ಕೇಂದ್ರ ಬಜೆಟ್ ಬಗ್ಗೆ ಜನರಿಗೆ ನಿರೀಕ್ಷೆಯೇ ಇಲ್ಲ : ಈಶ್ವರ ಖಂಡ್ರೆ

ಕೇಂದ್ರ ಬಜೆಟ್ ಬಗ್ಗೆ ಜನರಿಗೆ ನಿರೀಕ್ಷೆಯೇ ಇಲ್ಲ : ಈಶ್ವರ ಖಂಡ್ರೆ

ಬೆಂಗಳೂರು, ಜ.31: ಚುನಾವಣೆ ಹೊಸ್ತಿಲಲ್ಲಿ ಜನರನ್ನು ಮೋಸಗೊಳಿಸುವಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಲಿದ್ದು, ಈ ಬಜೆಟ್ ಮೇಲೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಚಾತೈಲ ದರ ಕಡಿಮೆ ಇದ್ದಾಗ್ಯೂ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಹೆಚ್ಚಳ ಮಾಡಿ ಹಣ ಮಾಡಿರುವ ಕೇಂದ್ರ ಸರ್ಕಾರ, ಚುನಾವಣೆ ಹೊಸ್ತಿಲಲ್ಲಿ ಬೆಲೆ ಇಳಿಸುವ ನಾಟಕವಾಡಲಿದೆ. ನೂರು ಪಟ್ಟು ಹೆಚ್ಚಳ ಮಾಡಿ ಈಗ ಹತ್ತರಷ್ಟು ಕಡಿತ ಮಾಡಿ ಮೋಸ ಮಾಡುವ ಪ್ರಯತ್ನ ಮಾಡಬಹುದು ಎಂದರು.
2014ರ ಪೂರ್ವದಲ್ಲಿ 55 ಲಕ್ಷ ಕೋಟಿ ಇದ್ದ ದೇಶದ ಸಾಲ ಇಂದು 200 ಲಕ್ಷ ಕೋಟಿ ರೂ. ದಾಟಿದೆ. ಈ ದೇಶದ ಪ್ರತಿ ಪ್ರಜೆಯ ಅಷ್ಟೇ ಏಕೆ ಮುಂದೆ ಹುಟ್ಟುವ ಮಗುವಿನ ತಲೆಯ ಮೇಲೂ ಸಾಲದ ಹೊರೆ ಹೊರಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ ಎಂದರು.
ಬಿಜೆಪಿಗೆ ಹಿಂದುತ್ವ ಬಿಟ್ಟು ಬೇರೆ ವಿಷಯ ಇಲ್ಲ:
ರಾಜ್ಯ ಸರ್ಕಾರ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದು, ಎಲ್ಲ ಗ್ಯಾರಂಟಿಗಳನ್ನೂ ಯಶಸ್ವಿಯಾಗಿ ಜಾರಿಗೆ ತಂದಿದೆ. ಮುಂದೆಯೂ ಈ ಎಲ್ಲ ಗ್ಯಾರಂಟಿಗಳು ಮುಂದುವರಿಯುತ್ತವೆ. ರಾಜ್ಯದ ಜನತೆ ಸುಖ, ಶಾಂತಿ, ನೆಮ್ಮದಿಯಿಂದ ಇದ್ದಾರೆ ಎಂದರು.
ರಾಜ್ಯ ದಿವಾಳಿ ಆಗುತ್ತದೆ ಎಂದು ಜನರನ್ನು ದಾರಿತಪ್ಪಿಸುತ್ತಿದ್ದ ಬಿಜೆಪಿಗೆ ಈಗ ಸರ್ಕಾರದ ಮೇಲೆ ಆರೋಪ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ .ಹೀಗಾಗಿ ಹಿಂದುತ್ವ ಒಂದೇ ಅದಕ್ಕೆ ಆಧಾರವಾಗಿದೆ. ಇಷ್ಟು ದಿನ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಈ ಸಂಘರ್ಷವನ್ನು ಹಳೆಯ ಮೈಸೂರು ಭಾಗಕ್ಕೂ ವಿಸ್ತರಿಸಿ, ನಾಡಿನ ಶಾಂತಿ ಕದಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ, ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು.
ಅಧಿಕಾರ ದಾಹ: ಬಿಜೆಪಿಗೆ ಅಧಿಕಾರದಾಹದ ಹೊರತಾಗಿ ಬೇರೆ ಏನೂ ಇಲ್ಲ. ಯುವಕರ ಬಗ್ಗೆ ಚಿಂತೆ ಇಲ್ಲ, ದುಡಿಯುವ ಕೈಗೆ ಉದ್ಯೋಗ ಕೊಡುವ ಚಿಂತಿಯೂ ಇಲ್ಲ. ಬಡವರ ಬಗ್ಗೆ ಚಿಂತೆ ಇಲ್ಲ ಎಂದು ದೂರಿದರು.

Previous Post
ಇಡಿ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ ಸಿಎಂ ಹೇಮಂತ್ ಸೊರೆನ್
Next Post
ಕೇಂದ್ರ ಸರ್ಕಾರ ದೇಶದ ಜನರ ಹಿತಾಸಕ್ತಿಗೆ ಅನುಗುಣವಾಗಿ ಹಲವು ಮಹತ್ವದ ಯೋಜನೆಗಳನ್ನು ಪೂರ್ಣ

Recent News