮತ್ತು ಒಕ್ಕೂಟ ತತ್ವಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಿದೆ ಎಂದಿದ್ದಾರೆ.

ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಆ ಬಳಿಕ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ತಮಿಳುನಾಡು ಸಿಡಿದ್ದೆದ್ದಿದ್ದು ‘ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ. ನಮಗೆ ಬರಬೇಕಿದ್ದ ತೆರಿಗೆ ಪಾಲನ್ನು ಕೊಟ್ಟಿಲ್ಲ’ ಎಂದು ಹೋರಾಟಕ್ಕೆ ಇಳಿದಿದೆ. ಕೇಂದ್ರದ ತಾರತಮ್ಯ ನೀತಿಯಿಂದ 2017-18ನೇ ಹಣಕಾಸು ವರ್ಷದಲ್ಲಿ ಕರ್ನಾಟಕಕ್ಕೆ 1 ಲಕ್ಷದ 87 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯದಿಂದ ಕೇಂದ್ರಕ್ಕೆ 100 ರೂಪಾಯಿ ಹೋದರೆ ವಾಪಸ್‌ ಬರುತ್ತಿರುವುದು ಕೇವಲ 12-13 ರೂ.ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವರದಿಗಳ ಪ್ರಕಾರ, ಕೇಂದ್ರದಿಂದ ಕೇರಳ ಸರ್ಕಾರಕ್ಕೆ 780 ಕೋಟಿ ರೂಪಾಯಿ ಜಿಎಸ್‌ಟಿ ಪಾಲು ಬರಲು ಬಾಕಿಯಿದೆ. ಇತರ ಅನುದಾನಗಳ ಹಂಚಿಕೆಯಲ್ಲೂ ಕೊರತೆಯಾಗಿದೆ ಎಂದು ಸರ್ಕಾರ ಆರೋಪಿಸಿದೆ. ಜಿಎಸ್‌ಟಿ ಪರಿಹಾರದ ಬಾಕಿ ಉಳಿದಿರುವ 16,982 ಕೋಟಿ ರೂ.ಗಳನ್ನು ರಾಜ್ಯಗಳಿಗೆ ನೀಡಲಾಗುವುದು. ಕೇಂದ್ರವು ತನ್ನ ಸ್ವಂತ ಸಂಪನ್ಮೂಲಗಳಿಂದ ಮೊತ್ತವನ್ನು ಬಿಡುಗಡೆ ಮಾಡಲಿದೆ ಮತ್ತು ಭವಿಷ್ಯದ ಸೆಸ್ ಸಂಗ್ರಹದಿಂದ ಅದನ್ನು ಮರುಪಾವತಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್ ಭಾಷಣದ ಬಳಿಕ ಹೇಳಿದ್ದರು.

Previous Post
ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲವಾದರೆ ಆ ಸರ್ಕಾರ ಯಾಕಿರಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
Next Post
ಚಂದಾ ಕೊಚ್ಚರ್ ಬಂಧನ ‘ಅಕ್ರಮ’: ಹೈಕೋರ್ಟ್‌ ತೀರ್ಪು

Recent News