ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಹತ್ಯೆಗೈದ ಮಹಿಳೆ

ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಹತ್ಯೆಗೈದ ಮಹಿಳೆ

ಬೆಂಗಳೂರು: ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಹತ್ಯೆಗೈದ ಮಹಿಳೆಯನ್ನು ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿ ಮಹಿಳೆಯನ್ನು ಮಾಪುಸಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಹತ್ಯೆ ಪ್ರಕರಣದಲ್ಲಿ ಉತ್ತರ ಗೋವಾ ಎಸ್ಪಿ ನಿಧಿನ್ ವಲ್ಸನ್ , ‘ಬೆಂಗಳೂರಿಗೆ ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆ ಮಹಿಳೆಯೊಬ್ಬರು ಹೋಟೆಲ್ ಸಿಬ್ಬಂದಿಯನ್ನು ಕೇಳಿದರು.ಮಹಿಳೆ ಚೆಕ್‌ಔಟ್‌ ಆದಾಗ ಕೊಠಡಿಯನ್ನು ಸ್ವಚ್ಛಗೊಳಿಸಲು ಹೊಟೇಲ್‌ ಸಿಬ್ಬಂದಿ ತೆರಳಿದ್ದಾರೆ. ಆಗ ಕೆಂಪು ಕಲೆಗಳು ಕಂಡು ಬಂದಿದ್ದು, ಇದು ರಕ್ತ ಎಂದು ಭಾವಿಸಿದ್ದಾರೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ’ ಎಂದು ತಿಳಿಸಿದರು. ಆಗ ಪೊಲೀಸರು ಹೋಟೆಲ್ ತಲುಪಿ ಚಾಲಕನ ಮೂಲಕ ಮಹಿಳೆಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ.ಪೊಲೀಸರು ಮಹಿಳೆಗೆ ಆಕೆಯ ಮಗನ ಬಗ್ಗೆ ವಿಚಾರಣೆ ನಡೆಸಿದಾಗ, ಮಗ ತನ್ನ ಸ್ನೇಹಿತರೊಬ್ಬರೊಂದಿಗೆ ಉಳಿದುಕೊಂಡಿದ್ದಾನೆ ಎಂದು ಹೇಳಿದ್ದಾಳೆ. ಆದರೆ ಕೊನೆಗೆ ಪೊಲೀಸರಿಗೆ ಮಹಿಳೆ ನೀಡಿದ ಮನೆ ವಿಳಾಸ ನಕಲಿ ಎಂದು ತಿಳಿದುಬಂದಿದೆ. ಕಾರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬರುವಂತೆ ಚಾಲಕನಿಗೆ ಹೇಳಿದಾಗ ಮಹಿಳೆಯ ವಸ್ತುಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ಮಗುವಿನ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿ ಮಹಿಳೆ ಜನವರಿ 6 ರಂದು ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಹೋಟೆಲ್​​​​​ಗೆ ಬಂದಿದ್ದಳು ಎಂದು ಕ್ಯಾಲಂಗುಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪರೇಶ್ ನಾಯ್ಕ್ ಹೇಳಿದ್ದಾರೆ. ಅಲ್ಲಿ ಎರಡು ದಿನ ತಂಗಿದ್ದ ಆಕೆ, ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಬೇಕು ಎಂದು ಸಿಬ್ಬಂದಿಗೆ ಹೇಳಿದ್ದಾಳೆ. ಟ್ಯಾಕ್ಸಿ ವ್ಯವಸ್ಥೆ ಮಾಡುವಂತೆಯೂ ಕೇಳಿಕೊಂಡಿದ್ದಾಳೆ. ಆಗ ‘ಟ್ಯಾಕ್ಸಿಯಲ್ಲಿ ಹೋಗುವುದು ದುಬಾರಿಯಾಗುವುದರಿಂದ ಬೆಂಗಳೂರಿಗೆ ವಿಮಾನದಲ್ಲಿ ಹೋಗಬಹುದು’ ಎಂದು ಸಿಬ್ಬಂದಿ ಮಹಿಳೆಗೆ ಹೇಳಿದ್ದಾರೆ. ಆದರೆ ಟ್ಯಾಕ್ಸಿಯಲ್ಲೇ ಹೋಗುತ್ತೇನೆ ಎಂದು ಆರೋಪಿ ಪಟ್ಟು ಹಿಡಿದಿದ್ದಾಳೆ.ಪೊಲೀಸ್ ಇನ್ಸ್‌ಪೆಕ್ಟರ್ ಆರೋಪಿ ಮಹಿಳೆಯನ್ನು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಹೇಳಿದ್ದು, ಚಿತ್ರದುರ್ಗದಲ್ಲಿ ಪೊಲೀಸರು ಮಹಿಳೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಮಗುವಿನ ಶವ ಪತ್ತೆಯಾಗಿದೆ. ಘಟನೆಯ ಕುರಿತು ಆರೋಪಿಯ ಪತಿ ವೆಂಕಟ್ ರಾಮನ್ ಅವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅವರು ಪ್ರಸ್ತುತ ಜಕಾರ್ತಾದಲ್ಲಿದ್ದಾರೆ.

Previous Post
ಸಂಸ್ಕರಿಸಿದ ನೀರು ನೇರ ಬಳಕೆ ವಿರುದ್ದ ಕಠಿಣ ಕ್ರಮ: ಸಚಿವ ಎನ್ ಎಸ್ ಭೋಸರಾಜು
Next Post
ಲೋಕಸಭೆ ಟಿಕೇಟ್‌ಗಾಗಿ ಸೋಮಣ್ಣ ಲಾಬಿ – ಇಂದು ಅಮಿತ್ ಶಾ ಭೇಟಿ

Recent News