ಚುನಾವಣಾ ಆಯುಕ್ತರ ಕಾಯ್ದೆ ಜಾರಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

ಚುನಾವಣಾ ಆಯುಕ್ತರ ಕಾಯ್ದೆ ಜಾರಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಛೇರಿಯ ಅವಧಿ) ಕಾಯಿದೆ-2023ರ ಸೆಕ್ಷನ್ 7 ಮತ್ತು 8ರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಆದರೆ, ಕಾನೂನಿಗೆ ತಕ್ಷಣ ತಡೆ ನೀಡಲು ನಿರಾಕರಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆಗೊಂಡು, ಕಳೆದ ಡಿಸೆಂಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕುವ ಮೂಲಕ ಚುನಾವಣಾ ಆಯುಕ್ತರ ನೇಮಕಾತಿ, ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದೆ. ಇದರ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಂವಿಧಾನದ 32ನೇ ವಿಧಿ ಅಡಿಯಲ್ಲಿ ಮಧ್ಯಪ್ರದೇಶದ ಮಹಿಳಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಜಯಾ ಠಾಕೂರ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ವಿಚಾರಣೆ ನಡೆಸುತ್ತಿದೆ.

ನೂತನ ಕಾನೂನು, ಶಾಸಕಾಂಗ ಕ್ರಮದ ಮೂಲಕ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಕೈಬಿಟ್ಟಿದೆ.
ಅರ್ಜಿ ವಿಚಾರಣೆ ವೇಳೆ, ಠಾಕೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಈ ಕಾಯಿದೆಯು ನಮ್ಮ ಸಂವಿಧಾನದ ಮೂಲ ರಚನೆಯಾದ ಅಧಿಕಾರಗಳ ಪ್ರತ್ಯೇಕತೆಯ ಸಿದ್ಧಾಂತದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಹೊಸ ಕಾನೂನು ಸಂವಿಧಾನದ 14, 21, 50 ಮತ್ತು 324 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಜಯಾ ಠಾಕೂರ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಸ್ವತಂತ್ರ, ನಿಷ್ಪಕ್ಷಪಾತ ಆಯ್ಕೆ ಸಮಿತಿಯ ಅಗತ್ಯತೆಯಿದೆ. ಅದನ್ನು ರಚಿಸಲು ಮತ್ತು ನಿಯಂತ್ರಿಸಲು ಸಂಸತ್ ಕಾನೂನು ಜಾರಿಗೊಳಿಸುವವರೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಇರಲಿದ್ದಾರೆ ಎಂದು 2023ರ ಮಾರ್ಚ್‌ನಲ್ಲಿ ನ್ಯಾಯಮೂರ್ತಿ ಅನೂಪ್ ಬರನ್ವಾಲ್ ಹೇಳಿದ್ದರು.

Previous Post
ಮೈದಾನದಲ್ಲೇ ಗಿಲ್ ವಿರುದ್ಧ ಉಗ್ರರೂಪ ತಾಳಿದ ರೋಹಿತ್ ಶರ್ಮಾ
Next Post
ದೆಹಲಿಯಲ್ಲೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿ ಬಗ್ಗೆ ಚರ್ಚೆ?

Recent News