ಚಂದಾ ಕೊಚ್ಚರ್ ಬಂಧನ ‘ಅಕ್ರಮ’: ಹೈಕೋರ್ಟ್‌ ತೀರ್ಪು

ಚಂದಾ ಕೊಚ್ಚರ್ ಬಂಧನ ‘ಅಕ್ರಮ’: ಹೈಕೋರ್ಟ್‌ ತೀರ್ಪು

ನವದೆಹಲಿ, ಫೆ. 7: ವಿಡಿಯೋಕಾನ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರ ಬಂಧನವನ್ನು ಬಾಂಬೆ ಹೈಕೋರ್ಟ್ “ಅಕ್ರಮ” ಎಂದು ತೀರ್ಪು ನೀಡಿದೆ. ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಮತ್ತು ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ಅವರು ಅದೇ ನ್ಯಾಯಾಲಯದ ಹಿಂದಿನ ಆದೇಶವನ್ನು ಎತ್ತಿ ಹಿಡಿದಿದ್ದು, 2023ರ ಜನವರಿಯಲ್ಲಿ ನೀಡಿದ ಮಧ್ಯಂತರ ಆದೇಶದಲ್ಲಿ ಹೈಕೋರ್ಟ್ ಇಬ್ಬರಿಗೆ ಜಾಮೀನು ನೀಡಿತ್ತು.

ವಿಡಿಯೋಕಾನ್-ಐಸಿಐಸಿಐ ಬ್ಯಾಂಕ್ ಸಾಲ ಪ್ರಕರಣದಲ್ಲಿ ಡಿಸೆಂಬರ್ 2022ರಲ್ಲಿ ಸಿಬಿಐ ಕೊಚ್ಚರ್‌ ಅವರನ್ನು ಬಂಧಿಸಿತ್ತು. ಬಂಧನವನ್ನು ಪ್ರಶ್ನಿಸಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ನ್ಯಾಯಾಲಯದ ಮೊರೆ ಹೋಗಿದ್ದರು ಮತ್ತು ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಲು ಕೋರಿದ್ದರು. ಜನವರಿ 9, 2023ರಂದು ಹೈಕೋರ್ಟ್ ಈ ಕುರಿತು ಮಧ್ಯಂತರ ಆದೇಶವನ್ನು ನೀಡಿತ್ತು ಮತ್ತು ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಪ್ರಕರಣದಲ್ಲಿ ಕೊಚ್ಚರ್‌ ದಂಪತಿಗಳಲ್ಲದೆ, ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಕೂಡ ಸಿಬಿಐ ಬಂಧಿಸಿತ್ತು. ಅವರಿಗೂ 2023ರ ಜನವರಿಯಲ್ಲಿ ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಜಾಮೀನು ನೀಡಿತ್ತು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳು ಮತ್ತು ಖಾಸಗಿ ಸಾಲ ನೀತಿಯನ್ನು ಉಲ್ಲಂಘಿಸಿ, ಧೂತ್‌ ಅವರ ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂಬುದು ಕೊಚ್ಚರ್‌ಗಳ ವಿರುದ್ಧದ ಸಿಬಿಐ ಪ್ರಕರಣವಾಗಿದೆ.

2019ರಲ್ಲಿ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಸಿಬಿಐ ಚಂದಾ ಕೊಚ್ಚರ್‌, ದೀಪಕ್ ಕೊಚ್ಚರ್‌ ಮತ್ತು ಧೂತ್ ಜೊತೆಗೆ ದೀಪಕ್ ಕೊಚ್ಚರ್ ಅವರ ನುಪವರ್ ರಿನ್ಯೂಬಲ್ಸ್ (ಎನ್‌ಆರ್‌ಎಲ್), ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಆರೋಪಿಸಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಈ ಕುರಿತು ಎಫ್‌ಐಆರ್ ದಾಖಲಿಸಲಾಗಿತ್ತು.

2018ರಲ್ಲಿ ಈ ಬಗ್ಗೆ ತನಿಖೆ ಆರಂಭವಾಗಿದ್ದು, ಆ ಸಂದರ್ಭದಲ್ಲಿ ಚಂದಾ ಕೊಚ್ಚರ್‌ ಅವರು ಐಸಿಐಸಿಐ ನಿರ್ದೇಶಕಿ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಚಂದಾ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು. 2012ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ರೂಪಾಯಿ ಸಾಲ ಪಡೆದಿದ್ದರು, ಕೆಲ ತಿಂಗಳ ನಂತರ ವಿಡಿಯೋಕಾನ್ ಪ್ರವರ್ತಕ ವೇಣುಗೋಪಾಲ್ ಧೂತ್ ಅವರು ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಾಲಗಳನ್ನು ನಂತರ ಅನುತ್ಪಾದಕ ಆಸ್ತಿ (ಎನ್​ಪಿಎ) ಎಂದು ಘೋಷಿಸಲಾಗಿತ್ತು. ಇದರಿಂದ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು.

Previous Post
ಕೇಂದ್ರದ ವಿರುದ್ಧ ಇಂದು ಕೇರಳ ಪ್ರತಿಭಟನೆ: ತಮಿಳುನಾಡಿನ ಬೆಂಬಲ
Next Post
ಅಬಕಾರಿ ನೀತಿ ಹಗರಣ: ಕೇಜ್ರಿವಾಲ್‌ಗೆ ಕೋರ್ಟ್‌ ಸಮನ್ಸ್

Recent News