ಗೋ ಹತ್ಯೆ ಮಾಡಿ ಮುಸ್ಲಿಂ ವ್ಯಕ್ತಿ ಸಿಲುಕಿಸಲು ಯತ್ನ: ಬಜರಂಗದಳದ ಜಿಲ್ಲಾಧ್ಯಕ್ಷ ಸೇರಿ ನಾಲ್ವರ ಬಂಧನ

ಗೋ ಹತ್ಯೆ ಮಾಡಿ ಮುಸ್ಲಿಂ ವ್ಯಕ್ತಿ ಸಿಲುಕಿಸಲು ಯತ್ನ: ಬಜರಂಗದಳದ ಜಿಲ್ಲಾಧ್ಯಕ್ಷ ಸೇರಿ ನಾಲ್ವರ ಬಂಧನ

ಮೊರಾದಾಬಾದ್, ಫೆ. 1: ಮುಸ್ಲಿಂ ವ್ಯಕ್ತಿಯನ್ನು ಗೋಹತ್ಯೆಯ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಗೋಹತ್ಯೆ ಮಾಡಿದ ಆರೋಪದ ಮೇಲೆ ಬಜರಂಗದಳದ ಮೊರಾದಾಬಾದ್ ಜಿಲ್ಲಾಧ್ಯಕ್ಷ ಸೇರಿದಂತೆ ನಾಲ್ವರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಮೊರಾದಾಬಾದ್ ಜಿಲ್ಲೆಯ ಚೇತ್ರಂಪುರ ಗ್ರಾಮದ ಶಹಾಬುದ್ದೀನ್, ಬಜರಂಗದಳದ ಮುಖಂಡ ಮೋನು ಬಿಷ್ಣೋಯ್ ಅಲಿಯಾಸ್ ಸುಮಿತ್ ಮತ್ತು ಆತನ ಸಹಚರರಾರ ರಮಣ್ ಚೌಧರಿ ಮತ್ತು ರಾಜೀವ್ ಚೌಧರಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ ಶಹಾಬುದ್ದೀನ್‌ಗೆ, ಮಕ್ಸೂದ್‌ ಎಂಬಾತನ ಜೊತೆ ವೈಯಕ್ತಿಕ ವೈಷಮ್ಯ ಇತ್ತು. ಈತ ಬಜರಂಗ ದಳದ ಕಾರ್ಯಕರ್ತರ ಸಹಾಯವನ್ನು ಪಡೆದು ಗೋಹತ್ಯೆ ಕೇಸ್‌ನಲ್ಲಿ ಮಕ್ಸೂದ್‌ ಎಂಬಾತನನ್ನು ಜೈಲಿಗೆ ಕಳುಹಿಸಿದ್ದಾನೆ. ಹರಿದ್ವಾರಕ್ಕೆ ಹೋಗಲು ಶ್ರಾವಣ ಮಾಸದಲ್ಲಿ ಹಿಂದೂ ಯಾತ್ರಿಕರು ಹೆಚ್ಚಾಗಿ ಬಳಸುವ ರಸ್ತೆಯಾದ ಕನ್ವರ್ ಪಥ್‌ನಿಂದ ಜನವರಿ 16ರಂದು ಹಸುವಿನ ತಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರ ನಂತರ ಜನವರಿ 28ರ ರಾತ್ರಿ ಗೋಹತ್ಯೆಯ ಮತ್ತೊಂದು ಘಟನೆ ಕೆಲವು ಕಿಲೋಮೀಟರ್ ದೂರದಲ್ಲಿರುವ ಚೆತ್ರಾಮ್‌ಪುರ ಗ್ರಾಮದಲ್ಲಿ ನಡೆದಿದೆ. ಎರಡೂ ಘಟನೆಗಳು ಅನುಮಾನಾಸ್ಪದ ಮತ್ತು ಪರಸ್ಪರ ಸಂಬಂಧವನ್ನು ಹೊಂದಿರುವಂತೆ ಕಂಡು ಬಂದಿತ್ತು. ಇದು ಕೇವಲ ಗೋಹತ್ಯೆಯ ಪ್ರಕರಣವಲ್ಲ, ಖಂಡಿತವಾಗಿಯೂ ಅದರಲ್ಲಿ ಕೆಲವು ಹಿಡನ್ ಅಜೆಂಡಾ ಇದೆ ಎಂಬ ಅನುಮಾನವಿತ್ತು ಎಂದು ಮೊರಾದಾಬಾದ್‌ನ ಪೊಲೀಸ್‌ ಅಧೀಕ್ಷಕ ಹೇಮರಾಜ್ ಮೀನಾ ಹೇಳಿದ್ದಾರೆ.

ಎರಡನೇ ಘಟನೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಒಬ್ಬ ವ್ಯಕ್ತಿಯ ಪ್ಯಾಂಟ್ ಮತ್ತು ಮಕ್ಸೂದ್ ಅವರ ಫೋಟೋ ಇರುವ ವ್ಯಾಲೆಟ್ ಪತ್ತೆಯಾಗಿದೆ. ಈ ಬಗ್ಗೆ ಮಕ್ಸೂದ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ಗ್ರಾಮದ ಕೆಲವು ಜನರೊಂದಿಗೆ ದ್ವೇಷವನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ ಆತನ ವಿರುದ್ಧ ಪಿತೂರಿ ನಡೆಸಿರುವ ಬಗ್ಗೆ ಹೇಳಿದ್ದಾರೆ. ಇದೇ ವೇಳೆ ಶಹಾಬುದ್ದೀನ್ ಹೆಸರನ್ನು ಮಕ್ಸೂದ್‌ ಹೇಳಿದ್ದಾರೆ. ಶಹಾಬುದ್ದೀನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಮೋನು ಬಿಷ್ಣೋಯ್, ರಾಜೀವ್ ಚೌಧರಿ ಮತ್ತು ರಮಣ್ ಚೌಧರಿ ಅವರ ಸಹಾಯವನ್ನು ಪಡೆದು ಕೃತ್ಯವನ್ನು ನಡೆಸಿರುವುದು ಬಹಿರಂಗವಾಗಿದೆ ಎಂದು ಹೇಮರಾಜ್ ಮೀನಾ ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ಮೋನು ಬಿಷ್ಣೋಯ್‌ ಕೊಲೆ ಯತ್ನ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ. ಜೈಲಿನಿಂದ ಬಂದ ಈತ ಛಜ್ಲೈತ್ ಠಾಣೆಯ ಪೊಲೀಸರಿಗೆ ತನ್ನ ಕಾನೂನುಬಾಹಿರ ಚಟುವಟಿಕೆಗಳಿಗೆ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದ. ಅಧಿಕಾರಿಗಳು ಈತನ ಮಾತನ್ನು ನಿರಾಕರಿಸಿದಾಗ ಅವರ ವಿರುದ್ಧ ಸಂಚು ರೂಪಿಸಿದ್ದಾನೆ. ಮೊದಲು ಅವರು ಜನವರಿ 14ರಂದು ಶಹಾಬುದ್ದೀನ್ ಸಹಚರ ನಯೀಮ್‌ಗೆ 2,000ರೂ.ನೀಡಿ ಕೃತ್ಯಕ್ಕೆ ತಂತ್ರವನ್ನು ರೂಪಿಸಿದ್ದರು. ಹಸುವಿನ ತಲೆಯನ್ನು ತಂದು ಛಜಲೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡುವಂತೆ ಹೇಳಿದ್ದ. ಯಾರದೋ ಮನೆಯಿಂದ ಹಸುವನ್ನು ಕದ್ದು, ಅದನ್ನು ಕೊಂದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್‌ಎಸ್‌ಪಿ ಮೀನಾ ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸಿಸಿಟಿವಿ, ಮೊಬೈಲ್ ನೆಟ್‌ವರ್ಕ್‌ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಕೃತ್ಯವನ್ನು ಬಯಲು ಮಾಡಿದ್ದಾರೆ. ಮೊರಾದಾಬಾದ್ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120 ಬಿ(ಕ್ರಿಮಿನಲ್ ಪಿತೂರಿ), 211 , 380 457 ಮತ್ತು 411 ಮತ್ತು ಗೋಹತ್ಯೆ ಕಾಯಿದೆಯ ಸೆಕ್ಷನ್‌ಗಳಡಿಯಲ್ಲಿ ಕೇಸ್‌ ದಾಖಲಿಸಿದ್ದಾರೆ ಎಂದು ಮೀನಾ ಹೇಳಿದ್ದಾರೆ.

Previous Post
ಬಂಧನ ಪ್ರಶ್ನಿಸಿ ಹೇಮಂತ್ ಸೊರೆನ್ ಸುಪ್ರೀಂ ಮೊರೆ
Next Post
ಚಂಡೀಗಢ ಮೇಯರ್ ಚುನಾವಣೆ: ಸುಪ್ರೀಂ ಕದ ತಟ್ಟಿದ ಎಎಪಿ

Recent News